ಕೋಲಾರ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಹಾಗೂ ಸಿ.ಎಲ್.೭ ಯಾರಿಗೂ ನೀಡವಂತಿಲ್ಲ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದೆ, ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ದೂರುಗಳು ಬಂದಲ್ಲಿ ಸಂಬಂಧ ಪಟ್ಟ ಅಬಕಾರಿ ಅಧಿಕಾರಿಗಳನ್ನು ಜವಾಬ್ದಾರಿಯನ್ನಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.
ನಗರದಲ್ಲಿ ಕೆ.ಡಿ.ಪಿ. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಎರಡನೇಯ ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸಿದ್ದೇನೆ. ಇತ್ತೀಚೆಗೆ ಡ್ರಗ್ಸ್ ಮಾರಾಟದ ದಂಧೆಯು ವ್ಯಾಪಕವಾಗಿದ್ದು ಹಲವಾರು ಕಾನೂನು ಬಾಹಿರ ಚಟುವಟಿಕೆಗಳಿಗೆ ಕಾರಣವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಡ್ರಗ್ಸ್ ನಿಯಂತ್ರಣಾಧಿಕಾರಿಗಳೊಂದಿಗೆ ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳಿಗೂ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.ಡ್ರಗ್ಸ್ ನಿಯಂತ್ರಣಾ ಅಧಿಕಾರಿಗಳ ನಿರ್ಲಕ್ಷತೆಯಿಂದಾಗಿ ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯ ಹೆಚ್ಚಳವಾಗಲು ಕಾರಣವಾಗಿದೆ. ಈ ಸಂಬಂಧವಾಗಿ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಯನ್ನು ವಿಚಾರಣೆಗೆ ಒಳಪಡಿಸಿ ತಪ್ಪಿತಸ್ಥರಾಗಿದ್ದಲ್ಲಿ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸೂಚಿಸಿದೆ. ಅವರನ್ನು ಅಮಾನತ್ತುಪಡಿಸಲು ನಮಗೆ ಅಧಿಕಾರ ಇಲ್ಲದ ಕಾರಣ ಜಿಲ್ಲಾಧಿಕಾರಿ ಶಿಫಾರಸ್ಸು ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರೌಡಿಸಂ ಚಟುವಟಿಕೆಗಳು ಹೆಚ್ಚಾಗಿದೆ. ಇದನ್ನು ನಿಯಂತ್ರಿಸಬೇಕಾದ ಪೊಲೀಸರನ್ನು ಚುರುಕುಗೊಳಿಸ ಬೇಕಾಗಿದೆ. ಆರೋಪಿಗಳ ವಿರುದ್ಧ ರೌಡಿಶೀಟ್ ತೆರೆದು ಗಡಿಪಾರು ಮಾಡಬೇಕು. ರೌಡಿ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ರೌಡಿಗಳ ಪರ ಯಾವುದೇ ಶಿಫಾರಸ್ಸುಗಳನ್ನು ಪರಿಗಣಿಸಬಾರದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಖಡಕ್ ಆದೇಶ ನೀಡಲಾಗಿದೆ ಎಂದರು.ಕೃಷಿಗೆ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ನಕಲಿ ಬಿತ್ತನೆ, ರಾಸಾಯನಿಕ ಗೊಬ್ಬರಗಳು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಅವರಿಗೆ ಮಾರಾಟ ಮಾಡಲು ನೀಡಿರುವ ಪರವಾನಗಿ ದ್ದುಪಡಿಸಲು ಸೂಚಿಸಲಾಗಿದೆ. ರೈತರಿಗೆ ಕೃಷಿಗೆ ಅಗತ್ಯವಾದ ಕೆರೆ ಮಣ್ಣು ಪಡೆಯಲು ಪಂಚಾಯಿತಿಯ ಪಿಡಿಓಗಳಿಗೆ ನಿಮ್ಮ ಜಮೀನಿನ ಪಹಣಿಯ ನಕಲಿನೊಂದಿಗೆ ಅರ್ಜಿ ನೀಡಿ ಯಾವೂದೇ ಶುಲ್ಕ ಪಾವತಿಸದೆ ಉಚಿತವಾಗಿ ಮಣ್ಣನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಈಗಾಗಲೇ ರೌಡಿಸಂ ಮೂಲಕ ಸಾರ್ವಜನಿಕರನ್ನು ಭಯ ಭೀತಿಗೆ ಒಳಪಡಿಸಿದವರ ವಿರುದ್ಧ ಹಾಗೂ ಡ್ರಗ್ಸ್ ಮಾಫಿಯಗಳ ವಿರುದ್ದ ಗೂಂಡಾಕಾಯ್ದೆಯಡಿ ಪ್ರಕರಣ ದಾಖಲು ಮಾಡಿ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ, ೨೭ ಠಾಣೆಗಳ ಪೈಕಿ ೩ ಠಾಣೆಗಳ ಎಸ್.ಐಗಳನ್ನು ಅಮಾನತ್ತುಪಡಿಸಲಾಗಿದ್ದು ಅವರ ಬದಲಾಗಿ ಶಿಸ್ತುಬದ್ಧತೆಯಿಂದ ಇರುವ ೩ ಮಂದಿ ಪೊಲೀಸ್ ಎಸ್.ಐಗಳನ್ನು ನಿಯೋಜಿಸಲು ಗೃಹ ಇಲಾಖೆಗೆ ಸೂಚಿಸಲಾಗಿದೆ ಎಂದರು.ಕೋಲಾರದ ಪೌರಾಯುಕ್ತರು ಜನಪ್ರತಿನಿಧಿಗಳ ಮನವಿಗೂ ಸ್ಫಂದಿಸದೆ ಉದ್ಧಟತದಿಂದ ವರ್ತಿಸಿರುವ ಕಾರಣ ಅವರನ್ನು ವರ್ಗಾವಣೆ ಮಾಡಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗೆ ಸೂಚಿಸಿದೆ. ಆರೋಗ್ಯ ಇಲಾಖೆಯಲ್ಲಿ ಒಂದು ತಿಂಗಳಲ್ಲಿ ೧೫೫೦ ಎಂ.ಆರ್.ಐ ಸ್ಕಾನ್ ಮಾಡಿರುವುದು ಶ್ಲಾಘನೀಯ, ಸಾರ್ವಜನಿಕರ ಕೆಲಸಗಳನ್ನು ಪಾರದರ್ಶಕವಾಗಿ ಮಾಡುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಜಿಲ್ಲಾ ಸಚಿವರು ತಿಳಿಸಿದರು.