ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಚಿಕ್ಕಮಗಳೂರಿನ ಎನ್.ಆರ್.ಪುರದ ಮಾಗುಂಡಿ ನಿವಾಸಿ ಮಸೂದ್ ಯಾನೆ ಮಸೂರ ಬಂಧಿತ ಆರೋಪಿ. ಈತ ಮತ್ತು ಇತರ ಮೂರು ಮಂದಿಯೊಂದಿಗೆ 2006 ರ ಜುಲೈ 26ರಂದು ಕೌಕ್ರಾಡಿ ಎಂಬಲ್ಲಿ ವೈದ್ಯಕೀಯ ವೃತ್ತಿ ಮಾಡುತ್ತಿದ್ದ ಶಿವಶಂಕರ್ ಶಾಸ್ತ್ರಿ ಎಂಬವರ ಮನೆಗೆ ಚಿಕಿತ್ಸೆ ಪಡೆಯುವ ನೆಪದಲ್ಲಿ ಬಂದು ಮನೆಯಲ್ಲಿದ್ದ ಶಿವಶಂಕರ್ ಶಾಸ್ತ್ರಿ ಹಾಗೂ ಅವರ ಪತ್ನಿಯನ್ನು ಕಟ್ಟಿಹಾಕಿ ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 2, 35, 800 ಮೌಲ್ಯದ ಸೊತ್ತುಗಳನ್ನು ಸುಲಿಗೆ ಮಾಡಿದ್ದು, ಈತನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರಿಂದ ಬಂಧಿತನಾಗಿದ್ದ ಈತನಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2008 ರಲ್ಲಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಬಗ್ಗೆ ಈತ ರಾಜ್ಯ ಉಚ್ಚನ್ಯಾಯಾಲಯಕ್ಕೆ ಅಪೀಲು ಹೋಗಿದ್ದು, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ರಾಜ್ಯ ಉಚ್ಚನ್ಯಾಯಾಲಯದ ಆದೇಶದ ಮೇರೆಗೆ ಈತನನ್ನು ಸಿಪಿಐ ನಾಗರಾಜ್ ಹೆಚ್.ಇ. ಅವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ. ನೇತೃತ್ವದಲ್ಲಿ ಹೆಡ್ ಕಾನ್ಸ್ಟೇಬಲ್ ನಂಜುಂಡಯ್ಯ, ಮತ್ತು ಪಿ.ಸಿ. ಮ್ಯಾಥ್ಯೂಸ್ ಅವರು ಚಿಕ್ಕಮಗಳೂರಿನ ಎನ್.ಪುರದಿಂದ ಬಂಧಿಸಿ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.