ಕಳೆದ ಜೂನ್ ತಿಂಗಳ ೨೩ರಂದು ಬೆಂಗಳೂರು ರಸ್ತೆಯ ಸಿದ್ದಾಪುರ ಗ್ರಾಮ ವ್ಯಾಪ್ತಿಯ ಸಣ್ಣಲಿಂಗಪ್ಪ ಬಡಾವಣೆಯ ಶಿಕ್ಷಕ ಬಿ.ಈರಣ್ಣ ಅವರ ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ಹಣ, ಒಡವೆ ದೋಚಿ ಕಳ್ಳರು ಪರಾರಿಯಾಗಿದ್ದರು. ಈ ಘಟನೆ ಬೆನ್ನಲ್ಲೇ ತಾಲೂಕಿನ ತಳಕು ಠಾಣೆಯ ಹಿರೇಹಳ್ಳಿ ಗ್ರಾಮದಲ್ಲೂ ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ಹಣ, ಒಡವೆಗಳನ್ನು ಮೋಟಾರ್ ಬೈಕ್‌ನಲ್ಲಿ ಬಂದ ಮೂವರು ದರೋಡೆಕೋರರು ಕಳ್ಳತನ ಮಾಡಿ ಪರಾರಿಯಾಗಿದ್ದರು. ಇದೀಗ ಚಳ್ಳಕೆರೆ ಠಾಣಾ ವ್ಯಾಪ್ತಿಯ ಬಾಲೇನಹಳ್ಳಿ, ಚಿಕ್ಕಮಧುರೆಯ ಕುಂಟಹಳ್ಳದ ಸೇತುವೆ ಬಳಿ ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ರೈತ ಮಹಿಳೆಯ ಕತ್ತಿನಲ್ಲಿದ್ದ ೧.೫೦ ಲಕ್ಷ ಮೌಲ್ಯದ ಚಿನ್ನದ ಸರವನ್ನು ಬೈಕ್‌ನಲ್ಲಿ ಬಂದ ಸವಾರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬಾಲೇನಹಳ್ಳಿಯ ಬಸಮ್ಮ(೭೦) ಎಂಬ ವೃದ್ದೆ ತಮ್ಮ ಬಾಬ್ತು ಜಮೀನಿಗೆ ಭೇಟಿ ನೀಡಿ ಬುಧವಾರ ಮಧ್ಯಾಹ್ನ ೧.೩೦ರ ವೇಳೆ ವಾಪಾಸ್ ಆಗುವಾಗ ಕೆಂಪುಬಣ್ಣದ ಮೋಟಾರ್ ಬೈಕ್‌ನಲ್ಲಿ ಬಂದ ವ್ಯಕ್ತಿ ಕೊರಳಲ್ಲಿದ್ದ ೪೦ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಚಿಕ್ಕಮಧುರೆ ಕಡೆ ಪರಾರಿಯಾಗಿದ್ಧಾನೆ. ಘಟನೆ ನಡೆದ ಸ್ಥಳಕ್ಕೆ ಪಿಎಸ್‌ಐ ಜೆ.ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
-----
ಪೋಟೋ: ೧೧ಸಿಎಲ್‌ಕೆ೪
ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿ ಚಿಕ್ಕಮಧುರೆಯ ಕುಂಟಹಳ್ಳದ ಸೇತುವೆ ಬಳಿ ವೃದ್ಧೆಯ ಸರ ಕಿತ್ತು ಪರಾರಿಯಾದ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.