ಒಂದೇ ವಾರದಲ್ಲಿ ಮಂಗ್ಳೂರಲ್ಲಿ ಮತ್ತೆ ಹರಿದ ನೆತ್ತರು; ರೌಡಿಶೀಟರ್‌ ಸುಹಾಸ್‌ ಶೆಟ್ಟಿ ಹತ್ಯೆ

KannadaprabhaNewsNetwork |  
Published : May 02, 2025, 01:33 AM IST
ಹತ್ಯೆ ನಡೆಸುತ್ತಿರುವ ವಿಡಿಯೋ ತುಣುಕು | Kannada Prabha

ಸಾರಾಂಶ

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ಫಾಜಿಲ್‌ ಹತ್ಯೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಿಂದೂ ಸಂಘಟನೆ ಕಾರ್ಯಕರ್ತ, ರೌಡಿಶೀಟರ್‌ ಸುಹಾಸ್‌ ಶೆಟ್ಟಿ(32) ಎಂಬಾತನ ಬರ್ಬರ ಕೊಲೆ ಮಾಡಲಾಗಿದೆ. ಇದು ಕೂಡ ಫಾಜಿಲ್‌ ಹತ್ಯೆಗೆ ನಡೆಸಿದ ಪ್ರತೀಕಾರದ ಕೊಲೆ ಎಂದು ಹೇಳಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಗುಂಪು ಹತ್ಯೆ ಪ್ರಕರಣದಿಂದ ತತ್ತರಿಸಿದ್ದ ಮಂಗಳೂರಿನಲ್ಲಿ ಒಂದೇ ವಾರದ ಅಂತರದಲ್ಲಿ ಇನ್ನೊಂದು ಹತ್ಯೆ ಘಟನೆ ಗುರುವಾರ ಸಂಭವಿಸಿದೆ. ಮಂಗಳೂರು ಹೊರವಲಯದ ಕುಡುಪು ಮೈದಾನದಲ್ಲಿ ಕೇರಳ ನಿವಾಸಿ ಅಶ್ರಫ್‌ ಎಂಬಾತನನ್ನು ಏಪ್ರಿಲ್‌ 27ರಂದು ಪಾಕಿಸ್ತಾನ ಜಿಂದಾಬಾದ್‌ ಹೇಳಿದ ಆರೋಪದಲ್ಲಿ ಗುಂಪು ಹತ್ಯೆ ನಡೆಸಿದ ಘಟನೆ ಮಾಸುವ ಮುನ್ನವೇ ಗುರುವಾರ ಮಂಗಳೂರು ಹೊರ ವಲಯದಲ್ಲಿ ಮತ್ತೊಮ್ಮೆ ರಕ್ತಹರಿದಿದೆ.

ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ಫಾಜಿಲ್‌ ಹತ್ಯೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹಿಂದೂ ಸಂಘಟನೆ ಕಾರ್ಯಕರ್ತ, ರೌಡಿಶೀಟರ್‌ ಸುಹಾಸ್‌ ಶೆಟ್ಟಿ(32) ಎಂಬಾತನ ಬರ್ಬರ ಕೊಲೆ ಮಾಡಲಾಗಿದೆ. ಇದು ಕೂಡ ಫಾಜಿಲ್‌ ಹತ್ಯೆಗೆ ನಡೆಸಿದ ಪ್ರತೀಕಾರದ ಕೊಲೆ ಎಂದು ಹೇಳಲಾಗುತ್ತಿದೆ.

ರೌಡಿಶೀಟರ್‌ ಆಗಿ ಗುರುತಿಸಿಕೊಂಡಿದ್ದ ಸುಹಾಸ್‌ ಶೆಟ್ಟಿಯನ್ನು ಗುರುವಾರ ರಾತ್ರಿ ನಾಲ್ವರ ತಂಡವೊಂದು ಬಜಪೆಯಲ್ಲಿ ತಲವಾರಿನಲ್ಲಿ ಕೊಚ್ಚಿ ಕೊಲೆ ಮಾಡಿದೆ.

ಮಂಗಳೂರು ಹೊರ ವಲಯದ ಬಜಪೆಯ ಕಿನ್ನಿಪದವು ಎಂಬಲ್ಲಿ ರಾತ್ರಿ 8.30ರ ಸುಮಾರಿಗೆ ತಲವಾರು ದಾಳಿ ನಡೆದಿದ್ದು, ದುಷ್ಕರ್ಮಿಗಳು ಸುಹಾಸ್‌ ಶೆಟ್ಟಿಯನ್ನು ನಡು ರಸ್ತೆಯಲ್ಲೇ ಕೊಚ್ಚಿ ಕೊಚ್ಚಿ ಕೊಂದು ಹಾಕಿದ್ದಾರೆ. ಈ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಲ್ಲದೆ ಸ್ಥಳೀಯ ಮಹಡಿಯಿಂದ ಯಾರೋ ಮಾಡಿದ ವಿಡಿಯೋ ತುಣುಕು ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಸುಹಾಸ್‌ ಶೆಟ್ಟಿ ಇನ್ನೋವಾ ಕಾರಿನಲ್ಲಿ ಸ್ನೇಹಿತರೊಂದಿಗೆ ಬಜಪೆಯ ಕಿನ್ನಿಕಂಬಳ ಬಳಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಬೆನ್ನಟ್ಟಿದ್ದಾರೆ. ದುಷ್ಕರ್ಮಿಗಳು ಸ್ವಿಫ್ಟ್‌ ಮತ್ತು ಮೀನಿನ ಪಿಕಪ್‌ ವಾಹನದಲ್ಲಿ ಸುಹಾಸ್‌ ಶೆಟ್ಟಿಯ ಕಾರನ್ನು ಅಡ್ಡಗಟ್ಟಿದ್ದಾರೆ. ಆಗ ಸುಹಾಸ್‌ ಶೆಟ್ಟಿ ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಅಲ್ಲೇ ಇದ್ದ ಹೇರ್‌ ಕಟ್ಟಿಂಗ್‌ ಸೆಲೂನ್‌ಗೆ ನುಗ್ಗಿದೆ. ಈ ವೇಳೆ ಸುಹಾಸ್‌ ಶೆಟ್ಟಿ ಕಾರಿನಿಂದ ಇಳಿಯುತ್ತಿದ್ದಂತೆ ನಾಲ್ಕರಿಂದ ಐದು ಮಂದಿ ಇದ್ದ ತಂಡ ಆತನನ್ನು ಬೆನ್ನಟ್ಟಿ ಸಾರ್ವಜನಿಕರ ಎದುರೇ ತಲವಾರಿನಿಂದ ಮನಸೋಇಚ್ಛೆ ಕಡಿದು ಹತ್ಯೆ ಮಾಡಿದೆ. ಬಳಿಕ ತಂಡ ಪರಾರಿಯಾಗಿದೆ. ಸುಹಾಸ್‌ ಜೊತೆ ಕಾರಿನಲ್ಲಿ ಸಂಜಯ್‌, ಪ್ರಜ್ವಲ್‌, ಅನ್ವಿತ್‌, ಲತೇಶ್‌, ಶಶಾಂಕ್‌ ಇದ್ದರು. ಈ ವೇಳೆ ಕಾರಿನಲ್ಲಿದ್ದ ಓರ್ವ ಸ್ನೇಹಿತ ಕೂಡ ಗಾಯಗೊಂಡಿದ್ದಾಗಿ ಹೇಳಲಾಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಹಾಸ್‌ ಶೆಟ್ಟಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾಗಿ ಹೇಳಲಾಗಿದೆ. ಈ ಘಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಯ ಎದುರು ಭಾರಿ ಸಂಖ್ಯೆಯಲ್ಲಿ ಹಿಂದು ಕಾರ್ಯಕರ್ತರು ಸೇರಿದ್ದಾರೆ. ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ, ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌, ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌ ಮತ್ತಿತತರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಅಲ್ಲಲ್ಲಿ ನಾಕಾಬಂದಿ ಹಾಕಿದ್ದಾರೆ, ಮಂಗಳೂರು ನಗರಕ್ಕೆ ಹೆಚ್ಚಿನ ಪಡೆಯನ್ನು ಕರೆಸಲಾಗಿದೆ. ಪೊಲೀಸರು ಬಿಗು ಬಂದೋಬಸ್ತ್‌ ಕೈಗೊಂಡಿದ್ದಾರೆ. ಬಜಪೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

2022ರ ಜುಲೈ 28 ರಂದು ಸುರತ್ಕಲ್‌ ಪೇಟೆಯಲ್ಲಿ ಫಾಜಿಲ್‌ನ ಹತ್ಯೆಯಾಗಿತ್ತು. ಈ ಕೇಸಿನಲ್ಲಿ ಸುಹಾಸ್‌ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಸುಹಾಸ್‌ ಶೆಟ್ಟಿ ಈ ಹಿಂದೆ ಬಜರಂಗದಳದಲ್ಲಿದ್ದು, ಗೋರಕ್ಷಣೆಯಲ್ಲಿ ಸಕ್ರಿಯನಾಗಿದ್ದ. ಕೊಲೆ, ಕೊಲೆಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತನ ಮೇಲೆ ರೌಡಿಶೀಟ್‌ ತೆರೆಯಲಾಗಿತ್ತು. ಬಳಿಕ ಈತ ಸಂಘಟನೆಯಿಂದ ದೂರ ಉಳಿದಿದ್ದ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ