ಎಕರೆಗೆ 1.60 ಕೋಟಿ ರು. ನಿಗದಿ: ರೈತರ ಆಕ್ರೋಶ

KannadaprabhaNewsNetwork |  
Published : Aug 30, 2025, 01:00 AM IST
ಪೋಟೋ 5 : ತ್ಯಾಮಗೊಂಡ್ಲು ಹೋಬಳಿಯ ಕೆಂಚನಪುರದ ಜಮೀನು ಸ್ವಾಧೀನ ಸಂಬಂಧ ಭೂದರ ನಿಗದಿ ಸಭೆಯಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಏಕಪಕ್ಷೀಯವಾಗಿ ದರ ನಿಗದಿ ಮಾಡಿದ್ದಕ್ಕೆ ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. | Kannada Prabha

ಸಾರಾಂಶ

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕೆಂಚನಪುರದ ಗ್ರಾಮದ ಜಮೀನನ್ನು ಕ್ವಿನ್ ಸಿಟಿಗಾಗಿ ನಿರ್ಮಾಣಕ್ಕೆ ಸರ್ಕಾರ ಭೂ ಸ್ವಾಧೀನಪಡಿಸಿಕೊಂಡು ಎಕರೆಗೆ ಪರಿಹಾರವಾಗಿ ಎಕರೆಗೆ 1.60 ಕೋಟಿ ರುಪಾಯಿ ನೀಡಲು ನಿರ್ಧರಿಸಿದ ವಿಶೇಷ ಜಿಲ್ಲಾಧಿಕಾರಿ ರಘುನಂದನ್ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಕೆಂಚನಪುರದ ಗ್ರಾಮದ ಜಮೀನನ್ನು ಕ್ವಿನ್ ಸಿಟಿಗಾಗಿ ನಿರ್ಮಾಣಕ್ಕೆ ಸರ್ಕಾರ ಭೂ ಸ್ವಾಧೀನಪಡಿಸಿಕೊಂಡು ಎಕರೆಗೆ ಪರಿಹಾರವಾಗಿ ಎಕರೆಗೆ 1.60 ಕೋಟಿ ರುಪಾಯಿ ನೀಡಲು ನಿರ್ಧರಿಸಿದ ವಿಶೇಷ ಜಿಲ್ಲಾಧಿಕಾರಿ ರಘುನಂದನ್ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ತ್ಯಾಮಗೊಂಡ್ಲು ಪಟ್ಟಣದಲ್ಲಿ ಆಯೋಜಿಸಿದ್ದ ಕೆಂಚನಪುರ ರೈತರ ಸಭೆಯಲ್ಲಿ ವಿಶೇಷ ಜಿಲ್ಲಾಧಿಕಾರಿ, ಕೆಂಚನಪುರದ ಜಮೀನಿಗೆ ಎಕರೆಗೆ 1.60 ಕೋಟಿ ರುಪಾಯಿ ದರ ನಿಗದಿ ಮಾಡಿ ಸಭೆ ಮುಕ್ತಾಯ ಮಾಡಿ ನಿರ್ಗಮಿಸಿದರು. ಇದರಿಂದ ಕೆರಳಿದ ರೈತರು ಏಕಪಕ್ಷೀಯವಾಗಿ ದರ ನಿಗದಿ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ದರವನ್ನು ಒಪ್ಪಲು ಸಾಧ್ಯವಿಲ್ಲ, ಕಾನೂನು ಹೋರಾಟ ಮತ್ತು ಪ್ರತಿಭಟನೆ ಮಾಡುತ್ತೇವೆ ಎಂದು ರೈತರು ಆಕ್ರೋಶ ಹೊರಹಾಕಿದರು.

ಸರ್ವಾಧಿಕಾರಿ ಧೋರಣೆ:

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಚನ್ನೇಗೌಡ ಮಾತನಾಡಿ, ದರ ನಿಗದಿ ಸಭೆಯಲ್ಲಿ ರೈತರೊಂದಿಗೆ ಚರ್ಚೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಅಂತಿಮ ದರ ನಿಗದಿಗೊಳಿಸಲಾಗುವುದು ಎಂದು ಹೇಳಿದ ವಿಶೇಷ ಜಿಲ್ಲಾಧಿಕಾರಿ, ಬೆರಳೆಣಿಕೆ ರೈತರ ಸಮಸ್ಯೆ ಆಲಿಸಿ ಸರ್ವಾಧಿಕಾರಿಯಂತೆ ದರ ನಿಗದಿ ಮಾಡಿರುವುದನ್ನು ನಾವು ರೈತರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನಮ್ಮ ಬೇಡಿಕೆ ಆಲಿಸದೆ ದರ ಘೋಷಿಸಿ ತಕ್ಷಣ ನಿರ್ಗಮಿಸಿದ್ದು ರೈತರಿಗೆ ಮಾಡಿದ ಅವಮಾನ ಎಂದು ಆರೋಪಿಸಿದರು.

ಕೊಡಿಗೇಹಳ್ಳಿಯ ರೈತರ ಸಭೆಯಲ್ಲೂ ದರ ನಿಗದಿಯನ್ನು ರೈತರು ವಿರೋಧಿಸಿದ್ದಾರೆ. ರೈತರ ಗಮನಕ್ಕೆ ತರದೆ ಸಭೆಗೆ ಹಾಜರಾಗಿ ರೈತರಿಂದ ಸಹಿ ಪಡೆದು ನಿರ್ಧರಿಸಿದ ದರಕ್ಕೆ ಒಪ್ಪಿದ್ದಾರೆ ಎಂದು ಬಿಂಬಿಸಿದ್ದಾರೆ. ಈ ಸಭೆಯಲ್ಲೂ ಕೆಲ ರೈತರು ಸಹಿ ಮಾಡಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಈ ದರವನ್ನು ಒಪ್ಪುವುದಿಲ್ಲ, ಎಕರೆಗೆ ಎರಡು ಕೋಟಿ ನೀಡಿದರೆ ಭೂಮಿ ಕೊಡುತ್ತೇವೆ ಎಂದು ಪಟ್ಟು ಹಿಡಿದರು.

ನೆಮ್ಮದಿಯಿಂದ ಇರಲು ಬಿಡಿ:

ಎಂಟು ವರ್ಷದಿಂದ ತೋಟಗಾರಿಕೆ ಇಲಾಖೆಯವರು ತೋಟದ ಬೆಳೆಗಳ ಮಾರ್ಗದರ್ಶಿ ದರವನ್ನು ಪರಿಷ್ಕರಿಸಿಲ್ಲ, ಹಳೆಯ ದರದಂತೆ ಅಡಿಕೆ ಗಿಡ ಒಂದಕ್ಕೆ 6 ಸಾವಿರ, ತೆಂಗಿನ ಮರಕ್ಕೆ 18 ಸಾವಿರ, ಮಾವಿನ ಮರಕ್ಕೆ 25 ಸಾವಿರ ಇದೆ. ಆದರೆ ಈಗ ಎಲ್ಲ ಕೃಷಿ ಉತ್ಪನ್ನಗಳ ದರ ಹೆಚ್ಚಾಗಿದ್ದು ಅವೈಜ್ಞಾನಿಕವಾಗಿ ದರ ನಿಗದಿ ಮಾಡುತ್ತಿದ್ದಾರೆ. ಕೆಲ ರೈತರ ಜಮೀನಿನಲ್ಲಿರುವ ಅಡಿಕೆ ಗಿಡದಿಂದ ವರ್ಷಕ್ಕೆ 30 ಲಕ್ಷ ರುಪಾಯಿ ದುಡಿಯುತ್ತಿದ್ದಾರೆ. ಸರ್ಕಾರ ನೀಡುವ ಹಣವನ್ನು ಮೂರಾಲ್ಕು ವರ್ಷದಲ್ಲಿ ದುಡಿದುಕೊಳ್ಳುತ್ತಿದ್ದಾರೆ. ನಾವೇನು ಭೂಮಿ ನೀಡುತ್ತೇವೆ ಎಂದು ಮುಂದೆ ಬಂದಿಲ್ಲ, ದಯವಿಟ್ಟು ನಮ್ಮ ಭಾಗದ ರೈತರು ನೆಮ್ಮದಿಯಿಂದ ಬದುಕುವುದಕ್ಕೆ ಬಿಡಿ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯ ಕಲ್ಪಿಸಿಕೊಡಿ:

ಕೆಂಚನಪುರ ಸಿದ್ದೇಗೌಡ ಮಾತನಾಡಿ, 60 ವರ್ಷಗಳ ಹಿಂದೆ ನಮ್ಮ ಪೂರ್ವಜರಿಗೆ ಸರ್ಕಾರದಿಂದ ಜಮೀನು ಮಂಜೂರಾಗಿದ್ದು ಅವರ ತಿಳಿವಳಿಕೆ ಕಡಿಮೆ ಇದ್ದು ಜಮೀನಿನ ಕಿಮ್ಮತ್ತು ಕಟ್ಟದೆ ಉಳುಮೆ ಮಾಡುತ್ತಿದ್ದರು. ಇದೀಗ ಆ ಜಮೀನೆಲ್ಲಾ ಸ್ವಾಧೀನವಾಗಿರುವುದರಿಂದ ಚಿಂತೆ ಹೆಚ್ಚಿದೆ. ಸೂಕ್ತ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.

ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ, ಅಭಿವೃದ್ಧಿ ಅಧಿಕಾರಿ ಲೀಲಾವತಿ, ವ್ಯವಸ್ಥಾಪಕ ಚಂದ್ರಶೇಖರ್, ಎಇ ಮಹೇಂದರ್ ನೂರಾರು ಉಪಸ್ಥಿತರಿದ್ದರು.

ಪೋಟೋ 5 :

ತ್ಯಾಮಗೊಂಡ್ಲು ಹೋಬಳಿಯ ಕೆಂಚನಪುರದ ಜಮೀನು ಸ್ವಾಧೀನ ಸಂಬಂಧ ಭೂ ದರ ನಿಗದಿ ಸಭೆಯಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಏಕಪಕ್ಷೀಯವಾಗಿ ದರ ನಿಗದಿ ಮಾಡಿದ್ದಕ್ಕೆ ರೈತರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಪೋಟೋ 6 :

ತ್ಯಾಮಗೊಂಡ್ಲು ಪಟ್ಟಣದಲ್ಲಿ ಆಯೋಜಿಸಿದ್ದ ಕೆಂಚನಪುರ ರೈತರ ಸಭೆಯಲ್ಲಿ ಗಲಾಟೆ ಮಾಡದಂತೆ ಪೊಲೀಸರು ರೈತರನ್ನು ಸಭೆಯಿಂದ ಹೊರ ಕಳುಹಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ
27ಕ್ಕೆ ದಿಲ್ಲಿಯಲ್ಲಿ ಸಿಡಬ್ಲ್ಯುಸಿ ಸಭೆ