ಭತ್ತದಲ್ಲಿ ದುಂಡಾಣು ಮಚ್ಚೆ ರೋಗ ಪತ್ತೆ

KannadaprabhaNewsNetwork |  
Published : Sep 06, 2025, 01:01 AM IST
ಕಂಪ್ಲಿ ತಾಲೂಕಿನ ಸಣಾಪುರ ಗ್ರಾಮದ ಬಳಿ ರೈತ ಕೆ.ಕೃಷ್ಣರವರ ಜಮೀನಿನಲ್ಲಿ ದುಂಡಾಣು ಮಚ್ಚೆ ರೋಗಕ್ಕೆ ತುತ್ತಾದ ಭತ್ತವನ್ನು ಪರಿಶೀಲಿಸುತ್ತಿರುವ ರೈತ ಮುಖಂಡರು. | Kannada Prabha

ಸಾರಾಂಶ

ಕಳೆದ ಹಲವು ದಿನಗಳಿಂದ ಸುರಿದ ನಿರಂತರ ಮಳೆ, ಹವಾಮಾನ ವೈಪರೀತ್ಯದ ಪರಿಣಾಮವಾಗಿ ತಾಲೂಕಿನ ವಿವಿಧ ಭಾಗಗಳಲ್ಲಿನ ಭತ್ತದ ಬೆಳೆ ದುಂಡಾಣು ಮಚ್ಚೆ ವೈರಸ್‌ (ಎಲೆ ಒಣಗುವ ರೋಗ) ಬಾಧೆಗೆ ಒಳಗಾಗಿದೆ. ಇದರ ಪರಿಣಾಮವಾಗಿ ಅನ್ನದಾತರಲ್ಲಿ ಭಾರೀ ಆರ್ಥಿಕ ನಷ್ಟದ ಆತಂಕ ಮೂಡಿದೆ.

ಅನ್ನದಾತರಲ್ಲಿ ಭಾರೀ ಆರ್ಥಿಕ ನಷ್ಟದ ಆತಂಕಬಿ.ಎಚ್.ಎಂ. ಅಮರನಾಥಶಾಸ್ತ್ರಿ

ಕನ್ನಡಪ್ರಭ ವಾರ್ತೆ ಕಂಪ್ಲಿ

ಕಳೆದ ಹಲವು ದಿನಗಳಿಂದ ಸುರಿದ ನಿರಂತರ ಮಳೆ, ಹವಾಮಾನ ವೈಪರೀತ್ಯದ ಪರಿಣಾಮವಾಗಿ ತಾಲೂಕಿನ ವಿವಿಧ ಭಾಗಗಳಲ್ಲಿನ ಭತ್ತದ ಬೆಳೆ ದುಂಡಾಣು ಮಚ್ಚೆ ವೈರಸ್‌ (ಎಲೆ ಒಣಗುವ ರೋಗ) ಬಾಧೆಗೆ ಒಳಗಾಗಿದೆ. ಇದರ ಪರಿಣಾಮವಾಗಿ ಅನ್ನದಾತರಲ್ಲಿ ಭಾರೀ ಆರ್ಥಿಕ ನಷ್ಟದ ಆತಂಕ ಮೂಡಿದೆ.

ತುಂಗಭದ್ರಾ ನದಿ ಪಾತ್ರದ ಕಂಪ್ಲಿ, ಬೆಳಗೋಡುಹಾಳ್, ಸಣಾಪುರ, ಇಟಗಿ, ಅರಳಿಹಳ್ಳಿ, ನಂ.2 ಮುದ್ದಾಪುರ ಸೇರಿ ಹಲವು ಹಳ್ಳಿಗಳಲ್ಲಿ ವ್ಯಾಪಕವಾಗಿ ಭತ್ತ ಬೆಳೆಯಲಾಗಿದೆ. ಆದರೆ ಇವುಗಳಲ್ಲಿ ಸುಮಾರು 600 ಎಕರೆಗಿಂತ ಹೆಚ್ಚು ಭತ್ತದ ಹೊಲಗಳಲ್ಲಿ ದುಂಡಾಣು ಮಚ್ಚೆ ರೋಗ ವ್ಯಾಪಕವಾಗಿ ಹಬ್ಬಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರೈತರು ಸಸಿ ಮಡಿ, ಯೂರಿಯಾ, ಕೀಟನಾಶಕ ಸಿಂಪಡಣೆ, ಕೃಷಿಕಾರ್ಮಿಕರ ಕೂಲಿ ಸೇರಿದಂತೆ ಪ್ರತಿ ಎಕರೆಗೆ ಸರಾಸರಿ ₹35 ಸಾವಿರಕ್ಕೂ ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ. ಬೆಳೆಗಳು ಈಗ ಕುಸುಮ (ತೆನೆ ಒಡೆಯುವ) ಹಂತ ತಲುಪಿದ ಸಂದರ್ಭದಲ್ಲಿ ರೋಗ ಬಾಧಿಸಿದ್ದು, ತೆನೆ ಕಾಣದೇ ಬೆಳೆ ಸಂಪೂರ್ಣ ಒಣಗಿ ಹೋಗುವ ಸಾಧ್ಯತೆ ಹೆಚ್ಚು. ಅಂತಿಮವಾಗಿ ರೈತರ ಕೈಗೆ ಒಣ ಮೇವು ಮಾತ್ರ ಸಿಗುವ ಪರಿಸ್ಥಿತಿ ಎದುರಾಗಿದೆ.

ಈ ಬಾರಿ ಉತ್ತಮ ಮಳೆಯಾದ ಕಾರಣ ನಮ್ಮೆಲ್ಲರಿಗೂ ಸಂತೋಷವಾಯಿತು. ಭತ್ತ ಬೆಳೆದು ಉತ್ತಮ ಧಾನ್ಯ ದೊರೆಯುತ್ತದೆ ಎಂಬ ನಿರೀಕ್ಷೆಯೊಂದಿಗೆ ಸಾಲ-ಸೂಲ ಮಾಡಿಕೊಂಡು ಭತ್ತ ಬಿತ್ತನೆ ಮಾಡಿದ್ದೇವೆ. ಬೆಳೆಯು ಸಹ ಉತ್ತಮವಾಗಿ ಬೆಳೆದಿತ್ತು. ಆದರೆ ತೆನೆ ಕಾಣಿಸಿಕೊಳ್ಳುವಷ್ಟರಲ್ಲಿ ದುಂಡಾಣು ಮಚ್ಚೆ ವೈರಸ್ ವ್ಯಾಪಕವಾಗಿ ಹಬ್ಬಿದೆ. ಈಗ ನಾವು ಮಾಡಿದ ಹೂಡಿಕೆ ಎಲ್ಲವೂ ವ್ಯರ್ಥವಾಗುವ ಭೀತಿ ಮೂಡಿದೆ. ಇನ್ನು ನಮ್ಮನ್ನು ದೇವರೇ ಕಾಪಾಡಬೇಕು ಎಂದು ರೈತ ಕೆ. ಕೃಷ್ಣ ತಮ್ಮ ಅಳಲನ್ನು ತೋಡಿಕೊಂಡರು.

ಅದರಲ್ಲೂ ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡಿದ ರೈತರು ಮತ್ತು ಸಾಲ ಪಡೆದ ರೈತರು ಇದೀಗ ನಷ್ಟದ ಭಾರೀ ಹೊರೆ ಹೊರುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.

ರೈತರಿಗೆ ಸಲಹೆ ನೀಡಿ:

ಕೃಷಿ ವಿಜ್ಞಾನಿಗಳು ತಕ್ಷಣವೇ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿ, ತಾಂತ್ರಿಕ ಸಲಹೆ ನೀಡುವುದು ಅಗತ್ಯ. ಅಲ್ಲದೇ ರೋಗ ನಿಯಂತ್ರಣಕ್ಕೆ ಬಾರದ ಪರಿಸ್ಥಿತಿ ಉಂಟಾದಲ್ಲಿ ಸರ್ಕಾರ ತಕ್ಷಣವೇ ರೈತರ ನಷ್ಟವನ್ನು ಅಂದಾಜು ಮಾಡಿ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಒತ್ತಾಯಿಸಿದ್ದಾರೆ. ಭತ್ತಕ್ಕೆ ಕಾಣಿಸಿಕೊಂಡಿರುವ ದುಂಡಾಣು ಮಚ್ಚೆ ವೈರಸ್ ಹತೋಟಿಗೆ ಬರಲು ಪ್ರತಿ ಲೀಟರ್ ನೀರಿಗೆ ಸ್ಟೆಪ್ಪೋಸೈಕ್ಲಿನ್ 0.5 ಗ್ರಾಂ ಹಾಗೂ ಕಾಪರ್ ಅಕ್ಸಿಕ್ಲೋರೈಡ್ (COC) 3 ಗ್ರಾಂ ಬೆರೆಸಿ ಸಿಂಪಡಣೆ ಮಾಡುವುದು ಅಗತ್ಯ. ರೈತರು ತಕ್ಷಣ ಈ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕೃಷಿ ಅಧಿಕಾರಿ ಕೆ. ಸೋಮಶೇಖರ್ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ