ಬ್ಯಾಡಗಿ: ರೋಟರಿ ಸಂಸ್ಥೆಯು ವ್ಯಕ್ತಿಯ ಜೀವನ ಪರಿವರ್ತಿಸುವುದರ ಜೊತೆಗೆ ವಿಶ್ವದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಬಹುದೊಡ್ಡ ಜಾಗತಿಕ ಸೇವಾ ಜಾಲವಾಗಿದೆ ಎಂದು ಹುಬ್ಬಳ್ಳಿ ರೋಟರಿಯನ್ ವಾಸುಕಿ ಸಂಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಳೆದ 1905ರಲ್ಲಿ ಪಾಲ್ ಹ್ಯಾರಿಸ್ ಅವರಿಂದ ಚಿಕಾಗೋದಲ್ಲಿ ಸ್ಥಾಪಿಸಲ್ಪಟ್ಟ ರೋಟರಿ ಇಂಟರನ್ಯಾಷನಲ್ ಸಂಸ್ಥೆಯು ಇತಿಹಾಸದಲ್ಲೇ ಅತೀದೊಡ್ಡ ಮತ್ತು ಅತ್ಯಂತ ಪ್ರಭಾವಶಾಲಿ ಮಾನವೀಯ ಸಂಸ್ಥೆಗಳಲ್ಲಿ ಒಂದಾಗಿದೆ, ಶತಮಾನಕ್ಕೂ ಹೆಚ್ಚು ಕಾಲ ರೋಟರಿ ವಿಶ್ವದ ಬಹುತೇಕ ರಾಷ್ಟ್ರಗಳ ಸಂಸ್ಕೃತಿಗಳನ್ನು ಸಂಪರ್ಕಿಸುವ ಮೂಲಕ ಮಾನವೀಯ ನೆರವು ನೀಡಿ ಬೃಹತ್ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ ಎಂದರು.
ಪೋಲಿಯೊ ನಿರ್ಮೂಲನೆ: ಸ್ವಯಂ ಸೇವೆಗಿಂತ ಹೆಚ್ಚಿನ ಸೇವೆ ಎಂಬ ತನ್ನ ಧ್ಯೇಯವಾಕ್ಯದ ಮೂಲಕ, ರೋಟರಿ ಸಾಧನೆಗಳು ಜಾಗತಿಕ ಆರೋಗ್ಯ, ಶಿಕ್ಷಣ ಮತ್ತು ಶಾಂತಿಯ ಮೇಲೆ ಅಳಿಸದಂತಹ ಹೆಜ್ಜೆ ಗುರುತು ನಿರ್ಮಿಸಿದೆ, ಇದರಲ್ಲಿ ಪೋಲಿಯೋ ನಿರ್ಮೂಲನೆ ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಪೋಲಿಯೋ ಕುರಿತು ನಿರಂತರ ಜಾಗತಿಕ ಅಭಿಯಾನ ನಡೆಸಿದ ರೋಟರಿಯ ಉತ್ತಮ ಸಾಧನೆಯಾಗಿದೆ ಎಂದರು.ಸಮುದಾಯ ಶಾಂತಿ ನಿರ್ಮಾಣ: ತಳಮಟ್ಟದಲ್ಲಿ, ಬಡತನ, ವ್ಯವಸ್ಥಿತ ಅಸಮಾನತೆ, ಜನಾಂಗೀಯ ಉದ್ವಿಗ್ನತೆ ಮತ್ತು ಸಂಪನ್ಮೂಲಗಳಿಗೆ ಪ್ರವೇಶದ ಕೊರತೆ ಸಂಘರ್ಷದ ಮೂಲ ಕಾರಣಗಳನ್ನು ಪರಿಹರಿಸುವ ಯೋಜನೆಗಳಿಗೆ ರೋಟರಿ ಕ್ಲಬ್‌ಗಳು ಹಣಕಾಸು ಒದಗಿಸುತ್ತವೆ. ನೀರು, ನೈರ್ಮಲ್ಯ ಮತ್ತು ಶುದ್ಧ ಕುಡಿಯುವ ನೀರು ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕ ಸ್ಥಿರತೆ ಒದಗಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ, ನಿವೃತ್ತ ಎಎಸ್ಐ ಬಸವರಾಜ ಅಂಜುಟಗಿ, ಹೆಸ್ಕಾಂ ಸುರೇಶ, ಸಮಾಜ ಸೇವಕ ಶಿವಕುಮಾರ ಕಲ್ಲಾಪುರ, ನಿವೃತ್ತ ಶಿಕ್ಷಕ ಆನಂದ ಮುದಕಮ್ಮನವರ, ಯೋಗ ತರಬೇತುದಾರರಾದ ಜ್ಯೋತಿ ಕುದರಾಳ ಅವರನ್ನು ಸನ್ಮಾನಿಸಲಾಯಿತು. ಹಾವೇರಿ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಮಕ್ಕಳು ಭರತನಾಟ್ಯ ಪ್ರದರ್ಶಿಸಿದರು. ಡಾ.ಜಗದೀಶ ಮಹಾರಾಜಪೇಟೆ, ಮಾಲತೇಶ ದೇವಗಿರಿ, ಅಮೃತಕುಮಾರ ಕೆಂಚನಗೌಡರ ಇವರಿಗೆ ಹೊಸ ಸದಸ್ಯತ್ವ ನೀಡಲಾಯಿತು.