ಹಿರೇಮನ್ನಾಪುರ ಉರ್ದು ಶಾಲೆಗೆ ಕೊಠಡಿ ಸಮಸ್ಯೆ

KannadaprabhaNewsNetwork |  
Published : Jan 13, 2025, 12:48 AM IST
ಪೋಟೊ12ಕೆಎಸಟಿ2: ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿನ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಹೊರನೋಟ ಹಾಗೂ ಶಾಲಾ ಕೊಠಡಿಗಳು ಶಿಥಿಲಗೊಂಡಿರುವದು. ಒಂದೆ ಕೊಠಡಿಯಲ್ಲಿ ಎಲ್ಲಾ ಮಕ್ಕಳು ಕುಳಿತುಕೊಂಡಿರುವದು, ಶಾಲಾ ಆವರಣದ ಮುಂದೆ ಹಾಕಲಾಗಿರುವ ತಿಪ್ಪೆಗಳು. | Kannada Prabha

ಸಾರಾಂಶ

ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿನ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಎಲ್ಲ ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ಕೇವಲ 15 ಮಕ್ಕಳಿಗೆ ಸಮರ್ಪಕವಾದ ಕೊಠಡಿ ಇಲ್ಲ । ಶಾಲೆಯ ಮುಂದೆ ತಿಪ್ಪೆಗಳ ಗುಂಡಿ । ಮಳೆ ಬಂದಾಗ ಪಾಠ ಮಾಡಲಾಗದ ಸ್ಥಿತಿಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭವಾರ್ತೆ ಕುಷ್ಟಗಿ

ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿನ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿನ ಎಲ್ಲ ಕೊಠಡಿಗಳು ಶಿಥಿಲಗೊಂಡಿದ್ದು, ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ.

ಉರ್ದು ಶಾಲೆಯಲ್ಲಿ 1ರಿಂದ 5ನೇ ತರಗತಿ ವರೆಗೆ ಕಲಿಕೆ ನಡೆಯುತ್ತಿದ್ದು, ಒಟ್ಟು 15 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಉತ್ತಮ ಕೊಠಡಿ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಒಂದೇ ಕೊಠಡಿಯಲ್ಲಿ ಬೋಧನೆ:

ಇಲ್ಲಿ ಐದನೇ ತರಗತಿ ವರೆಗೆ ಶಾಲೆ ನಡೆಯುತ್ತಿದ್ದರೂ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಕೊಠಡಿ ಕೊರತೆ ಇದೆ. ಇದರಿಂದ ಎಲ್ಲರನ್ನು ಒಂದೇ ಕೊಠಡಿಗಳಲ್ಲಿ ಸೇರಿಸಿ ಪಾಠ ಮಾಡಲಾಗುತ್ತಿದೆ. ಒಟ್ಟು ಇಬ್ಬರು ಶಿಕ್ಷಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಳೆಯ ಕಟ್ಟಡ:

ಸುಮಾರು ಮೂವತ್ತು ವರ್ಷಗಳ ಹಿಂದೆ ನಿರ್ಮಾಣವಾದ ಈ ಶಾಲಾ ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಕಾಂಕ್ರೀಟ್‌ ಸಿಮೆಂಟ್‌ ಉದುರಿ ಬೀಳುತ್ತಿದೆ. ವಿದ್ಯಾರ್ಥಿಗಳಿಗೆ ಆಟವಾಡಲು ಸಮತಟ್ಟಾದ ಆಟದ ಮೈದಾನವಿಲ್ಲ. ಶಾಲೆಯ ಮುಂದಿನ ಗೋಡೆಗೆ ಅಂಟಿಕೊಂಡು ತಿಪ್ಪೆ ಇದೆ. ಹೀಗೆ ಅನೇಕ ಸಮಸ್ಯೆಗಳನ್ನು ಇಲ್ಲಿಯ ವಿದ್ಯಾರ್ಥಿಗಳು, ಶಿಕ್ಷಕರು ಎದುರಿಸುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

ಮಳೆ ಬಂದರೆ ಹೊರಗಡೆ ಪಾಠ:

ಶಾಲಾ ಕೊಠಡಿಗಳು ಸೋರುತ್ತಿರುವ ಪರಿಣಾಮವಾಗಿ ಸ್ವಲ್ಪ ಮಳೆಯಾದರೆ ಸಾಕು ಅಂದಿನ ದಿನ ಮಕ್ಕಳ ಪಾಠ ಶಾಲಾ ಆವರಣ ಅಥವಾ ಬೇರೊಂದು ಕಟ್ಟಡಕ್ಕೆ ಸ್ಥಳಾಂತರ ಮಾಡಿ ಅಲ್ಲಿ ಪಾಠ ಹೇಳಬೇಕಾದ ಪರಿಸ್ಥಿತಿ ಇದೆ.

ಶಾಸಕರು ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಶಾಲಾ ಅಭಿವೃದ್ಧಿಗಾಗಿ ಕ್ರಮ ಕೈಗೊಳ್ಳಬೇಕಿದೆ ಎಂದು ಶಿಕ್ಷಣಪ್ರೇಮಿಗಳು ಒತ್ತಾಯಿಸಿದ್ದಾರೆ.ಮಳೆ ಬಂದಾಗ ಎಲ್ಲ ಕೊಠಡಿಗಳು ಸೋರುತ್ತವೆ, ಹೀಗಾಗಿ ಬೇರೆಡೆ ಪಾಠ ಮಾಡಲಾಗುತ್ತದೆ. ಶಿಥಿಲಗೊಂಡ ಕೊಠಡಿ ದುರಸ್ತಿಗಾಗಿ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಒಂದೇ ಕೊಠಡಿಯಲ್ಲಿ ಪಾಠ ಮಾಡಲಾಗುತ್ತಿದ್ದು, ಇದು ಅನಿವಾರ್ಯ ಎನ್ನುತ್ತಾರೆ ಶಾಲೆಯ ಮುಖ್ಯಶಿಕ್ಷಕಿ ಅಕ್ಕಮಹಾದೇವಿ.

ನಾಲ್ಕು ಕೊಠಡಿಗಳಲ್ಲಿ ಎರಡು ಕೊಠಡಿಯನ್ನು ನೆಲಸಮ ಮಾಡಲು ಆದೇಶ ಬಂದಿದೆ. ಇನ್ನುಳಿದ ಎರಡು ಕೊಠಡಿಗಳನ್ನು ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ಅವಕಾಶ ಮಾಡಿಕೊಡಲಾಗುವುದು ಎನ್ನುತ್ತಾರೆ ಬಿಇಒ ಸುರೇಂದ್ರ ಕಾಂಬಳೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ