ಪೋಲಿಯೋ ನಿರ್ಮೂಲನೆಯಲ್ಲಿ ರೋಟರಿ ಪಾತ್ರ ಮಹತ್ವದ್ದು

KannadaprabhaNewsNetwork |  
Published : Apr 11, 2026, 01:30 AM IST
10ಎಚ್ಎಸ್ಎನ್16 :  | Kannada Prabha

ಸಾರಾಂಶ

ಒಟ್ಟು ವಿಶ್ವದಲ್ಲಿ 21 ಲಕ್ಷ ಮಂದಿ ರೋಟರಿ ಸ್ವಯಂ ಸೇವಕರು ಸಮಾಜದ ಸೇವೆಗಾಗಿ ದುಡಿಯುತ್ತಿದ್ದು, ಆರೋಗ್ಯ, ಶಿಕ್ಷಣ, ಸ್ವಚ್ಛತೆ ಹಾಗೂ ಇನ್ನು ಹಲವು ಸಾಮಾಜಿಕ ಕ್ಷೇತ್ರದಲ್ಲಿನ ಸುಧಾರಣೆಗಾಗಿ ರೋಟರಿ ಸೇವೆ ಸಲ್ಲಿಸುತ್ತಿದೆ. ಸಮಾಜ ನಮಗೆ ಅನೇಕ ಸೌಲಭ್ಯ ಹಾಗೂ ಸವಲತ್ತುಗಳನ್ನು ನೀಡಿದ್ದು, ನಾವುಗಳು ಸಮಾಜಕ್ಕೆ ಪುನಃ ಏನನ್ನಾದರೂ ನೀಡುವ ಹೊಣೆಗಾರಿಕೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ಆರೋಗ್ಯ ಕ್ಷೇತ್ರಕ್ಕೆ ರೋಟರಿ ಸಂಸ್ಥೆಯ ಕೊಡುಗೆ ಅಪಾರವಾಗಿದ್ದು, ವಿಶ್ವದಾದ್ಯಂತ ಪೋಲಿಯೋ ರೋಗವನ್ನು ಹೊಗಲಾಡಿಸಿದ ಕೀರ್ತಿ ರೋಟರಿ ಸಂಸ್ಥೆಗೆ ಇದೆ ಎಂದು ರೋಟರಿ 3182 ಜಿಲ್ಲಾ ಗೌವರ್ನರ್‌ ಕೆ. ಪಾಲಾಕ್ಷ ಹೇಳಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಸೇವೆಯ ದೃಷ್ಟಿಕೋನದಿಂದ ಆರಂಭವಾದ ರೋಟರಿ ಸಂಸ್ಥೆ ಇಂದು ವಿಶ್ವದ 220 ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, 12.5 ಲಕ್ಷ ರೋಟರಿ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಾಲಾ ಹಂತದಲ್ಲಿ 3.5 ಲಕ್ಷ ಮಕ್ಕಳು ರೋಟರಿ ಸೇವೆಯಲ್ಲಿ ಇದ್ದು, ಕಾಲೇಜು ಹಂತದಲ್ಲಿ 2 ಲಕ್ಷ ಮಂದಿ ಮಕ್ಕಳು ರೋಟರಿ ಮಕ್ಕಳಿದ್ದಾರೆ. ಒಟ್ಟು ವಿಶ್ವದಲ್ಲಿ 21 ಲಕ್ಷ ಮಂದಿ ರೋಟರಿ ಸ್ವಯಂ ಸೇವಕರು ಸಮಾಜದ ಸೇವೆಗಾಗಿ ದುಡಿಯುತ್ತಿದ್ದು, ಆರೋಗ್ಯ, ಶಿಕ್ಷಣ, ಸ್ವಚ್ಛತೆ ಹಾಗೂ ಇನ್ನು ಹಲವು ಸಾಮಾಜಿಕ ಕ್ಷೇತ್ರದಲ್ಲಿನ ಸುಧಾರಣೆಗಾಗಿ ರೋಟರಿ ಸೇವೆ ಸಲ್ಲಿಸುತ್ತಿದೆ. ಸಮಾಜ ನಮಗೆ ಅನೇಕ ಸೌಲಭ್ಯ ಹಾಗೂ ಸವಲತ್ತುಗಳನ್ನು ನೀಡಿದ್ದು, ನಾವುಗಳು ಸಮಾಜಕ್ಕೆ ಪುನಃ ಏನನ್ನಾದರೂ ನೀಡುವ ಹೊಣೆಗಾರಿಕೆಯನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶದಲ್ಲಿ ಮಾತ್ರ ಪೋಲಿಯೋ ಕಾಯಿಲೆ ಕಾಣಿಸಿಕೊಂಡಿದ್ದು, ಅದನ್ನು ಸಹ ಹೋಗಲಾಡಿಸುವ ನಿಟ್ಟಿನಲ್ಲಿ ರೋಟರಿ ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಹೆಣ್ಣುಮಕ್ಕಳಲ್ಲಿ ಗರ್ಭ ಕೊರಳಿನ ಕ್ಯಾನ್ಸರ್‌ ಹೆಚ್ಚಾಗಿ ಕಾಣಿಸುತ್ತಿದ್ದು, ಇದನ್ನು ಅತ್ಯಂತ ಪರಿಣಾಮಕಾರಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ರೋಟರಿ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಕ್ರಮ ವಹಿಸುತ್ತಿದೆ. ಹೆಣ್ಣುಮಕ್ಕಳಿಗೆ ಎರಡು ಹಂತದಲ್ಲಿ ಚುಚ್ಚುಮದ್ದು ಔಷಧಿಗಳನ್ನು ಈಗಾಗಲೇ ನೀಡುತ್ತಿದೆ. ಒಂದು ಇಂಜೆಕ್ಷನ್‌ಗೆ ಸುಮಾರು 3 ಸಾವಿರ ರು. ವೆಚ್ಚವಾಗಲಿದ್ದು, ಇದನ್ನು ರೋಟರಿ ಸಂಸ್ಥೆ ಉಚಿತವಾಗಿ ಹಾಕಿಸುವ ಮೂಲಕ ನಿರ್ಮೂಲನೆಗೆ ಹೊಸ ಹೆಜ್ಜೆಯನ್ನು ಇಟ್ಟಿದೆ. ಇದಕ್ಕಾಗಿ ಎಲ್ಲಾ ಸಂಘಸಂಸ್ಥೆಯ ಸಹಕಾರ ಹಾಗೂ ಶಾಲಾ ಕಾಲೇಜುಗಳ ಸಹಕಾರ ಪಡೆದು ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ಆಫ್ ಹಾಸನ ರಾಯಲ್‌ನ ಅಧ್ಯಕ್ಷ ಬಿ.ಕೆ. ಟೈಮ್ಸ್ ಗಂಗಾಧರ್‌ ಮಾತನಾಡಿ, ಹೆಣ್ಣುಮಕ್ಕಳಿಗೆ ಕಾಯಿಲೆ ಬರದ ಹಾಗೇ ಕ್ರಮವಹಿಸಬೇಕಾ ಅವಶ್ಯಕತೆ ಇದ್ದು, ಸ್ವಚ್ಛತೆ ಹಾಗೂ ಶುದ್ಧ ಆಹಾರ ಸೇವನೆ ಕಡೆ ಹೆಚ್ಚು ಪ್ರಾತಿನಿಧ್ಯ ನೀಡಬೇಕು. ಜೀವನದಲ್ಲಿ ಸಾಧನೆ ಹಾದಿಯಲ್ಲಿ ನಡೆಯುವ ನಿಟ್ಟಿನಲ್ಲಿ ಯುವತಿಯರು ಹೆಚ್ಚು ಮೊಬೈಲ್ ಫೋನ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಮೊಬೈಲ್ನಲ್ಲಿ ರೀಲ್ಸ್ ನೋಡಿ ಸಂತಸ ಪಡದೆ ರೀಲ್ಸ್‌ನಲ್ಲಿ ತಾವುಗಳ ಬರುವ ಹಾಗೆ ಉತ್ತಮ ಹಾದಿಯಲ್ಲಿ ಸಾಧನೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಜಿ. ಕವಿತಾ ಮಾತನಾಡಿ, ರೋಟರಿ ಸಂಸ್ಥೆಯಿಂದ ಇಡೀ ವೈದ್ಯಕೀಯ ಸಂಸ್ಥೆಗಳು ಇಂದು ನಮ್ಮ ಕಾಲೇಜಿಗೆ ಆಗಮಿಸಿದ್ದು, ಹೆಣ್ಣುಮಕ್ಕಳು ಈ ಉಚಿತ ಆರೋಗ್ಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣದೊಂದಿಗೆ ಆರೋಗ್ಯದ ಕಡೆಗೂ ಹೆಣ್ಣುಮಕ್ಕಳು ಹೆಚ್ಚು ಆದ್ಯತೆ ನೀಡಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸುಮಾರು ೫೦ಕ್ಕೂ ಅಧಿಕ ಮಕ್ಕಳು ರಕ್ತದಾನ ಮಾಡಿದರು, ಇನ್ನು ಥೈರಾಯಿಡ್, ದಂತ ತಪಾಸಣೆ, ಕಣ್ಣಿನ ತಪಾಸಣೆ, ರಕ್ತ ಪರೀಕ್ಷೆ ಹೀಗೆ ಎಲ್ಲಾ ಆರೋಗ್ಯದ ಪರೀಕ್ಷೆಯನ್ನು ಕಾಲೇಜಿನ ನೂರಾರು ಮಕ್ಕಳು ಪಡೆದುಕೊಂಡರು.ರೋಟರಿ ಜೋನ್ ೯ ಸಹಾಯಕ ಗವರ್ನರ್‌ ಜೆ.ಎನ್. ಮಂಜುನಾಥ್, ವಲಯ ಸೇನಾನಿ ಮಮತಾ ಪಾಟೀಲ್, ಹೊಳೆನರಸೀಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಸಿಸಿ ಅಧಿಕಾರಿ ಡಾ. ಎಚ್.ಎನ್. ಹರೀಶ್, ಮಹಿಳಾ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ. ವೆಂಕಟೇಶ್, ಎನ್.ಎಸ್.ಎಸ್. ಅಧಿಕಾರಿಗಳಾದ ಯೋಗೇಶ್, ವೆಂಕಟೇಶ್, ಐಕ್ಯೂಎಸಿ ಸಂಚಾಲಕ ಯೋಗೀಶ್ ಎಸ್. ರೋಟರಿ ರಾಯಲ್ ಕ್ಲಬ್ ಕಾರ್ಯದರ್ಶಿ ರವಿ ಕುಮಾರ್, ಖಜಾಂಚಿ ದಿಲೀಪ್ ಕುಮಾರ್, ಮಾಜಿ ಅಧ್ಯಕ್ಷರಾದ ಯೋಗೇಶ್ ಎಸ್, ವಿಕ್ರಂ, ಸಚಿನ್, ಸದಸ್ಯರಾದ ಚೇತನ್, ನವೀನ್ ಹಾಗೂ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಚ್ಚಮ್ಮ ದೇವಿಯ ವೈಭವದ ಮಹಾರಥೋತ್ಸವ
ಕೃಷ್ಣ ಬೈರೇಗೌಡ ಅಧ್ಯಕ್ಷತೆಯಲ್ಲಿ ಬೇಲೂರಲ್ಲಿ ಜನಸ್ಪಂದನ ಸಭೆ