ಕನ್ನಡಪ್ರಭ ವಾರ್ತೆ ಕುಶಾಲನಗರ
ಸಮಾಜದ ಪರಿವರ್ತನೆಯಲ್ಲಿ ಮಹಿಳೆಯರ ಪಾತ್ರ ಪ್ರಮುಖ ಎಂದು ಮಡಿಕೇರಿ ಶಾಸಕ ಡಾ .ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕುಶಾಲನಗರದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆ ಪ್ರಯುಕ್ತ ನಡೆದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧೀ ಸ್ಮರಣೆ ಮತ್ತು ನವ ಜೀವನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯ ಹಾಗೂ ದೇಶದ ಹಲವು ಕ್ಷೇತ್ರಗಳಲ್ಲಿ ಮಹಿಳಾ ಶಕ್ತಿ ಮಂಚೂಣಿಯಲ್ಲಿದೆ ಎಂದ ಅವರು, ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕ ಆರ್ ವಿ ಗಂಗಾಧರಪ್ಪ, ದುಶ್ಚಟಗಳ ಮೂಲಕ ಕುಟುಂಬ ಕಲಹ ಏರ್ಪಡುವುದರ ನಡುವೆ ನೆಮ್ಮದಿ ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ಸಂದರ್ಭ ಕುಡಿತದ ದಾಸರಾಗಬಾರದು. ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸುವ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕಾಗಿದೆ ಎಂದು ಕರೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ಲೀಲಾವತಿ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದಲ್ಲಿ ಇದುವರೆಗೆ 1870 ಮಧ್ಯವರ್ಜನ ಶಿಬಿರಗಳಲ್ಲಿ 1.5 ಲಕ್ಷಕ್ಕೂ ಅಧಿಕ ಮಂದಿ ನವಜೀವನ ಸದಸ್ಯರಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.ಕೊಡಗು ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ತಂಡದಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ಅಗತ್ಯ ಸಮಯಗಳಲ್ಲಿ ನೆರವು ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್ ಮಾತನಾಡಿ, ಮಹಿಳೆಯರ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.ಸಹಕಾರ ಸಂಘ, ಸ್ವ ಸಹಾಯ ಸಂಘಗಳ ಫಲಾನುಭವಿ ಸದಸ್ಯರಿಗೆ ಅಗತ್ಯ ಅನುದಾನ, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಮತ್ತು ಆರೋಗ್ಯ ರಕ್ಷಾ ನಿಧಿ ವಿತರಣೆ ಮಾಡಲಾಯಿತು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಮಡಿಕೇರಿ, ಕುಶಾಲನಗರದ ಸದಸ್ಯರು ಮಾತನಾಡಿದರು. ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾ ಅಧ್ಯಕ್ಷ ಪಿ. ಅಭಿಮನ್ಯು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಎಂಎನ್ ಚಂದ್ರಮೋಹನ್, ವಿ ಡಿ ಪುಂಡರಿಕಾಕ್ಷ, ಕೆ ಎಸ್ ರಾಜಶೇಖರ್, ಎಚ್ ಎಂ ಚಂದ್ರು, ಹೊಸೂರು ಸುರೇಶ್, ಚಂದ್ರಪ್ರಕಾಶ್, ದೀರ್ಘಕೇಶಿ ಶಿವಣ್ಣ, ಅಯ್ಯಪ್ಪ ಮತ್ತಿತರರು ಇದ್ದರು.
ಯೋಜನೆಯ ಸೋಮವಾರಪೇಟೆ ಯೋಜನಾಧಿಕಾರಿ ರೋಹಿತ್, ಮಡಿಕೇರಿಯ ಪುರುಷೋತ್ತಮ್, ಸೇವಾ ಪ್ರತಿನಿಧಿಗಳು ಸದಸ್ಯರು ಪಾಲ್ಗೊಂಡಿದ್ದರು.ವಲಯ ಮೇಲ್ವಿಚಾರಕ ನಾಗರಾಜ್ ನಿರೂಪಿಸಿದರು. ಯೋಜನಾಧಿಕಾರಿ ರೋಹಿತ್ ಸ್ವಾಗತ ಹಾಗೂ ವಲಯ ಮೇಲ್ವಿಚಾರಕರಾದ ಪೂರ್ಣಿಮಾ ವಂದಿಸಿದರು.