ಕನ್ನಡಪ್ರಭ ವಾರ್ತೆ ಮೈಸೂರು ನಗರದ ಕ್ಯಾತಮಾರನಹಳ್ಳಿ ಬಡಾವಣೆಯ ರೌಡಿ ಶೀಟರ್ ಕಾರ್ತಿಕ್ [33] ಎಂಬವನನ್ನು ಭಾನುವಾರ ತಡರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದೆ.ನಗರದ ಹೊರವಲಯದ ಹೋಟೆಲ್ ಬಳಿ ಕೊಲೆ ನಡೆದಿದ್ದು, ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.ತಡರಾತ್ರಿ ಘಟನೆ ನಡೆದಿದ್ದು, 5 ಜನರ ತಂಡದಿಂದ ಈ ದುಷ್ಕೃತ್ಯ ನಡೆಸಿರುವುದು ಹೊಟೇಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವರುಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಎರಡು ತಂಡ ರಚನೆ: ರೌಡಿ ಶೀಟರ್ ಕಾರ್ತಿಕ್ ಕೊಲೆ ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಲಾಗಿದೆ. ಮೈಸೂರು ನಗರ, ಹೊರ ವಲಯ ಹಾಗೂ ಪಕ್ಕದ ಜಿಲ್ಲೆಯಲ್ಲೂ ಪೊಲೀಸರಿಂದ ತಲಾಷ್ ನಡೆದಿದೆ.ಸದ್ಯ ಹಣಕಾಸಿನ ವಿಚಾರ ಹಾಗೂ ಮಹಿಳೆ ವಿಚಾರವಾಗಿ ಕೊಲೆ ನಡೆದಿರುವ ಶಂಕೆಯ ಮೇಲೆ ತನಿಖೆ ಕೈಗೊಂಡಿರುವ ಪೊಲೀಸರು, ಕಾರ್ತಿಕ್ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.ಊಟಕ್ಕೆ ಕರೆದು ಕೊಂದರು: ನಿನ್ನೆ ರಾತ್ರಿ ನನ್ನ ಮಗ ಕರೆ ಮಾಡಿದ್ದ. ಊಟಕ್ಕೆ ಬಾ ಎಂದಿದ್ದೆ. ಊಟ ಮುಗಿಸಿ ಹೋಗುವಾಗ ಒಂದು ಫೋನ್ ಬಂತು. ಲಕ್ಷ್ಮೀ ಎನ್ನುವ ಹುಡುಗಿ ಕರೆ ಮಾಡಿದ್ದಾಳೆ. ಆಕೆ ನನ್ನ ಮಗನ ಸ್ನೇಹಿತೆ. ಆಕೆಯ ಕರೆಯ ಬಳಿಕ ಮಗ ಮನೆಯಿಂದ ನೇರವಾಗಿ ಹೋಟೆಲ್ ಗೆ ಹೋಗಿದ್ದಾನೆ. ಅಲ್ಲಿ ಪ್ರವೀಣ್ ಎಂಬಾತ ಹೊಡೆದಿದ್ದಾನೆ ಎಂದು ನಮ್ಮವರು ಹೇಳುತ್ತಿದ್ದಾರೆ. ಪ್ರವೀಣ್ ನನ್ನ ಮಗ ಕಾರ್ತಿಕ್ ಜೊತೆಯೇ ಇದ್ದ. ಇದೇ ಲಕ್ಷ್ಮೀ ವಿಚಾರಕ್ಕೆ ಈ ಹಿಂದೆ ನನ್ನ ಮಗನಿಗೂ ಪ್ರವೀಣ್ ಗೂ ಗಲಾಟೆ ಆಗಿತ್ತು. ಪ್ರವೀಣ್ ಗೆ ಬೈದು ಕಳುಹಿಸಿದ್ದ. ಒಂದೂವರೆ ವರ್ಷದವರೆಗೆ ಆತ ಎಲ್ಲಿಯೂ ಕಾಣಿಸಿರಲಿಲ್ಲ. ಈಗ ಬಂದು ಈ ರೀತಿ ಮಾಡಿದ್ದಾನೆ. ಆತನ ಜೊತೆ ಯಾರಿದ್ದರೆಂದು ಗೊತ್ತಿಲ್ಲ. ನನಗೆ ಲಕ್ಷ್ಮೀ, ಪ್ರವೀಣ್ ಮೇಲೆ ಅನುಮಾನವಿದೆ ಎಂದು ಕಾರ್ತಿಕ್ ಅವರ ತಾಯಿ ಶಾಂತಕುಮಾರಿ ಆರೋಪಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾತನಾಡಿ, ಒಂದು ಗುಂಪು ರಾತ್ರಿ ಯುವಕನನ್ನು ಕೊಲೆ ಮಾಡಿದ್ದಾರೆ. ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸುತ್ತೇವೆ ಎಂದಿದ್ದಾರೆ.ಸ್ನೇಹಿತನಿಂದ ನಂಬಿಕೆ ದ್ರೋಹ: ಸ್ನೇಹಿತನ ನಂಬಿ ಹೋಗಿ ಕೊಲೆಯಾಗಿದ್ದಾನೆ. ಇದೆಲ್ಲವೂ ಕೂಡ ಆ ಹುಡುಗಿಯಿಂದಲೇ ಆಗಿರೋದು. ಮಲಗಿದ್ದ ಹುಡುಗನನ್ನು ಮಾತನಾಡಲು ಕರೆದು ಕೊಲೆ ಮಾಡಿದ್ದಾರೆ. ರಾಜಿ ಮಾಡಿಕೊಳ್ಳಲು ಬಂದು ಪ್ರವೀಣ್ ಹಾಗೂ ಇತರರು ಈ ಕೃತ್ಯ ಎಸಗಿದ್ದಾರೆ.ಈ ಹಿಂದೆ ಕಾರ್ತಿಕ್ ಹಾಗೂ ಪ್ರವೀಣ್ ಮಧ್ಯೆ ಗಲಾಟೆ ಆಗಿತ್ತು. ಯಾಕೆ ಏನು ಎಂಬ ವಿಚಾರ ಹೇಳಿರಲಿಲ್ಲ. ಕಾರ್ತಿಕ್ ಬೈದು ಹೊಡೆದು ಬುದ್ಧಿ ಹೇಳಿ ಕಳುಹಿಸಿದ್ದ. ಈಗ ಆತನೇ ಹಳೆಯ ದ್ವೇಷ ಇಟ್ಟುಕೊಂಡು ಕೊಲೆ ಮಾಡಿದ್ದಾನೆ. ಲಕ್ಷ್ಮಿ ಎಂಬ ಹುಡುಗಿಯ ವಿಚಾರಕ್ಕೆ ಗಲಾಟೆ ಆಗಿತ್ತು. ಅಂದಿನಿಂದಲೂ ಪ್ರವೀಣ್ ಎಲ್ಲಿಯೂ ಕಾಣಿಸಿರಲಿಲ್ಲ. ಈಗ ಏಕಾಏಕಿ ರಾಜಿಗೆ ಕರೆದು ಕೊಲೆ ಮಾಡಿದ್ದಾರೆ. ಪ್ರವೀಣ್ ಜೊತೆ ಇನ್ನೂ ಅನೇಕರು ಇದ್ದಾರೆ.ಕನಕಗಿರಿ ಅಭಿ ಹುಡುಗರೂ ಇದ್ದರು ಎನ್ನುತ್ತಿದ್ದಾರೆ. ಕಾರ್ತಿಕ್ ಒಳ್ಳೆಯ ಹುಡುಗ, ಬಡವರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದ ವ್ಯಕ್ತಿ ಆತ.- ಪದ್ಮನಾಭನ್, ಮೃತ ಕಾರ್ತಿಕ್ ಸಂಬಂಧಿ.