ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖ: ಅಬ್ದುಲ್ ರಹಿಮಾನ್ ನಂದಗಡಿ

KannadaprabhaNewsNetwork |  
Published : Jul 05, 2024, 12:46 AM IST
ಸ | Kannada Prabha

ಸಾರಾಂಶ

ಪೊಲೀಸ್ ಅಧಿಕಾರಿ, ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು.

ಹೊಸಪೇಟೆ: ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ೩ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಬ್ದುಲ್ ರಹಿಮಾನ್ ನಂದಗಡಿ ಸಲಹೆ ನೀಡಿದರು.

ನಗರದ ತಾಲೂಕು ನ್ಯಾಯಾಲಯದ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಪ್ರಯುಕ್ತ ಗುರುವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಲೋಕ ಅದಾಲತ್‌ನಲ್ಲಿ ಪೊಲೀಸ್ ಇಲಾಖೆಯ ಪ್ರಕರಣಗಳು ಸಹ ಇತ್ಯರ್ಥವಾಗಬೇಕು. ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳು ಇಳಿಮುಖವಾಗಲು ಪೊಲೀಸ್ ಇಲಾಖೆಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ಮತ್ತು ಸಮನ್ವಯ ಅಗತ್ಯವಾಗಿದೆ ಎಂದರು.

ಜಿಲ್ಲೆಯಲ್ಲಿ ಎಸ್ಪಿ ನೇತೃತ್ವದಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್ಪಿ ಶ್ರೀಹರಿ ಬಾಬು ಬಿ.ಎಲ್. ಮಾತನಾಡಿ, ಲೋಕ್ ಅದಾಲತ್‌ನಲ್ಲಿ ಗೌರವಾನ್ವಿತ ನ್ಯಾಯಾಧೀಶರ ಸೂಚನೆಗಳನ್ನು ಪಾಲಿಸಿ, ಬಾಕಿ ಉಳಿದ ಪೊಲೀಸ್ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿ ಶ್ರಮ ವಹಿಸಲಾಗುವುದು. ಕಾನೂನು ಸುವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಕಾಪಾಡುವಲ್ಲಿ ಇಡೀ ರಾಜ್ಯದಲ್ಲಿಯೇ ವಿಜಯನಗರ ಜಿಲ್ಲೆಯು ೪ನೇ ಸ್ಥಾನದಲ್ಲಿದೆ ಎಂದರು.

ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಶಾಂತ ನಾಗಲಾಪುರ ಮಾತನಾಡಿದರು.

ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ಹೇಮಲತಾ ಬಿ. ಹುಲ್ಲೂರು, ಗೌರವಾನ್ವಿತ ಅಪರ ಹಿರಿಯ ಸಿವಿಲ್ ಹಾಗೂ ಜೆಎಂಎಫ್.ಸಿ ನ್ಯಾಯಾಧೀಶರಾದ ರಮೇಶ್ ಬಾಬು ಬಿ.ಎನ್., ಗೌರವಾನ್ವಿತ ಪ್ರಧಾನ ಸಿವಿಲ್ ಹಾಗೂ ಗೌರವಾನ್ವಿತ ಅಪರ ಸಿವಿಲ್ ಹಾಗೂ ಜೆ.ಎಂ.ಎಫ್ ನ್ಯಾಯಾಧೀಶರಾದ ಅಶೋಕ ಆರ್.ಎಚ್, ಗೌರವಾನ್ವಿತ ೨ನೇ ಅಪರ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಸಂಜೀವಕುಮಾರ.ಜಿ ಮತ್ತು ೩ನೇ ಅಪರ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಚೈತ್ರ.ಜೆ, ಸಹಾಯಕ ಅಭಿಯೋಜಕ ರೇವಣಸಿದ್ದಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಲಿಮ್ ಪಾಷಾ, ತಾಲೂಕು ಕಾನೂನು ಸೇವಾ ಸಮಿತಿಯ ಸಹಾಯಕ ಎಸ್.ಬಿ.ಕಮತಗಿ ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ