ಕನ್ನಡಪ್ರಭ ವಾರ್ತೆ ಮೈಸೂರು
ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ವಿಮಾ ಕಂಪನಿಗಳು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿವೆ ಹಾಗೂ ಸಾಮಾಜಿಕ ಸೇವಾ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿವೆ. ಸಾಮಾಜಿಕ ಭದ್ರತೆಯನ್ನು ಒದಗಿಸುವಲ್ಲಿ ವಿಮಾ ಕಂಪನಿಗಳ ಪಾತ್ರ ಮಹತ್ವವಾದದ್ದು ಎಂದು ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಎನ್. ನಾಗರಾಜ ತಿಳಿಸಿದರು.ನಗರದ ಸರಸ್ವತಿಪುರಂ ಜೆಎಸ್ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ವಾಣಿಜ್ಯಶಾಸ್ತ್ರ ಮತ್ತು ನಿರ್ವಹಣಾ ವಿಭಾಗವು ಭಾರತೀಯ ಜೀವ ವಿಮಾ ನಿಗಮ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತರ್ಗತ ವಿಮೆ- 2047ರ ದೃಷ್ಟಿಕೋನ ಮತ್ತು ಸಾರ್ವತ್ರಿಕ ಸಾಮಾಜಿಕ ಭದ್ರತೆಯ ಅಗತ್ಯ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ವಿಮಾ ಕಂಪನಿಗಳ ಮತ್ತು ಸೌಲಭ್ಯಗಳ ಬಗ್ಗೆ ಸಾಕಷ್ಟು ಜನರಿಗೆ ಹೆಚ್ಚಿನ ಅರಿವು ಇರುವುದಿಲ್ಲ. ಆ ಕಾರಣ ವಿಮಾ ಕಂಪನಿಗಳು ಉಪಯುಕ್ತ ಮಾಹಿತಿ ನೀಡುತ್ತಾ ಬಂದಿವೆ. ಭಾರತ ದೇಶ ಕೃಷಿ ಅವಲಂಬಿತ ಕ್ಷೇತ್ರ, ಇಲ್ಲಿನ ಕೃಷಿಕರಿಗೆ ಬೆಳೆ ವಿಮೆ, ಜಾನುವಾರುಗಳ ವಿಮೆ, ಆರೋಗ್ಯ ವಿಮೆ, ಅಪಘಾತ ವಿಮೆ ಮುಂತಾದ ಸೌಲಭ್ಯಗಳನ್ನು ವಿಮಾ ಕಂಪನಿಗಳು ನೀಡುತ್ತಾ ಬಂದಿವೆ ಎಂದರು.ವಿಮೆ ಮೇಲಿನ ಜಿಎಸ್ಟಿ ತೆಗೆಯಬೇಕು:
ಎಐಐಇಎ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್ ಮಾತನಾಡಿ, ಪ್ರಪಂಚದಲ್ಲಿ ಜೀವವಿಮೆ ಕಂಪನಿಯು 6ನೇ ಸ್ಥಾನದಲ್ಲಿದ್ದು ಶ್ರೇಷ್ಠತೆಯನ್ನು ಹೊಂದಿದೆ. ಭಾರತದಲ್ಲಿ ಬೇರೆ ವಲಯಗಳಿಗಿಂತ ಹೆಚ್ಚು ಜನಕ್ಕೆ ಉದ್ಯೋಗಾವಕಾಶವನ್ನು ಒದಗಿಸಿದೆ. ಜೀವ ವಿಮಾ ಕಂಪನಿಯು ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಕೋರ್ಸ್ ಗಳನ್ನು ಪ್ರಾರಂಭಿಸಿದೆ. ಇದರಿಂದ ಉದ್ಯೋಗ ಪಡೆಯಲು ಸಹಕಾರಿಯಾಗಿದೆ. ಸರ್ಕಾರವು ವಿಮೆಯ ಮೇಲಿನ ಜಿಎಸ್ಟಿ ತೆರಿಗೆ ತೆಗೆಯಬೇಕಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ, ಪ್ರತಿಯೊಬ್ಬರೂ ಜೀವ ವಿಮೆಯನ್ನು ಹೊಂದಬೇಕಾದ ಅಗತ್ಯತೆಯಿದೆ. ಜೀವವಿಮೆ ಮನುಷ್ಯಪರ ಕಾಳಜಿಯಾಗಿದ್ದು, ತಾತ್ವಿಕತೆಯ ಆಯಾಮವು ಆಗಿದೆ. ವರ್ತಮಾನದ ಸಂದರ್ಭದಲ್ಲಿ ಜೀವ ವಿಮೆಯು ನಿಜಕ್ಕೂ ದಾರಿದೀಪವಾಗಿದೆ. ಜೀವ ವಿಮಾ ಪ್ರತಿನಿಧಿಗಳಿಗೆ ನಾವು ಸದಾ ಋಣಿಗಳಾಗಿರಬೇಕು ಎಂದರು.
ಮೈಸೂರು ಜೀವ ವಿಮಾ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್. ಶ್ರೀಧರ್, ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿ. ಗಂಗಾಧರಸ್ವಾಮಿ ಇದ್ದರು. ವಿದ್ಯಾ ಮತ್ತು ವೃಂದದವರು ಪ್ರಾರ್ಥಿಸಿದರು. ಅನನ್ಯ ಸ್ವಾಗತಿಸಿದರು. ಕೆ. ಭೂಮಿಕಾ ವಂದಿಸಿದರು. ಸನಾ ಫಾತಿಮಾ ನಿರೂಪಿಸಿದರು.ನಂತರ ನಡೆದ ಎರಡು ಗೋಷ್ಠಿಗಳಲ್ಲಿ ರಸ್ತೆ ಸುರಕ್ಷತೆಯನ್ನು ಸಾಧಿಸುವಲ್ಲಿ ವಿಮೆಯ ಪಾತ್ರ ಕುರಿತು ಡಾ.ಎಸ್.ಡಿ. ದಿಲೀಪ್ ಕುಮಾರ್ ಹಾಗೂ 2047ರ ವಿಮೆಯ ವಿಷನ್ ಕುರಿತು ವಿ. ಸತ್ಯಕುಮಾರ್ ವಿಚಾರ ಮಂಡಿಸಿದರು.