ರೌಡಿ ಹತ್ಯೆ: ಶಾಸಕರ ಐವರು ಬೆಂಬಲಿಗರ ಸೆರೆ

KannadaprabhaNewsNetwork |  
Published : Jul 17, 2025, 01:45 AM IST
Venugopaal | Kannada Prabha

ಸಾರಾಂಶ

ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಹಾಗೂ ಕೆ.ಆರ್‌. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಬೆಂಬಲಿಗರು ಎನ್ನಲಾದ ಐವರನ್ನು ಭಾರತಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಹತ್ಯೆ ಪ್ರಕರಣ ಸಂಬಂಧ ಮಾಜಿ ಸಚಿವ ಹಾಗೂ ಕೆ.ಆರ್‌. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜು ಬೆಂಬಲಿಗರು ಎನ್ನಲಾದ ಐವರನ್ನು ಭಾರತಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಹೆಣ್ಣೂರಿನ ಕಿರಣ್, ವಿಮಲ್‌, ಪ್ಯಾಟ್ರಿಕ್, ಸಂತೋಷ್‌ ಹಾಗೂ ನವೀನ್‌ ಪೊಲೀಸರ ಬಲೆಗೆ ಬಿದ್ದಿದ್ದು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಹಲಸೂರು ಕೆರೆ ಸಮೀಪ ಮಂಗಳವಾರ ರಾತ್ರಿ ರೌಡಿ ಬಿಕ್ಲು ಶಿವನ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಐವರನ್ನು ಪೊಲೀಸರು ವಶಕ್ಕೆ ಪಡೆದು ಡ್ರಿಲ್‌ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಆರೋಪಿಗಳ ಜತೆ ಶಾಸಕರ ಕುಂಭಮೇಳ ಪಯಣ

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದಿದ್ದ ಕುಂಭಮೇಳಕ್ಕೆ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಜತೆ ಶಾಸಕ ಬೈರತಿ ಬಸವರಾಜು ಹೋಗಿದ್ದರು ಎಂದು ಆರೋಪಿಸಲಾಗಿದೆ.

ಶಾಸಕರ ಕುಂಭಮೇಳ ಪ್ರವಾಸದ ಸಂಬಂಧ ಪೋಟೋಗಳು ವೈರಲ್ ಆಗಿದ್ದು, ಇವು ಕೊಲೆ ಪ್ರಕರಣದಲ್ಲಿ ಅವರಿಗೆ ಮತ್ತಷ್ಟು ಸಂಕಷ್ಟ ತಂದಿವೆ. ಹಲವು ವರ್ಷಗಳಿಂದ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಹೆಣ್ಣೂರು ಜಗದೀಶ್ ಅಲಿಯಾಸ್ ಜಗನ ಜತೆ ಶಾಸಕ ಬೈರತಿ ಬಸವರಾಜು ಒಡನಾಟವಿದೆ ಎನ್ನಲಾಗಿದೆ. ಆದರೆ ಈ ಸ್ನೇಹವನ್ನು ಶಾಸಕರು ನಿರಾಕರಿಸಿದ್ದರು. ಆದರೆ ಕುಂಭಮೇಳದಲ್ಲಿ ಆರೋಪಿ ಜತೆ ಶಾಸಕ ಬೈರತಿ ಬಸವರಾಜು ಹಾಗೂ ಅವರ ಬೆಂಬಲಿಗ ಬಿಬಿಎಂಪಿ ಮಾಜಿ ಸದಸ್ಯರು ಪಾಲ್ಗೊಂಡಿದ್ದ ಪೋಟೋಗಳು ಭಾರಿ ಚರ್ಚೆಗೆ ಕಾರಣವಾಗಿದೆ. ಚಾಲಕ, ಅಂಗರಕ್ಷಕನ ವಿಚಾರಣೆ

ಈ ಹತ್ಯೆ ಪ್ರಕರಣ ಸಂಬಂಧ ಮೃತನ ಕಾರು ಚಾಲಕ ಲೋಕೇಶ್ ಹಾಗೂ ಅಂಗ ರಕ್ಷಕ ಇಮ್ರಾನ್‌ನನ್ನು ಭಾರತಿನಗರ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿದ್ದಾರೆ. ತನ್ನ ಮಾಲಿಕ ಶಿವ ರಕ್ಷಣೆಗೆ ಧಾವಿಸಿದ್ದ ಇಮ್ರಾನ್‌ ಮೇಲೂ ಸಹ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇಬ್ಬರು ಮನೆಗೆ ಮರಳಿದ್ದರು. ಪೊಲೀಸರ ಸೂಚನೆ ಮೇರೆಗೆ ಇಮ್ರಾನ್ ಹಾಗೂ ಲೋಕೇಶ್ ವಿಚಾರಣೆ ಹಾಜರಾಗಿದ್ದರು ಎನ್ನಲಾಗಿದೆ.

ದಿನವಿಡೀ ಮನೆ ಮುಂದೆ ಹೊಂಚು ಹಾಕಿ ಹತ್ಯೆ

ಬಿಕ್ಲು ಶಿವನ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಗಳು, ಮಂಗಳವಾರ ದಿನವಿಡೀ ಆತನ ಮನೆ ಮುಂದೆ ಹೊಂಚು ಹಾಕಿ ಕೊನೆಗೆ ರಾತ್ರಿ ದಾಳಿ ನಡೆಸಿದ್ದರು. ಎರಡು ದಿನಗಳ ಹಿಂದೆ ಸ್ನೇಹಿತನ ಬರ್ತ್‌ ಡೇ ಪಾರ್ಟಿಗೆ ಹೊರ ಹೋಗಿದ್ದ ಶಿವ, ಅಲ್ಲಿಂದ ಮಂಗಳವಾರ ನಸುಕಿನಲ್ಲಿ ಮನೆಗೆ ಮರಳಿದ್ದ. ಬಳಿಕ ದಿನವಿಡೀ ಮನೆಯಲ್ಲೇ ಶಿವ ವಿಶ್ರಾಂತಿ ಪಡೆಯುತ್ತಿದ್ದ. ರಾತ್ರಿ 8 ಗಂಟೆ ಸುಮಾರಿಗೆ ಮನೆಯಿಂದ ಹೊರ ಬರುತ್ತಿದ್ದಂತೆ ಹಂತಕ ಪಡೆ ಆತನ ಮೇಲೆರಗಿದೆ ಎಂದು ತಿಳಿದು ಬಂದಿದೆ.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ