ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ದಿನದ 24 ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ಕರ್ತವ್ಯ ನಿರ್ವಹಿಸಿ, ಸಾರ್ವಜನಿಕರ ರಕ್ಷಣೆ ಮತ್ತು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಅಪಾರವಾದದ್ದು ಎಂದು ನಿವೃತ್ತ ಹೆಚ್ಚು ಪೊಲೀಸ್ ಅಧಿಕ್ಷಕರಾದ ಎಂ.ಎಂ. ಯೋಗೇಂದ್ರನಾಥ ಹೇಳಿದರು.ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮಂಗಳವಾರ ನಗರದ ರಾಮನಹಳ್ಳಿ ಪೊಲೀಸ್ ಕವಾಯತ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪೊಲೀಸ್ ಅಧಿಕಾರಿಗಳ ಹಾಗೂ ಸಿಬ್ಬಂದಿ ಕಲ್ಯಾಣಕ್ಕಾಗಿ ಪೊಲೀಸರಿಗೆ ಸಹಕಾರ ನೀಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಪೊಲೀಸ್ ಇಲಾಖೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರು ದಿನ 24 ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಆಸ್ತಿ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಯಲ್ಲಿ ತೊಡಗಿರುವ ಅಂಶ ಎಲ್ಲರಿಗೂ ತಿಳಿಸಿರುವ ವಿಷಯವಾಗಿದೆ ಎಂದರು.ನ್ಯಾಯ ಕೋರಿ ಪೊಲೀಸ್ ಠಾಣೆಗೆ ಬರುವ ಸಾರ್ವಜನಿಕರಿಗೆ ಸಕಾಲಕ್ಕೆ ಸ್ಪಂಧಿಸುವುದು ಪೊಲೀಸ್ ಸಿಬ್ಬಂದಿ ಆದ್ಯ ಕರ್ತವ್ಯವಾಗಿದ್ದು, ತಮ್ಮ ಕುಟುಂಬ ಹಾಗೂ ಉತ್ತಮ ಜೀವನ ನಿರ್ವಹಣೆಗೆ ನೆರವಾಗಿರುವ ಪೊಲೀಸ್ ಇಲಾಖೆಗೆ ಸದಾ ಋಣಿಯಾಗಿರುವ ಜೊತೆಗೆ ಇಲಾಖೆಗೆ ಧಕ್ಕೆಯಾಗದಂತೆ ಗೌರವ ಎತ್ತಿ ಹಿಡಿದಿರುವ ಕಾರ್ಯವನ್ನು ಮಾಡಬೇಕು. ಕರ್ತವ್ಯದ ದಿನಗಳಲ್ಲಿ ತಮ್ಮ ವೇತನದಲ್ಲಿ ಗಳಿಸಿದ ಸ್ವಲ್ಪ ಹಣ ಉಳಿಸಿ ನಿವೃತ್ತಿ ನಂತರ ನೆಮ್ಮದಿ ಬದುಕು ಸಾಗಿಸಬೇಕು ಎಂದು ಹೇಳಿದರು.
ಧ್ವಜ ದಿನಾಚರಣೆ ಮಹತ್ವ ಮತ್ತು ರಾಜ್ಯ ಪೊಲೀಸ್ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ವರದಿ ವಾಚನ ಮಾಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ ಸ್ವಾಗತಿಸಿದರುಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ನಿವೃತ್ತ ಪೊಲೀಸರ ಸಂಘದ ಅದ್ಯಕ್ಷ ರಮೇಶ್ ಹಾಜರಿದ್ದರು.