ಡಿಸೆಲ್ ಮೇಲೆ 1 ರು. ಸೆಸ್ ನೀಡಿದರೆ ವರ್ಷಕ್ಕೆ 2500 ಕೋಟಿ ರು. ಸಂಗ್ರಹವಾಗತ್ತದೆ. ಇದರಿಂದ ರಾಜ್ಯದ 1.30 ಕೋಟಿ ಅಸಂಘಟಿತ ಕಾರ್ಮಿಕರ ಕುಟುಂಬಗಳಿಗೆ ವಾರ್ಷಿಕ 10 ಲಕ್ಷ ರು.ಗಳ ಸವಲತ್ತು ನೀಡುತ್ತೇವೆ. ಈ ಯೋಜನೆ 3-4 ತಿಂಗಳಲ್ಲಿ ಜಾರಿಯಾಗುವ ವಿಶ್ವಾಸ ಇದೆ ಮತ್ತು ಇದು ದೇಶದಲ್ಲಿಯೇ ಪ್ರಪ್ರಥಮ ಯೋಜನೆಯಾಗಲಿದೆ ಎಂದು ಲಾಡ್ ತಿಳಿಸಿದ್ದಾರೆ.
ಡಿಸೆಲ್ ಮೇಲೆ 1 ರು. ಸೆಸ್‌ನಿಂದ 2500 ಕೋಟಿ ರು. ಸಂಗ್ರಹ ಸಾಧ್ಯ: ಸಚಿವಕನ್ನಡಪ್ರಭ ವಾರ್ತೆ ಉಡುಪಿ
ಡಿಸೆಲ್ ಮೇಲೆ 1 ರು. ಸೆಸ್ ವಿಧಿಸಿ, ಅದನ್ನು ರಾಜ್ಯದ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಬಳಸುವ ಯೋಜನೆ ಸಿದ್ಧವಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಮಾತನಾಡಿದ್ದೇವೆ, ವಿಪಕ್ಷಗಳು ಕೂಡ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.ಅವರು ಶುಕ್ರವಾರ ಉಡುಪಿ ಪುರಭವನದಲ್ಲಿ ಜಿಲ್ಲೆಯ ಅಸಂಘಟಿಕ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿ ಮಾತನಾಡಿದರು.ಡಿಸೆಲ್ ಮೇಲೆ 1 ರು. ಸೆಸ್ ನೀಡಿದರೆ ವರ್ಷಕ್ಕೆ 2500 ಕೋಟಿ ರು. ಸಂಗ್ರಹವಾಗತ್ತದೆ. ಇದರಿಂದ ರಾಜ್ಯದ 1.30 ಕೋಟಿ ಅಸಂಘಟಿತ ಕಾರ್ಮಿಕರ ಕುಟುಂಬಗಳಿಗೆ ವಾರ್ಷಿಕ 10 ಲಕ್ಷ ರು.ಗಳ ಸವಲತ್ತು ನೀಡುತ್ತೇವೆ. ಈ ಯೋಜನೆ 3-4 ತಿಂಗಳಲ್ಲಿ ಜಾರಿಯಾಗುವ ವಿಶ್ವಾಸ ಇದೆ ಮತ್ತು ಇದು ದೇಶದಲ್ಲಿಯೇ ಪ್ರಪ್ರಥಮ ಯೋಜನೆಯಾಗಲಿದೆ ಎಂದರು.ರಾಜ್ಯದಲ್ಲಿರುವ 101 ವಿವಿಧ ಬಗೆಯ ಕೆಲಸಗಳನ್ನು ಮಾಡುವ ಕಾರ್ಮಿಕರನ್ನು ಅಸಂಘಟಿತ ವಲಯಕ್ಕೆ ಸೇರಿಸಿದ್ದು, ಪ್ರತಿಯೊಬ್ಬರಿಗೂ ಸೌಲಭ್ಯಗಳನ್ನು ನೀಡುವುದಕ್ಕಾಗಿ ಈ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ. ಇದು ಕೂಡ ದೇಶದಲ್ಲಿಯೇ ಪ್ರಥಮ ಯೋಜನೆಯಾಗಿದೆ ಎಂದು ಹೇಳಿದರು.ಆಶಾದೀಪ ಎಂಬ ಯೋಜನೆಯನ್ನು ಕೂಡ ದೇಶದಲ್ಲಿ ಪ್ರಥಮವಾಗಿ ಜಾರಿಗೆ ತರಲಾಗಿದ್ದು, ಎಸ್ಸಿಎಸ್ಟಿ ಸಮುದಾಯದವರಿಗೆ ಉದ್ಯೋಗ ನೀಡುವ ಉದ್ದಿಮೆಗಾರರಿಗೆ, ಈ ಕಾರ್ಮಿಕರ ಶೇ.50ರಷ್ಟು ವೇತನವನ್ನು ಸರ್ಕಾರ ಭರಿಸುತ್ತದೆ. ರಾಜ್ಯದಲ್ಲಿ ಈಗಾಗಲೇ 7,500 ಕಾರ್ಮಿಕರಿಗೆ ಈ ಯೋಜನೆಯಲ್ಲಿ 20 ಕೋಟಿ ರು. ನೀಡಲಾಗಿದೆ ಎಂದು ಸಚಿವರು ತಿಳಿಸಿದರು.ರಾಜ್ಯದಲ್ಲಿ 3 ಲಕ್ಷ ಹೊರಗುತ್ತಿಗೆ ನೌಕರರಿದ್ದಾರೆ. ಅವರಿಗೆ ಕನಿಷ್ಟ ವೇತನ, ಭವಿಷ್ಯ ನಿಧಿ, ಪಿಂಚಣಿ, ಇಎಸ್‌ಐ ಯಾವುದೂ ಸಿಗುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈ ಹೊರಗುತ್ತಿಗೆ ನೌಕರರ ಸೊಸೈಟಿಯನ್ನು ರಚಿಸಿ ಅದರ ಮೂಲಕ ಅಸಂಘಟಿತ ಕಾರ್ಮಿಕರಿಗೆ ನೀಡುವ ಸೌಲಭ್ಯಗಳನ್ನು ಅವರಿಗೆ ನೀಡಲುದ್ದೇಶಿಸಲಾಗಿದೆ ಎಂದು ಲಾಡ್ ಹೇಳಿದರು.ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿ, ಉಡುಪಿ ಜಿಲ್ಲೆಯ ಕಾರ್ಮಿಕರಿಗೆ ಇಎಸ್‌ಐ ಸೌಲಭ್ಯಗಳನ್ನು ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಇಎಸ್‌ಐ ಕ್ಲಿನಿಕ್‌ನಲ್ಲಿ ಪೂರ್ಣಾವಧಿ ವೈದ್ಯರನ್ನು ನೇಮಿಸುವಂತೆ ಆಗ್ರಹಿಸಿದರು.ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಡುಪಿ ನ.ಅ.ಪ್ರಾ. ಅಧ್ಯಕ್ಷ ದಿನಕರ್ ಹೇರೂರು, ಕ.ಅ.ಪ್ರಾ. ಅಧ್ಯಕ್ಷ ಎಂ.ಎ.ಗಪೂರ್, ಜಿ.ಗ್ಯಾ.ಯೋ.ಅ. ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಶಾಹಿದ್, ಡಿಸಿ ಸ್ವರೂಪ ಟಿ.ಕೆ., ಎಸ್ಪಿ ಹರಿರಾಮ್ ಶಂಕರ್, ಕಾರ್ಮಿಕ ಇಲಾಖೆಯ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಜಂಟಿ ಕಾರ್ಯದರ್ಶಿ ಡಾ. ರವಿಕುಮಾರ್, ಉಪಕಾರ್ಮಿಕ ಆಯುಕ್ತ ಎಚ್.ಎಲ್. ಗುರುಪ್ರಸಾದ್, ಸಹಾಯಕ ಕಾರ್ಮಿಕ ಆಯುಕ್ತ ಕುಮಾರಿ ನಾಜಿಯಾ ಸುಲ್ತಾನ, ಕಾಂಗ್ರೆಸ್ ನಾಯಕಕರಾದ ಉದಯ ಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.