ದುಂಡಾಣು ಮಚ್ಚೆ ರೋಗ ಕಾಟ: ಲಕ್ಷಾಂತರ ನಷ್ಟಕ್ಕೆ ಗುರಿಯಾದ ಅನ್ನದಾತರು

KannadaprabhaNewsNetwork |  
Published : Nov 25, 2025, 02:45 AM IST
ಕಂಪ್ಲಿಯಲ್ಲಿ ಭತ್ತವನ್ನು ಕಟಾವುಗೊಳಿಸಿ ರಾಶಿ ಹಾಕಿರುವುದು.  | Kannada Prabha

ಸಾರಾಂಶ

ದುಂಡಾಣು ಮಚ್ಚೆ ರೋಗದ ಬಾಧೆಗೆ ಒಳಗಾಗಿ ವಣಗಿ ಹೋಗಿದ್ದು ಇಳುವರಿಯಲ್ಲಿ ಭಾರಿ ಕುಂಠಿತವಾಗಿದೆ.

ಕಂಪ್ಲಿ: ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ರೈತರು ಬೆಳೆದಿದ್ದ ಭತ್ತದ ಕಣಜಗಳು ದುಂಡಾಣು ಮಚ್ಚೆ ರೋಗದ ಬಾಧೆಗೆ ಒಳಗಾಗಿ ವಣಗಿ ಹೋಗಿದ್ದು ಇಳುವರಿಯಲ್ಲಿ ಭಾರಿ ಕುಂಠಿತವಾಗಿದೆ. ಬಹುತೇಕ ಕಡೆ ಆರ್‌ ಎನ್‌ ಆರ್ ತಳಿಯ ಭತ್ತಕ್ಕೆ ರೋಗ ವ್ಯಾಪಿಸಿರುವುದರಿಂದ ಇಳುವರಿ ಗಣನೀಯವಾಗಿ ಕುಸಿದಿದ್ದು, ಹಲವು ತಿಂಗಳು ಶ್ರಮಿಸಿದ ಅನ್ನದಾತರು ಕಂಗಾಲಾಗಿದ್ದಾರೆ.ತಾಲೂಕಿನಲ್ಲಿ ಒಟ್ಟಾರೆ 18,782 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಅದರಲ್ಲೂ ಬಹುತೇಕ ಜಾಗಗಳಲ್ಲಿ ದುಂಡಾಣು ಮಚ್ಚೆ ರೋಗ ತೀವ್ರವಾಗಿ ಕಂಡುಬಂದಿದೆ. ರೋಗದ ಪರಿಣಾಮವಾಗಿ ಅನೇಕ ರೈತರು ವ್ಯಯಿಸಿದ ಬಂಡವಾಳವನ್ನು ಕೂಡಾ ಮರುಪಡೆಯುವ ಸ್ಥಿತಿ ಇಲ್ಲದಂತಾಗಿದೆ.ವ್ಯಯಿಸಿದ ಹಣ, ಮಾಡಿದ ಶ್ರಮ ಎಲ್ಲವೂ ವ್ಯರ್ಥ : ಎರಡು ಎಕರೆ ಸ್ವಂತ ಜಮೀನು, 33 ಎಕರೆ ಗುತ್ತಿಗೆ ಪಡೆದು ಭತ್ತ ಬೆಳೆದಿದ್ದೇನೆ. ಸಸಿ, ರಸಗೊಬ್ಬರ, ರಾಸಾಯನಿಕ ಸಿಂಪಡಣೆ ಕೃಷಿ ವೆಚ್ಚ ಸೇರಿ ಎಕರೆಗೆ 40 ಸಾವಿರ ರೂ.ಕ್ಕಿಂತ ಹೆಚ್ಚು ವ್ಯಯಿಸಿದೆ. ಸಾಮಾನ್ಯವಾಗಿ 45–50 ಚೀಲ ಇಳುವರಿ, ಎಕರೆಗೆ 80 ಸಾವಿರದವರೆಗೂ ಲಾಭ ನಿರೀಕ್ಷೆ ಇತ್ತು. ಆದರೆ ದುಂಡಾಣು ಮಚ್ಚೆ ರೋಗದಿಂದ ಈ ಬಾರಿ 20–25 ಚೀಲಕ್ಕೂ ಇಳುವರಿ ಸೀಮಿತವಾಗಿದೆ. ಬೆಳೆದ ಭತ್ತಕ್ಕೆ ಉತ್ತಮ ಧರ ಸಿಗದೆ ಹಾಗೆಯೇ ಗುತ್ತಿಗೆ ಜಮೀನಿನ ಮಾಲೀಕರಿಗೆ ಎಕರೆಗೆ 18 ಚೀಲ ಭತ್ತ ನೀಡಬೇಕಿರುವುದರಿಂದ ದೊಡ್ಡ ಹೊರೆ ಬಿದ್ದಿದೆ. ಬಂದ ಇಳುವರಿಯಲ್ಲಿ ಅದರ ಅರ್ಧದಷ್ಟೂ ದೊರೆಯದ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ 7 ಲಕ್ಷ ರೂಪಾಯಿಗಿಂತಲೂ ಹೆಚ್ಚು ನಷ್ಟ ಬಂದಿದೆ. ಸಾಲ ಪಡೆದು ಬೆಳೆದಿದ್ದೇನೆ, ಈಗ ಮುಂದೆ ದಾರಿ ಕಾಣದಂತಾಗಿದೆ ಎಂದು ಕೋಟಾಲ್ ಗ್ರಾಮದ ರೈತ ಆದಿಶೇಷಯ್ಯ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಎರಡನೇ ಬೆಳೆಗೆ ನೀರು ಇಲ್ಲ : ಮತ್ತೊಂದು ಸಂಕಷ್ಟಇನ್ನೊಂದೆಡೆ, ಮೊದಲ ಬೆಳೆ ನಷ್ಟವನ್ನು ಎರಡನೇ ಬೆಳೆಯಲ್ಲಿ ಪರಿಹರಿಸಿಕೊಳ್ಳೋಣ ಎಂಬ ರೈತರ ಆಶೆಗೆ ಸರ್ಕಾರ ‘ತಣ್ಣೀರು ಎರಚಿರುವಂತಾಗಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಾಮಗಾರಿ ಇರುವ ಕಾರಣ ಎರಡನೇ ಬೆಳೆಗೆ ನೀರು ಬಿಡುವುದಿಲ್ಲವೆಂದು ಎಂದು ಇಲಾಖೆ ತಿಳಿಸಿದೆ.ಈ ನಿರ್ಧಾರದಿಂದ ಈಗಾಗಲೇ ಒಂದನೇ ಬೆಳೆ ಭತ್ತದಲ್ಲಿ ನಷ್ಟ ಅನುಭವಿಸಿರುವ ರೈತರಿಗೆ ಮತ್ತೊಂದು ಆಘಾತ ಎದುರಾಗಿದೆ. ನೀರಾವರಿ ಇಲ್ಲದ ಕಾರಣ ಎರಡನೇ ಬೆಳೆ ಸಾಧ್ಯವಾಗದಿರುವುದು, ಅವರಿಗಿರುವ ಸಾಲಭಾರ ಹಾಗೂ ನಷ್ಟದ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.ದುಂಡಾಣು ಮಚ್ಚೆ ರೋಗದ ಪರಿಣಾಮದಿಂದ ಸಂಪೂರ್ಣ ತಾಲೂಕಿನ ರೈತರ ಜೀವನವೇ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದಿಂದ ತುರ್ತು ನೆರವು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಬಿ.ವಿ.ಗೌಡ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ.

PREV

Recommended Stories

ಧರ್ಮಸ್ಥಳ ಗ್ರಾಮದಲ್ಲಿ ಶವ ಬಗ್ಗೆ ಬುರುಡೆ ಬಿಟ್ಟ ಚಿನ್ನಯ್ಯಗೆ ಬೇಲ್
ಕೈ ರೆಬೆಲ್ಸ್‌ ಜತೆ ಸೇರಿ ನಾವು ಸರ್ಕಾರ ಮಾಡಲ್ಲ : ಅಶೋಕ್‌