ಮುಂಡರಗಿ: ಗ್ರಾಮೀಣಾಭಿವೃದ್ಧಿಗಾಗಿ ರೈತರಿಗೆ ಸಾಲ ಪೂರೈಸುವಲ್ಲಿ ಪ್ರಾಥಮಿಕ ಸಹಕಾರಿ ಸಂಘಗಳು, ತಾಲೂಕು ಮಟ್ಟದ ಸಹಕಾರಿ ಬ್ಯಾಂಕುಗಳು ಹಾಗೂ ಜಿಲ್ಲಾ ಮಟ್ಟದ ಸಹಕಾರಿ ಬ್ಯಾಂಕುಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮುಂಡರಗಿ ಕೆಸಿಸಿ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಎಸ್.ವಿ. ಪಾಟೀಲ ಹೇಳಿದರು.
1904ರ ಸಹಕಾರಿ ಕಾಯ್ದೆಗೆ ಅನುಗುಣವಾಗಿ 1905ರಲ್ಲಿ ಏಷ್ಯಾಖಂಡದಲ್ಲಿಯೆ ಮೊಟ್ಟಮೊದಲ ಸಹಕಾರಿ ಬ್ಯಾಂಕ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸಿದ್ದರಾಮನಗೌಡ ಸಣ್ಣರಾಮಣಗೌಡ ಪಾಟೀಲ ಅವರಿಂದ ಆರಂಭವಾಯಿತು. ಇಂದು ಸಹಕಾರಿ ಬ್ಯಾಂಕುಗಳು ದೇಶದ ತುಂಬೆಲ್ಲ ರೈತರಿಗೆ ಸಣ್ಣ ಪ್ರಮಾಣದ ಮತ್ತು ಮಧ್ಯಮ ಪ್ರಮಾಣದ ಸಾಲಗಳನ್ನು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಪೂರೈಸುತ್ತಿವೆ ಎಂದರು.
ಬ್ಯಾಂಕ್ ಸಿಬ್ಬಂದಿ ಹೀನಾ ಕೌಸರ್ ಮಾತನಾಡಿ, ಬ್ಯಾಂಕಿನಲ್ಲಿ ಸಾರ್ವಜನಿಕರು ಹೇಗೆ ಠೇವಣಿ ಮಾಡುತ್ತಾರೆ? ಯಾವ್ಯಾವ ಪ್ರಕಾರದ ಠೇವಣಿಗಳು ಇರುತ್ತವೆ? ಅದಕ್ಕೆ ಎಷ್ಟು ಬಡ್ಡಿದರ ವಿಧಿಸಲಾಗುತ್ತದೆ? ಎಂಬುದನ್ನು ಹಾಗೂ ವಾಣಿಜ್ಯ ಬ್ಯಾಂಕುಗಳಿಗೂ ಮತ್ತು ಸಹಕಾರಿ ಬ್ಯಾಂಕುಗಳಿಗೆ ಇರುವ ಸಂಬಂಧ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ತಿಳಿಸಿಕೊಟ್ಟರು.ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಬಿ. ಕೂಗು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಬ್ಯಾಂಕು ಸಾರ್ವಜನಿಕರೊಂದಿಗೆ ಸಹಕಾರ ವಲಯದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಮಾಹಿತಿ ನೀಡಿದರು.
ಬ್ಯಾಂಕಿನ ಸಿಬ್ಬಂದಿ ಕೆ.ಬಿ. ದೊಡ್ಡಮನಿ, ಎಂ.ಎಸ್. ಸುರಕೋಡ, ಎಚ್.ಎ. ಅಳವಂಡಿ, ಎಂ.ಜೆ. ನಮಾಜಿ, ರಮ್ಯಾ ಎಸ್.ಎಂ., ಎನ್.ಎಸ್. ಚವ್ಹಾಣ, ಎಸ್.ಆರ್. ಕೊಪ್ಪಳ ಪಾಲ್ಗೊಂಡಿದ್ದರು. ಡಾ. ಆರ್.ಎಚ್. ಜಂಗನವಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಟೆಪ್ಪ ಗುಂಡಿಕೇರಿ ವಂದಿಸಿದರು.