ಕಲಗಾರು ಲಕ್ಷ್ಮೀ ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ ತಾಳಗುಪ್ಪಕಳೆದ ಎರಡು ಮೂರು ವರ್ಷಗಳಿಂದ ಅಡಿಕೆ ಫಸಲು ಕೈ ಸೇರಲು ಅಡ್ಡಿಯಾಗಿದ್ದ ಮಹಾಮಾರಿ ಕೊಳೆ ರೋಗ ಈ ವರ್ಷವೂ ಅಡಕೆ ತೋಟದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದೆ.
ಬೋರ್ಡೋ ದ್ರಾವಣ ಸಿಂಪಡಣೆಯಿಂದ ಸುಮಾರು ಒಂದು ತಿಂಗಳ ಕಾಲ ತೋಟಿಗರು ನಿಶ್ಚಿಂತರಾಗಬಹುದು ಎಂಬ ನಂಬಿಕೆ ಕಳೆದೆರಡು ವರ್ಷಗಳಿಂದ ಸುಳ್ಳಾಗಿ ಪರಿಣಮಿಸಿದೆ. ಮುಂಜಾಗರೂಕತೆಯಿಂದ ಈಗಾಗಲೇ ಎರಡು ಬಾರಿ ಬೋರ್ಡೋ ದ್ರಾವಣ ಸಿಂಪಡಿಸಿದ್ದರೂ ಕೊಳೆ ಕಾಣಿಸಿಕೊಂಡಿರುವುದು ಆತಂಕಕಾರಿಯಾಗಿದೆ. ಮಳೆಯು ಅಬ್ಬರದಿಂದ ಸುರಿಯುತ್ತಿಲ್ಲವಾದರೂ ಬಿಸಿಲು ಮಳೆ ಜಿಟಿಜಿಟಿ ಸುರಿಯುತ್ತಿರುವುದು ಕೊಳೆ ರೋಗಕ್ಕೆ ಪೂರಕ ವಾತಾವರಣ ನಿರ್ಮಿಸಿದೆ. ತಾಲೂಕಿನ ತಾಳಗುಪ್ಪ, ಬಾರಂಗಿ, ಕರೂರು ಹೋಬಳಿ ಹಾಗೂ ಜಿಲ್ಲಾ ಗಡಿ ಭಾಗದ ಪ್ರದೇಶದಲ್ಲಿ ಅಲ್ಲಲ್ಲಿ ಕೊಳೆ ವ್ಯಾಪಕವಾಗಿದೆ. ಕೊಳೆ ರೋಗ: ಪೈಟೋಪ್‍ಥರಾ ಎಂಬ ಶಿಲೀಂದ್ರ ಜನ್ಯವಾದ ಕೊಳೆ ಅಥವಾ ಮಹಾಳಿ ಅಡಕೆಯನ್ನು ಕಾಡುವ ಭೀಕರ ರೋಗವಾಗಿದೆ. ಮಳೆಗಾಲ ಪ್ರಾರಂಭಗೊಂಡ ಒಂದೆರಡು ವಾರಗಳಲ್ಲಿ ಕಾಣಿಸಿಕೊಳ್ಳುವ ಕೊಳೆರೋಗ ಮಳೆಯ ಗತಿಯನ್ನು ಅವಲಂಬಿಸಿ ಹೆಚ್ಚು ಕಡಿಮೆಯಾಗುತ್ತದೆ. ರೋಗಗ್ರಸ್ತ ಅಡಿಕೆಯಲ್ಲಿ ಬರಿಗಣ್ಣಿನಿಂದಲೂ ಕಾಣುವ ಬಿಳಿ ಪೊರೆಯಂತೆ ಇರುವ ಶಿಲೀಂದ್ರವು ದ್ವಿಗುಣಗೊಳ್ಳತ್ತಾ ಸಾಗುತ್ತದೆ. ಒಂದೇ ದಿನದಲ್ಲಿ ಹತ್ತೆಂಟು ಎಕರೆ ಪ್ರದೇಶವನ್ನು ವ್ಯಾಪಿಸುತ್ತದೆ. ಸರದಿಯಂತೆ ಬರುವ ಬಿಸಿಲು ಮಳೆ, ಅಧಿಕ ತೇವಾಂಶ ಮೋಡ ಕವಿದ ವಾತಾವರಣ, ರೋಗ ಪ್ರಸರಣಕ್ಕೆ ಪೂರಕ ಅಂಶವಾಗಿದೆ. ವಿಜ್ಞಾನ ಇಷ್ಟೆಲ್ಲಾ ಮುಂದುವರೆದರೂ ಈ ರೋಗಕ್ಕೆ ಮದ್ದೇ ಇಲ್ಲದಿರುವುದು ವಿಪರ್ಯಾಸ. ರೋಗ ಬರದಂತೆ ತಡಯುವುದೇ ಇದರ ನಿಯಂತ್ರಣಕ್ಕಿರುವ ಏಕೈಕ ಮಾರ್ಗವಾಗಿದ್ದು, ಕಾಪರ್ ಸಲ್ಪೇಟ್ ಸುಣ್ಣದ ಸಂಯುಕ್ತ ದ್ರಾವಣ (ಬೋರ್ಡೋ ದ್ರಾವಣ ) ಸಿಂಪಡಣೆಯೇ ಪ್ರಮುಖ ಪರಿಹಾರವಾಗಿದೆ.ದ್ರಾವಣ ಸಿಂಪಡಣೆಗೆ ನುರಿತ ಕೆಲಸಗಾರರ ಅಭಾವ.
ಗೊನೆಗಳಿಗೆ ಮದ್ದು ಸಿಂಪಡಿಸುವ ಕೆಲಸ ಕಠಿಣತರದ್ದಾಗಿದ್ದು 30-40 ಅಡಿ ಎತ್ತರದ, ಬಳಕುವ ಅಡಿಕೆ ಮರ ಏರಿ, ಮದ್ದು ಸಿಂಪಡಿಸುವ ಕೆಲಸ ಅತ್ಯಂತ ಜಾಗರೂಕತೆಯಿಂದ ಮಾಡುವಂತದ್ದಾಗಿತ್ತು. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಒಳಗಾಗಬೇಕಿತ್ತು. ಹಳೆಯ ಕೆಲಸಗಾರರಿಗೆ ವಯಸ್ಸಾಗಿ ಮರ ಕಸುಬು ಬಿಟ್ಟಿರುವುದು ಹಾಗೂ ,ಯುವಕರು ಈ ಕೆಲಸದ ಬಗ್ಗೆ ಆಸಕ್ತರಾಗದಿರುವುದರಿಂದ ಪ್ರತಿ ಊರಲ್ಲಿಯೂ ಮದ್ದು ಸಿಂಪಡಿಸುವುದು ಸಮಸ್ಯೆಯಾಗಿಯೇ ಇತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪೆಟ್ರೋಲ್ ಚಾಲಿತ ಮಿಶನ್ ,ಫೈಬರ್ ದೋಟಿ ಬಳಕೆಗೆ ಬಂದು ನೆಲದಲ್ಲಿಯೇ ನಿಂತು ದ್ರಾವಣ ಸಿಂಪಡಿಸಬಹುದಾಗಿದೆ. ದ್ರಾವಣ ಸಿಂಪಡಣೆ ಸುಲಭವಾಗಿದ್ದರೂ ಅನನುಭವಿಗಳು ಈ ಕೆಲಸದಲ್ಲಿ ತೊಡಗಿಕೊಂಡು ದಿನಕ್ಕೆ 7- 8 ಬಾನಿ ಸಿಂಪಡಿಸುತ್ತಿರುವುದರಿಂದ ದ್ರಾವಣ ಬಳಕೆ ದುಪ್ಪಟ್ಟಾಗಿರುವುದು ಬೆಳೆಗಾರರ ಅನುಭವಕ್ಕೆ ಬಂದಿದೆ.ಸರಪಳಿ ವ್ಯವಸ್ಥೆ: ಮಲೆನಾಡಿನ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾದ ಅಡಕೆ ವಾಣಿಜ್ಯ ಬೆಳೆ. ಸಾಂಪ್ರದಾಯಿಕ ಅಡಿಕೆ ಬೆಳೆ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ, ನೆರೆ ಜಿಲ್ಲೆಯ ಶೃಂಗೇರಿ, ಕೊಪ್ಪ, ಸಿದ್ದಾಪುರ ಸಿರ್ಸಿ, ಯಲ್ಲಾಪುರ, ಪುತ್ತೂರು, ಸುಳ್ಯ, ನೆರೆ ರಾಜ್ಯದ ಕಾಸರಗೋಡು ಜಿಲ್ಲೆಯ ಹಲವು ಭಾಗಗಳಲ್ಲಿ ಅಡಿಕೆಯನ್ನೇ ಜೀವನ ನಿರ್ವಹಣೆಗಾಗಿ ಅವಲಂಬಿಸಿದ ಲಕ್ಷಾಂತರ ಕುಟುಂಬಗಳಿವೆ. 20-30 ಎಕರೆ ಕ್ಷೇತ್ರ ಹೊಂದಿದ ಶ್ರೀಮಂತ ಬೆಳೆಗಾರರು ಇರುವುದಾದರೂ, 3 ಗುಂಟೆಯಿಂದ 1 - 2 ಎಕರೆ ಹಿಡುವಳಿ ಹೊಂದಿದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಅಡಿಕೆ ಬೆಳೆಗಾರರನ್ನು ನೆಚ್ಚಿಕೊಂಡು ಪೂರ್ಣ ಜೀವನ ಸಾಗಿಸುವ ಕೃಷಿ ಕಾರ್ಮಿಕ ಕುಟುಂಬಗಳು ಅಧಿಕವಿದೆ. ಅಡಿಕೆಯನ್ನೇ ಜೀವನಕ್ಕೆ ಅವಲಂಬಿಸಿದ ಅಡಿಕೆ ಬೆಳೆಗಾರರು, ಅವರನ್ನು ನೆಚ್ಚಿಕೊಂಡ ಕೃಷಿ ಕಾರ್ಮಿಕರು, ಇವರನ್ನು ಅವಲಂಬಿಸಿದ ವ್ಯಾಪಾರ ವಹಿವಾಟುಗಳು, ಒಂದೊಕ್ಕೊಂದು ಹೆಣೆದುಕೊಂಡ ಸರಪಳಿ ವ್ಯವಸ್ಥೆ ಇದ್ದು, ಅಡಿಕೆ ಬೆಳೆಯಲ್ಲಿನ ಏರಿಳಿತದಿಂದ ಅದು ಅಸ್ತ್ಯವ್ಯಸ್ತಗೊಳ್ಳುತ್ತದೆ.