ದಕ್ಷಿಣ ಕಾಶಿ ಕಾಲಕಾಲೇಶ್ವರಕ್ಕೂ ಬರಲಿದೆ ರೋಪ್‌ ವೇ

KannadaprabhaNewsNetwork | Published : Mar 28, 2025 12:32 AM

ಸಾರಾಂಶ

ದಕ್ಷಿಣ ಕಾಶಿ ಎಂದೇ ಖ್ಯಾತವಾದ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಸಮೀಪದ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣಕ್ಕೆ ಸರ್ಕಾರಕ್ಕೆ ಸಲ್ಲಿಸಲು ವರದಿ ಸಿದ್ಧವಾಗಿದ್ದು, ಜಿಲ್ಲಾ ಪ್ರವಾಸೋದ್ಯಮ, ತಹಸೀಲ್ದಾರ್ ಹಾಗೂ ರೋಪ್ ವೇ ನಿರ್ಮಾಣ ಕಂಪನಿ ಅಧಿಕಾರಿಗಳು ಈ ಸಂಬಂಧ ಕಾಲಕಾಲೇಶ್ವರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಎಸ್.ಎಂ. ಸೈಯದ್ಗಜೇಂದ್ರಗಡ: ದಕ್ಷಿಣ ಕಾಶಿಯ ಖ್ಯಾತಿಯ ಸಮೀಪದ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣಕ್ಕೆ ಸರ್ಕಾರಕ್ಕೆ ಸಲ್ಲಿಸಲು ವರದಿ ಸಿದ್ಧವಾಗಿದ್ದು, ಭಕ್ತರು ಮತ್ತು ಪ್ರವಾಸಿಗರಲ್ಲಿ ಹರ್ಷ ಮೂಡಿಸಿದೆ.

ಜಿಲ್ಲಾ ಪ್ರವಾಸೋದ್ಯಮ, ತಹಸೀಲ್ದಾರ್ ಹಾಗೂ ರೋಪ್ ವೇ ನಿರ್ಮಾಣ ಕಂಪನಿ ಅಧಿಕಾರಿಗಳು ಈ ಸಂಬಂಧ ಕಾಲಕಾಲೇಶ್ವರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹೊಸ ಪ್ರವಾಸಿ ತಾಣಗಳು ಹಾಗೂ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ದೆಸೆಯಲ್ಲಿ ರಾಜ್ಯ ಸರ್ಕಾರವು ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯದ ಪ್ರಮುಖ ೧೨ ಸ್ಥಳಗಳಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ರೋಪ್ ವೇ ಸೌಲಭ್ಯ ಅಭಿವೃದ್ಧಿಗೆ ಆಧ್ಯತೆ ನೀಡುವದಾಗಿ ಘೋಷಿಸಿತ್ತು. ಹೀಗಾಗಿ ಪ್ರವಾಸಿಗರನ್ನು ಸೆಳೆಯಲು ಹಾಗೂ ಹೊಸ ಪ್ರವಾಸಿ ತಾಣಗಳ ಅಭಿವೃದ್ಧಿ ಕಾರ್ಯಕ್ರಮ ಭಾಗವಾಗಿ ಪ್ರವಾಸೋದ್ಯಮ ಸಚಿವರ ಅನುಮೋದನೆಯೊಂದಿಗೆ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರೋಪ್ ವೇ ಸೌಲಭ್ಯವನ್ನು ಕಲ್ಪಿಸಲು ಸಮೀಕ್ಷೆ ನಡೆಸಿತ್ತು. ಪ್ರವಾಸೋದ್ಯಮ ಇಲಾಖೆ, ತಹಸೀಲ್ದಾರ್ ಹಾಗೂ ರೋಪ್ ವೇ ನಿರ್ಮಾಣದ ಅಭಿಯಂತರರ ತಂಡವು ದಕ್ಷಿಣ ಕಾಶಿ ಕಾಲಕಾಲೇಶ್ವರ ದೇವಸ್ಥಾನ ಗಜೇಂದ್ರಗಡ ಕೋಟೆ ಬಳಿಯೂ ಸಹ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಪ್ರಾಥಮಿಕ ಹಂತದ ವರದಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವರು, ಶಾಸಕರು ಹಾಗೂ ಇಲಾಖೆಗಳ ಮೂಲಕ ಸರ್ಕಾರಕ್ಕೆ ಅಂತಿಮ ವರದಿ ಕಳುಹಿಸಲಿದ್ದು, ಸರ್ಕಾರ ವರದಿಗೆ ಅಂತಿಮ ಮುದ್ರೆಯನ್ನು ಹಾಕಲಿದೆ.ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಕ್ಕೆ ಸಿಕ್ಕ ಬಲ: ತಾಲೂಕಿನ ಕಾಲಕಾಲೇಶ್ವರ, ಸೂಡಿ, ಇಟಗಿ, ಡಂಬಳ ಹಾಗೂ ರೋಣ ಸೇರಿ ಅನೇಕ ಸ್ಥಳಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾರ್ಪಡಿಸಬೇಕು ಎಂಬ ಕೂಗಿತ್ತು. ಈಗ ಬೆಟ್ಟಗಳ ಸಾಲಿನಲ್ಲಿರುವ ಹಾಗೂ ಮಳೆಗಾಲದಲ್ಲಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಗಜೇಂದ್ರಗಡದ ಐತಿಹಾಸಿಕ ಕೋಟೆಗೆ ರೋಪ್ ವೇ ನಿರ್ಮಾಣ ಮಾಡಿ ಗುಡ್ಡದ ಮೇಲೆ ಉದ್ಯಾನವನ ಹಾಗೂ ಮೂರ್ತಿಗಳ ಸ್ಥಾಪನೆ ಮಾಡಿದರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂಬ ಸಾರ್ವಜನಿಕರ ಅಭಿಪ್ರಾಯ ಹಿನ್ನೆಲೆ ಅಧಿಕಾರಿಗಳ ತಂಡವು ಕಾಲಕಾಲೇಶ್ವರ ದೇವಸ್ಥಾನ ಹಾಗೂ ಗಜೇಂದ್ರಗಡ ಕೋಟೆ ಮುಂಭಾಗದಲ್ಲಿನ ಸ್ಥಳ ಪರಿಶೀಲನೆ ನಡೆಸಿದೆ. ಹೀಗಾಗಿ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣಕ್ಕಾಗಿ ಶಾಸಕ ಜಿ.ಎಸ್.ಪಾಟೀಲ ಸಲ್ಲಿಸಿದ ಪ್ರಸ್ತಾವನೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಮುಂದಾಗಿದ್ದು ಭಕ್ತರ ಸಂತಸಕ್ಕೆ ಕಾರಣವಾಗಿದೆ.ಉದ್ಯೋಗ ಸೃಷ್ಟಿ ನಿರೀಕ್ಷೆ: ರೋಣ ಮತಕ್ಷೇತ್ರದಲ್ಲಿ ಹೇಳಿಕೊಳ್ಳುವ ಕೈಗಾರಿಕೆಗಳು ಇಲ್ಲದ ಪರಿಣಾಮ ಪಟ್ಟಣ ಸೇರಿ ತಾಲೂಕಿನ ಗ್ರಾಮಗಳ ಜನತೆ ಉದ್ಯೋಗ ಅರಸಿ ಹುಬ್ಬಳ್ಳಿ, ಮಂಗಳೂರು, ಗೋವಾ ಸೇರಿ ಅನೇಕ ಶಹರಗಳಿಗೆ ಗುಳೆ ಹೋಗುವುದು ಸಾಮಾನ್ಯ. ಆದರೆ ರಾಜ್ಯ ಸರ್ಕಾರ ರೋಪ್ ವೇ ನಿರ್ಮಾಣಕ್ಕೆ ಹೆಜ್ಜೆಯನ್ನಿಟ್ಟಿದ್ದು ತಾಲೂಕಿನ ಸೂಡಿ, ಜೋಡಿ ಕಳಸ, ಇಟಗಿ ಭೀಮಾಂಬಿಕಾ ದೇವಸ್ಥಾನ, ಗಜೇಂದ್ರಗಡ ಕೋಟೆ ಸೇರಿ ಇನ್ನಿತರ ಸ್ಥಳಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಂದ ವ್ಯಾಪಾರ ವಹಿವಾಟಿ ಹೆಚ್ಚಿ ಉದ್ಯೋಗ ಸೃಷ್ಟಿಯ ಆಸೆ ಚಿಗುರಿದೆ.

ಸಚಿವ ಸಂಪುಟ ಒಪ್ಪಿಗೆ: ಕರ್ನಾಟಕ ಪ್ರವಾಸೋದ್ಯಮ ಮೂಲಸೌಲಭ್ಯ ನಿಗಮ (ಕೆಟಿಐಎಲ್) ಮೂಲಕ ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರ ಕೋರಿಕೆಯಂತೆ, ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ೨೦೨೪ ಜೂ.೧೫ರಂದು ಸರ್ಕಾರದ ನಿಯಮಾವಳಿ ಪಾಲಿಸುವಂತೆ ಸೂಚಿಸಿದ್ದರು. ಸಿಎಂ ಸಿದ್ದರಾಮಯ್ಯ ಕಲಬುರಗಿಯಲ್ಲಿ ನಡೆಸಿದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತಾಲೂಕಿನ ದಕ್ಷಿಣ ಕಾಶಿ ಕಾಲಕಾಲೇಶ್ವರ ದೇವಸ್ಥಾನ ಸೇರಿ ರಾಜ್ಯದ ಒಟ್ಟು ೧೨ ಸ್ಥಳಗಳಲ್ಲಿ ರೋಪ್ ವೇ ನಿರ್ಮಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ರೋಪ್ ವೇ ಕಂಪನಿಯ ಜಿ.ಎಂ, ಸತೀಶ ವರ್ಮಾ, ವೆಂಕಟೇಶ, ದೇವಸ್ಥಾನ ಧರ್ಮದರ್ಶಿ ಯಶ್‌ರಾಜ್ ಘೋರ್ಪಡೆ, ಪುರಸಭೆ ಸದಸ್ಯ ರಾಜು ಸಾಂಗ್ಲೀಕರ, ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಸೇರಿ ಇತರರು ಇದ್ದರು.

ಸರ್ಕಾರಕ್ಕೆ ಕ್ರಿಯಾಯೋಜನೆ: ತಾಲೂಕಿನಲ್ಲಿ ಪ್ರವಾಸೋದ್ಯಮ ಪ್ರಚುರ ಪಡಿಸುವ ದಿಸೆಯಲ್ಲಿ ಕಾಲಕಾಲೇಶ್ವರ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣಕ್ಕೆ ಸಚಿವ ಸಂಪುಟ ಇತ್ತೀಚೆಗೆ ಹಸಿರು ನಿಶಾನೆ ನೀಡಿತ್ತು. ಈಗ ಅಧಿಕಾರಿಗಳು ಕಾಲಕಾಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದು ರೋಪ್ ವೇ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸರ್ಕಾರಕ್ಕೆ ಕಳುಹಿಸಿ ಕೊಡಲಿದ್ದಾರೆ ಎಂದು ರೋಣ ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಕಾಲಕಾಲೇಶ್ವರ ದೇವಸ್ಥಾನದ ಭಕ್ತರ ಹಾಗೂ ಪ್ರವಾಸಿಗರ ಬೇಡಿಕೆಯಂತೆ ಶಾಸಕ ಜಿ.ಎಸ್. ಪಾಟೀಲ ೨೦೨೪ ರಲ್ಲಿ ರೋಪ್ ವೇ ನಿರ್ಮಿಸಲು ಪ್ರಸ್ತಾವನೆ ಜತೆಗೆ ಸಚಿವರ ಗಮನ ಸೆಳೆದಿದ್ದರು. ಪರಿಣಾಮ ದೇವಸ್ಥಾನ ಹಾಗೂ ಗಜೇಂದ್ರಗಡ ಕೋಟೆಗೆ ರೋಪ್ ವೇ ನಿರ್ಮಾಣಕ್ಕಾಗಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಖುಷಿ ತಂದಿದೆ. ಎಂದು ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಹೇಳಿದರು.ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣ ಹಿನ್ನೆಲೆ ತಹಸೀಲ್ದಾರ್, ರೋಪ್ ವೇ ಕಂಪನಿಯವರು, ದೇವಸ್ಥಾನ ಧರ್ಮದರ್ಶಿ ಸೇರಿ ಇತರರೊಂದಿಗೆ ಕಾಲಕಾಲೇಶ್ವರ ದೇವಸ್ಥಾನ ಭೇಟಿ ನೀಡಿದ ಬಳಿಕ ಸಾರ್ವಜನಿಕರ ಅಭಿಪ್ರಾಯದ ನಿಮಿತ್ತ ಗಜೇಂದ್ರಗಡ ರಾಜವಾಡೆ ಬಳಿಯ ಕೋಟೆ ನೋಡಿದ್ದು ರೋಪ್ ವೇ ನಿರ್ಮಾಣದ ಸೂಕ್ತ ಕ್ರಿಯಾ ಯೋಜನೆ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ವರ ವಿಭೂತಿ ಹೇಳಿದರು.

Share this article