ಸಮಾಜ ರಕ್ಷಣೆಯಲ್ಲಿ ಪೊಲೀಸರ ಪಾತ್ರ ಪ್ರಮುಖ: ಡಿಸಿ ವೆಂಕಟ್‌ ರಾಜಾ

KannadaprabhaNewsNetwork | Published : Oct 22, 2024 12:14 AM

ಸಾರಾಂಶ

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಪೊಲೀಸ್ ಹುತಾತ್ಮರ ದಿನಾಚರಣೆ: ಶ್ರದ್ಧಾಂಜಲಿ ಅರ್ಪಣೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ಪೊಲೀಸರ ಕರ್ತವ್ಯ ನಿಷ್ಠೆಯನ್ನು ಸದಾ ಸ್ಮರಿಸುವಂತಾಗಬೇಕು. ಸಮಾಜ ರಕ್ಷಣೆ ಮಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾಗಿದೆ. ಸಮಾಜದ ಸಮಗ್ರ ಸುರಕ್ಷತೆ ಹಾಗೂ ಭದ್ರತೆಗಾಗಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಸ್ಮರಣಾರ್ಹ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದರು.ದೇಶದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಆಸ್ತಿ ರಕ್ಷಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಆಯೋಜಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಡಿವೈಎಸ್‌ಪಿಗಳ ಪರವಾಗಿ ಮೋಹನ್ ಕುಮಾರ್, ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಪೊಲೀಸ್ ನಿರೀಕ್ಷಕ ಚೆನ್ನನಾಯಕ, ವೈಯರ್‌ಲೆಸ್ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್‌ ಆನಂದ್, ಮಾಜಿ ಸೈನಿಕರ ಪರವಾಗಿ ಏರ್‌ಮಾರ್ಷಲ್(ನಿವೃತ್ತ) ಕೆ.ಸಿ.ಕಾರ್ಯಪ್ಪ, ನಿವೃತ್ತ ಡಿವೈಎಸ್‌ಪಿಗಳ ಪರವಾಗಿ ಬಿ.ಎಂ.ಕುಶಾಲಪ್ಪ, ಪೊಲೀಸ್ ನಿರೀಕ್ಷಕರ ಪರವಾಗಿ ಐ.ಪಿ.ಮೇದಪ್ಪ, ಬ್ಯಾಂಡ್ ಮಾಸ್ಟರ್ ಸಿದ್ದೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ವಕೀಲರ ಸಂಘದ ಪರವಾಗಿ ನಿರಂಜನ, ಕೊಡವ ಸಮಾಜಗಳ ಪರವಾಗಿ ಮುತ್ತಪ್ಪ, ಗೌಡ ಸಮಾಜಗಳ ಪರವಾಗಿ ಸೂರ್ತಲೆ ಸೋಮಣ್ಣ, ರೋಟರಿಗಳ ಪರವಾಗಿ ಸುಬ್ರಮಣಿ, ಲಯನ್ಸ್ ಪರವಾಗಿ ಅಂಬೆಕಲ್ಲು ನವೀನ್, ಸುದಯ್ ನಾಣಯ್ಯ ಇತರರು ಸೇರಿದಂತೆ ಹಲವರು ಹುತಾತ್ಮ ಪೊಲೀಸ್ ಸ್ಮಾರಕಕ್ಕೆ ಹೂಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು 2023-24ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳ ಹೆಸರು ಓದಿದರು. ಕರ್ನಾಟಕ ರಾಜ್ಯ ಐವರು ಸೇರಿದಂತೆ ಒಟ್ಟು ದೇಶದಲ್ಲಿ 216 ಮಂದಿ ಹುತಾತ್ಮರಾಗಿರುವ ಪೊಲೀಸರ ಹೆಸರನ್ನು ಓದಿದರು.ಪೊಲೀಸ್ ಕವಾಯತು ಸಿಬ್ಬಂದಿ ಮೂರು ಸುತ್ತು ವಾಲಿ ಫೈರಿಂಗ್ ನಡೆಸಿದರು. ಈ ಸಂದರ್ಭ ಗಣ್ಯರು ಸೇರಿದಂತೆ ಎಲ್ಲರೂ ಎದ್ದು ನಿಂತು ಗೌರವ ವಂದನೆ ಸಲ್ಲಿಸಿದರು.ಹುತಾತ್ಮರ ಸ್ಮರಣಾರ್ಥ ಎಲ್ಲರೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿದರು. ಬಳಿಕ ರಿವಾಲಿ ಕವಾಯತು ಸಿಬ್ಬಂದಿ ವಂದಿಸಿದರು. ಎಲ್ಲರೂ ಎದ್ದು ನಿಂತು ಗೌರವ ವಂದನೆ ಸಲ್ಲಿಸಿದರು. ಸಿದ್ದೇಶ್ ತಂಡದವರು ವಾದ್ಯದೊಂದಿಗೆ ರಾಷ್ಟ್ರಗೀತೆ ನುಡಿಸಿದರು.ಪೊಲೀಸ್ ಮುಖ್ಯ ಕಾಬೀಲರಾದ ಎಂ.ಇ. ಫಾರೂಕ್ ಮತ್ತು ಎಂ.ಎಸ್.ಲೋಕೇಶ್ ನಿರೂಪಿಸಿ, ವಂದಿಸಿದರು.

Share this article