ಉಳ್ಳಾಲ: ರಸ್ತೆ ಅವ್ಯವಸ್ಥೆಯಿಂದಾಗಿ ಆಂಬ್ಯುಲೆನ್ಸ್ ಗ್ರಾಮಕ್ಕೆ ತಲುಪಲು ಸಾಧ್ಯವಾಗದೆ ಮಧ್ಯದಲ್ಲೇ ನಿಲ್ಲಬೇಕಾದ ಪರಿಣಾಮ, ತೀವ್ರ ಅಸ್ವಸ್ಥಗೊಂಡಿದ್ದ 85 ವರ್ಷದ ವೃದ್ಧೆಯನ್ನು ಆಟೋ ರಿಕ್ಷಾ ಮೂಲಕ ಆಂಬ್ಯುಲೆನ್ಸ್‌ವರೆಗೆ ಸಾಗಿಸಿದ ಘಟನೆ ಪಾವೂರು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯರ ಪ್ರಕಾರ ಈ ರಸ್ತೆಗೆ ಕೆಲ ಸಮಯದ ಹಿಂದೆ ಮಣ್ಣು ಹಾಕಲಾಗಿದ್ದು, ಅದನ್ನು ಸಮರ್ಪಕವಾಗಿ ಸಮತಟ್ಟುಗೊಳಿಸದ ಕಾರಣ ಮಳೆಗಾಲದಲ್ಲಿ ರಸ್ತೆ ಸಂಪೂರ್ಣ ಕೆಸರಿನಿಂದ ಕೂಡಿದೆ. ಇದರಿಂದ ವಾಹನ ಸಂಚಾರ ಮಾತ್ರವಲ್ಲದೆ ಪಾದಚಾರಿಗಳಿಗೂ ಓಡಾಡುವುದು ಕಷ್ಟಕರವಾಗಿದೆ.
ಈ ಕುರಿತು ಕಳೆದ ತಿಂಗಳೇ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸ್ಥಳೀಯರು ದೂರು ಸಲ್ಲಿಸಿದ್ದರು. ಬಳಿಕ ರಸ್ತೆಯ ಮೇಲಿದ್ದ ಮಣ್ಣಿನ ಒಂದು ಭಾಗವನ್ನು ತೆರವುಗೊಳಿಸಿದರೂ, ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ದುರಸ್ತಿಪಡಿಸದ ಹಿನ್ನೆಲೆಯಲ್ಲಿ ಇದೀಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.