ಕನ್ನಡಪ್ರಭ ವಾರ್ತೆ ಹೊಸಪೇಟೆ
ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ರೋಟರಿ ಸೇವೆ ಅನನ್ಯವಾಗಿದೆ. ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರ ವಿಫಲವಾದಾಗ ರೋಟರಿ ಸಂಸ್ಥೆಯು ಆಪ್ತರಕ್ಷಕನಾಗಿ ವಿಜಯನಗರ ಜಿಲ್ಲೆಯ ಹಿರಿಮೆಯನ್ನು ಕಾಯ್ದುಕೊಳ್ಳುತ್ತಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.ನಗರದ ರೋಟರಿ ಕ್ಲಬ್ ವತಿಯಿಂದ ಆರಂಭಿಸಲಾದ ವೈ.ಉಮಾಮಹೇಶ್ವರ ರಾವ್ ರೋಟರಿ ಬ್ಲಡ್ ಸೆಂಟರ್‌ನ ಉದ್ಘಾಟನೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ನೀಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ 66 ವರ್ಷಗಳಿಂದ ಅತ್ಯುನ್ನತ ಕೊಡುಗೆ ನೀಡುತ್ತಿದೆ. ಹೊಸಪೇಟೆ ರೋಟರಿ ಕ್ಲಬ್ ನ ಹಲವು ಸದಸ್ಯರ ಕುಟುಂಬಗಳು ತಮ್ಮ ಜೀವನವನ್ನೇ ಸಮಾಜಸೇವೆಗೆ ಮುಡಿಪಾಗಿಟ್ಟಿವೆ ಎಂದು ಶ್ಲಾಘಿಸಿದರು.
ರೋಟರಿ ಗವರ್ನರ್ ಸಾಧು ಗೋಪಾಲಕೃಷ್ಣ ಮಾತನಾಡಿ, ಸಾಮಾಜಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತ್ತಿರುವ ಹೊಸಪೇಟೆ ರೋಟರಿ ಕ್ಲಬ್ ಅತ್ಯುನ್ನತ ಸ್ಥಾನದಲ್ಲಿದೆ. ಅದರಂತೆ ಕ್ಲಬಿನ ಸದಸ್ಯರ ದೂರದೃಷ್ಟಿಯಿಂದ ಡಯಾಲಿಸಿಸ್ ಸೆಂಟರ್, ಐಸಿಯು ಅಂಬ್ಯುಲೆನ್ಸ್, ಪಿಜಿಯೋಥೆರಪಿ, ಶಾಲೆಯಂತಹ ಹಲವಾರು ಶಾಶ್ವತ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದ್ದು, ಪ್ರತಿ ಸದಸ್ಯರ ಕೊಡುಗೆ ಅಮೂಲ್ಯವಾದುದು ಎಂದರು.ಸಂಸದ ಈ. ತುಕಾರಾಂ ಹಾಗೂ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿ, ರೋಟರಿ ಸಂಸ್ಥೆಯ ಕೊಡುಗೆ ಅನುಪಮವಾದುದು. ನಾವು ಕೂಡ ರೋಟರಿ ಸದಸ್ಯರು ಎಂದು ಹೇಳಲು ಹೆಮ್ಮೆಯೆನಿಸುತ್ತದೆ ಎಂದರು.
ಮಂಡ್ಯದ ಸಮಾಜ ಸೇವಕ ಪದ್ಮಶ್ರೀ ಡಾ. ಕೆ.ಎಸ್. ರಾಜಣ್ಣ, ರೋಟರಿ ಮಾಜಿ ಗವರ್ನರ್ ಗಳಾದ ಗೋಪಿನಾಥ್, ತಿರುಪತಿ ನಾಯ್ಡು, , ಬ್ಲಡ್ ಬ್ಯಾಂಕ್ ದಾನಿಗಳಾದ ವೈ.ಶ್ರೀನಿವಾಸ ರಾವ್, ರಕ್ತ ಭಂಡಾರದ ಅಧ್ಯಕ್ಷ ವಿಜಯ ಸಿಂಧಗಿ, ರೋಟರಿ ಕ್ಲಬ್ ಅಧ್ಯಕ್ಷ ದೀಪಕ್ ಕೊಳಗದ್, ಕಾರ್ಯದರ್ಶಿ ವೀರಭದ್ರ, ಡಿಎಚ್‌ಒ ಡಾ. ಶಂಕರ ನಾಯ್ಕ, ರೋಟರಿ ಕ್ಲಬ್‌ನ ದಾದಾಪೀರ, ವಾಣಿಜೋದ್ಯಮ ಸಂಘದ ಅಧ್ಯಕ್ಷ ಅಶ್ವಿನ್ ಕೊತ್ತಂಬರಿ ಸೇರಿದಂತೆ ಹೊಸಪೇಟೆಯ ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಾಣಿಜ್ಯೋದ್ಯಮಿಗಳು, ಸಮಾಜ ಸೇವಕರು ಮುಖಂಡರು ಪಾಲ್ಗೊಂಡಿದ್ದರು.