ಬೆಳ್ಳಿಲೋಟ ನೆಪದಲ್ಲಿ ₹1.13 ಕೋಟಿ ಚಿನ್ನ ಕದ್ದ ಕಳ್ಳಿಯರು!

KannadaprabhaNewsNetwork |  
Published : Apr 04, 2025, 12:47 AM IST
3ಕೆಡಿವಿಜಿ9, 10-ದಾವಣಗೆರೆ ಮಂಡಿಪೇಟೆಯ ರವಿ ಜ್ಯುಯಲರ್ಸ್‌ನಲ್ಲಿ ಬುರ್ಖಾದಾರಿ ಐವರು ಚಾಲಾಕಿ ಕಳ್ಳಿಯರು ಬೆಳ್ಳಿ ಲೋಟ ಖರೀದಿ ನೆಪದಲ್ಲಿ ಬಂದಿದ್ದು, ಆಗ ಓರ್ವ ಚಾಲಾಕಿ ಕಳ್ಳಿಯು 1.13 ಕೋಟಿ ಮೌಲ್ಯದ ಚಿನ್ನದ ಸರ, ಕಿವಿಯೋಲೆ, ಜುಮುಕಿ ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. | Kannada Prabha

ಸಾರಾಂಶ

ಬೆಳ್ಳಿಲೋಟ ಖರೀದಿಸುವ ನೆಪದಲ್ಲಿ ಚಿನ್ನಾಭರಣ ಅಂಗಡಿಗೆ ಬಂದ ಐವರು ಕಳ್ಳಿಯರ ಗುಂಪು ಬರೋಬ್ಬರಿ ₹1.13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ನಗರದ ಮಂಡಿಪೇಟೆಯಲ್ಲಿ ನಡೆದಿದೆ.

- ಐವರು ಬುರ್ಖಾಧಾರಿಗಳ ಪತ್ತೆಗೆ ದಾವಣಗೆರೆ ಬಸವ ನಗರ ಪೊಲೀಸರು ಚುರುಕು

-ನ್ಯಾಮತಿ ಬ್ಯಾಂಕ್ ದರೋಡೆ ಪ್ರಕರಣ ಬೇಧಿಸಿದ್ದ ಪೊಲೀಸರಿಗೆ ಮತ್ತೊಂದು ಸವಾಲು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಳ್ಳಿಲೋಟ ಖರೀದಿಸುವ ನೆಪದಲ್ಲಿ ಚಿನ್ನಾಭರಣ ಅಂಗಡಿಗೆ ಬಂದ ಐವರು ಕಳ್ಳಿಯರ ಗುಂಪು ಬರೋಬ್ಬರಿ ₹1.13 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದ ಘಟನೆ ನಗರದ ಮಂಡಿಪೇಟೆಯಲ್ಲಿ ನಡೆದಿದೆ.

ನಗರದ ಮಂಡಿಪೇಟೆಯ ರವಿ ಜ್ಯುವೆಲ್ಲರ್ ಶಾಪ್‌ನಲ್ಲಿ ಬೆಳ್ಳಿಲೋಟ ಖರೀದಿ ನೆಪದಲ್ಲಿ ಐವರು ಬುರ್ಖಾಧಾರಿ ಮಹಿಳೆಯರು ಬಂದಿದ್ದಾರೆ. ಅಂಗಡಿ ಕೆಲಸಗಾರರು ಬೆಳ್ಳಿಲೋಟಗಳನ್ನು ತೋರಿಸುತ್ತಿದ್ದ ವೇಳೆ ಓರ್ವ ಮಹಿಳೆ ₹1.13 ಕೋಟಿ ಮೌಲ್ಯದ ಚಿನ್ನದ ಸರಗಳು, ಕಿವಿಯೋಲೆ, ಜುಮುಕಿಗಳಿದ್ದ ಬಾಕ್ಸ್‌ಗಳನ್ನು ಅತ್ಯಂತ ಚಾಲಾಕಿತನದಿಂದ ಎತ್ತಿಕೊಂಡು, ತನ್ನ ಬುರ್ಖಾದೊಳಗೆ ಹಾಕಿಕೊಂಡಿದ್ದಾಳೆ. ಬಳಿಕ ಅಂಗಡಿಯಿಂದ ಕಾಲ್ಕಿತ್ತಿದ್ದಾರೆ.

ಅಂಗಡಿಯವರಿಗೆ ಚಿನ್ನದ ಆಭರಣ, ಕಿವಿಯೋಲೆ, ಜುಮುಕಿಗಳಿದ್ದ ಬಾಕ್ಸ್‌ಗಳು ಕಳುವಾದ ವಿಚಾರ ಗೊತ್ತಾಗಿದೆ. ತಕ್ಷಣವೇ ಅಂಗಡಿಯ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆಗ ಬುರ್ಖಾ ಧರಿಸಿ ಬಂದಿದ್ದ ಐವರು ಮಹಿಳೆಯರ ಪೈಕಿ ಓರ್ವಳು ಚಿನ್ನಾಭರಣಗಳ ಬಾಕ್ಸ್‌ಗಳನ್ನು ತನ್ನ ಬುರ್ಕಾದಲ್ಲಿ ಬಚ್ಚಿಟ್ಟುಕೊಳ್ಳುವುದು ಕಂಡುಬಂದಿದೆ.

ಚಿನ್ನಾಭರಣ ಅಂಗಡಿ ಮಾಲೀಕರು ಕೂಡಲೇ ಬಸವ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಲಾಕಿ ಬುರ್ಕಾಧಾರಿ ಕಳ್ಳಿಯರ ಗ್ಯಾಂಗ್‌ಗಾಗಿ ಶೋಧ ನಡೆಸುತ್ತಿದ್ದಾರೆ.

ನ್ಯಾಮತಿ ಎಸ್‌ಬಿಐ ಬ್ಯಾಂಕ್ ದರೋಡೆ ಪ್ರಕರಣ ಭೇದಿಸಿ, ನಿರಾಳರಾಗುವ ಮೊದಲೇ ದಾವಣಗೆರೆ ಜಿಲ್ಲಾ ಪೊಲೀಸರಿಗೆ ಈಗ ಬುರ್ಕಾಧಾರಿ ಕಳ್ಳಿಯರ ಹಿಡಿಯುವ ಸವಾಲು ಎದುರಾಗಿದೆ.

- - -

-3ಕೆಡಿವಿಜಿ9, 10:

ದಾವಣಗೆರೆ ಮಂಡಿ ಪೇಟೆಯ ರವಿ ಜ್ಯುಯಲರ್ಸ್‌ನಲ್ಲಿ ಚಿನ್ನಾಭರಣಗಳ ಬಾಕ್ಸ್‌ ಕದಿಯುತ್ತಿರುವ ಬುರ್ಖಾಧಾರಿ ಕಳ್ಳಿ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ