ಜಾಮೀನು ಸಿಕ್ಕಿದ್ದಕ್ಕೆ ಗ್ಯಾಂಗ್ ರೇಪ್ ಆರೋಪಿಗಳ ರೋಡ್ ಶೋ

KannadaprabhaNewsNetwork |  
Published : May 24, 2025, 12:53 AM IST
22ಎಚ್‌ವಿಆರ್‌2, 2ಎ, 2ಬಿ | Kannada Prabha

ಸಾರಾಂಶ

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಹಾವೇರಿಯಿಂದ ಆರೋಪಿಗಳ ಸ್ವಗ್ರಾಮವಾದ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನವರೆಗೆ ಹಾಗೂ ಅಕ್ಕಿ ಆಲೂರಿನಲ್ಲಿ ಆರೋಪಿಗಳು ಮತ್ತು ಬೆಂಬಲಿಗರು ಕಾರು ಮತ್ತು ಬೈಕ್‌ಗಳಲ್ಲಿ ಸಂಭ್ರಮಾಚರಣೆ ಮಾಡಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಹಾವೇರಿ: ಹಾನಗಲ್ಲ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಜಾಮೀನು ಪಡೆದು ಏಳು ಆರೋಪಿಗಳು ತಮ್ಮ ಬೆಂಬಲಿಗರೊಂದಿಗೆ ಸೇರಿ ಹಾವೇರಿಯಿಂದ ಅಕ್ಕಿಆಲೂರಿನವರೆಗೆ ರೋಡ್‌ ಶೋ ನಡೆಸಿ ಸಂಭ್ರಮಿಸಿರುವ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿದೆ.

2024ರ ಜನವರಿಯಲ್ಲಿ ಹಾನಗಲ್ಲ ತಾಲೂಕಿನಲ್ಲಿ ಮಹಿಳೆಯೊಬ್ಬರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜೈಲುಪಾಲಾಗಿದ್ದ 19 ಜನರ ಪೈಕಿ 12 ಆರೋಪಿಗಳಿಗೆ ಈ ಹಿಂದೆಯೇ ಜಾಮೀನು ಸಿಕ್ಕಿತ್ತು. ಉಳಿದ 7 ಆರೋಪಿಗಳಿಗೆ ಮೇ 20ರಂದು ನ್ಯಾಯಾಲಯ ಜಾಮೀನು ನೀಡಿದೆ.

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಹಾವೇರಿಯಿಂದ ಆರೋಪಿಗಳ ಸ್ವಗ್ರಾಮವಾದ ಹಾನಗಲ್ಲ ತಾಲೂಕಿನ ಅಕ್ಕಿಆಲೂರಿನವರೆಗೆ ಹಾಗೂ ಅಕ್ಕಿ ಆಲೂರಿನಲ್ಲಿ ಆರೋಪಿಗಳು ಮತ್ತು ಬೆಂಬಲಿಗರು ಕಾರು ಮತ್ತು ಬೈಕ್‌ಗಳಲ್ಲಿ ಸಂಭ್ರಮಾಚರಣೆ ಮಾಡಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಗ್ಯಾಂಗ್‌ ರೇಪ್‌ ಆರೋಪಿಗಳ ಸಂಭ್ರಮಾಚರಣೆ ಕಂಡು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಾಯಿ ಲೋಗ್‌ ರಿಲೀಸ್‌.. ಎಂದು ವಾಹನದಲ್ಲಿ ಸ್ಲೋಗನ್ ಹಾಕಿಕೊಂಡು ಕಾರು ಮತ್ತು ಹತ್ತಾರು ಬೈಕ್‌ಗಳಲ್ಲಿ ಆರೋಪಿಗಳು ವಿಜಯೋತ್ಸವ ನಡೆಸಿರುವ ಹತ್ತಾರು ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿದೆ. ಇದು ಈಗ ಸಾರ್ವಜನಿಕರ ಆಕ್ರೋಶಕ್ಕೂ ಕಾರಣದ ಹಿನ್ನೆಲೆ ಪೊಲೀಸರು ಮತ್ತೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಏನಿದು ಪ್ರಕರಣ?: 2024ರ ಜ. 8ರಂದು ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್‌ನಲ್ಲಿರುವ ವಸತಿಗೃಹದಲ್ಲಿದ್ದ ಮಹಿಳೆಯೊಬ್ಬಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಆರಂಭದಲ್ಲಿ ನೈತಿಕ ಪೊಲೀಸ್‌ಗಿರಿ ಎಂದು ಕರೆಯಲಾಗಿದ್ದ ಕೇಸ್‌ ಗ್ಯಾಂಗ್‌ ರೇಪ್‌ ಪ್ರಕರಣ ಎಂಬುದು ದೃಢಪಟ್ಟಿತ್ತು. ಈ ಪ್ರಕರಣ ರಾಜ್ಯ ರಾಜಕೀಯದಲ್ಲೂ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.

ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ಸಂತ್ರಸ್ತ ಮಹಿಳೆ ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ನೀಡಿದ್ದಳು. ಪ್ರಕರಣದ ವಿಚಾರಣೆ ನಡೆಸಿದ್ದ ಹಾನಗಲ್ಲ ಪೊಲೀಸರು, ಒಟ್ಟು 19 ಆರೋಪಿಗಳನ್ನು ಬಂಧಿಸಿದ್ದರು. ಈ ಪೈಕಿ 12 ಆರೋಪಿಗಳು 10 ತಿಂಗಳ ಹಿಂದೆಯೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಆದರೆ ಉಳಿದ ಪ್ರಮುಖ 7 ಆರೋಪಿಗಳ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಹಲವು ಬಾರಿ ತಿರಸ್ಕರಿಸಿತ್ತು.ತನ್ನ ಮೇಲೆ 7 ಜನ ಗ್ಯಾಂಗ್‌ ರೇಪ್ ಮಾಡಿದ್ದಾರೆಂದು ಆರೋಪಿಸಿದ್ದ ಸಂತ್ರಸ್ತೆ, ಮ್ಯಾಜಿಸ್ಟ್ರೇಟ್ ಮುಂದೆ ನೀಡಿದ್ದ ಹೇಳಿಕೆಗಳನ್ನು ದೃಢೀಕರಿಸಲು ವಿಫಲವಾದ ಹಿನ್ನೆಲೆಯಲ್ಲಿ, ಈ ಆರೋಪಿಗಳಿಗೆ ಹಾವೇರಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಮೇ 20ರಂದು ಜಾಮೀನು ಮಂಜೂರು ಮಾಡಿತು. ನ್ಯಾಯಾಲಯದ ಆದೇಶದ ಬಳಿಕ ಎಲ್ಲ 7 ಆರೋಪಿಗಳನ್ನು ಹಾವೇರಿ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು. ಇದೇ ಸಂಭ್ರಮದಲ್ಲಿ ಆರೋಪಿಗಳು ವಿಯಜೋತ್ಸವ ನಡೆಸಿರುವುದು ಚರ್ಚೆಗೆ ಕಾರಣವಾಗಿದೆ.

ನಾಲ್ವರು ಆರೋಪಿಗಳು ಮತ್ತೆ ವಶಕ್ಕೆ

ಜಾಮೀನು ಸಿಕ್ಕ ಬಳಿಕ ವಿಜಯೋತ್ಸವ ನಡೆಸಿದ 7 ಆರೋಪಿಗಳ ಪೈಕಿ ಪೊಲೀಸರು ಶುಕ್ರವಾರ ನಾಲ್ಕರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣದಲ್ಲಿ ಎ 3 ಆರೋಪಿಯಾದ ಅಕ್ಕಿಆಲೂರಿನ ಸಮೀವುಲ್ಲಾ ಅಬ್ದುಲ್‌ವಾಹಿದ್‌ ಲಾಲಾನವರ, ಎ- 4 ಮಹಮ್ಮದ್ ಸಾದಿಕ್ ಬಾಬುಸಾಬ ಅಗಸಿಮನಿ, ಎ- 5 ಶೋಹೀಬ್‌ ನಿಯಾಜಅಹ್ಮದ್‌ ಮುಲ್ಲಾ ಹಾಗೂ ಎ- 7 ರಿಯಾಜ್‌ ಅಬ್ದುಲ್‌ರಫೀಕ್‌ ಸಾವಿಕೇರಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಮೂವರು ಆರೋಪಿಗಳು ಹಾಗೂ ಬೆಂಬಲಿಗರ ಹುಡುಕಾಟ ನಡೆಸಿದ್ದಾರೆ.

ನ್ಯಾಯಾಲಯಕ್ಕೆ ಅರ್ಜಿ: ಹಾನಗಲ್ಲ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಜಾಮೀನು ಪಡೆದ 7 ಆರೋಪಿಗಳು ಜೈಲಿನಿಂದ ಅಕ್ಕಿಆಲೂರಿನವರೆಗೆ ಮತ್ತು ಅಕ್ಕಿಆಲೂರಿನಲ್ಲಿ ಕಾರು ಮತ್ತು ಬೈಕ್‌ಗಳಲ್ಲಿ ವಿಜಯೋತ್ಸವ ಮಾಡಿದ್ದಾರೆ ಎಂಬ ಕುರಿತ ವಿಡಿಯೋ ಹರಿದಾಡುತ್ತಿದೆ. ವಿಜಯೋತ್ಸವ ಮಾಡಿದ 7 ಆರೋಪಿಗಳ ಮೇಲೆ ಈಗಾಗಲೇ ಹಾನಗಲ್ಲ ಠಾಣೆಯಲ್ಲಿ ರೌಡಿಶೀಟರ್‌ ತೆರೆಯಲಾಗಿದೆ. ಈ ಆರೋಪಿಗಳ ಜಾಮೀನು ರದ್ದು ಮಾಡುವಂತೆ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ಇವರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಮುಂದಿನ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ವಿಜಯೋತ್ಸವ ನಡೆಸಿದ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಅಂಶುಕುಮಾರ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ