ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಕ್ಷೇತ್ರದ ಅಭಿವೃದ್ಧಿಗೆ 2026-27ನೇ ಸಾಲಿನಲ್ಲಿ ಮೂಲ ಸೌಕರ್ಯಕ್ಕೆ ಘೋಷಿಸಿದ್ದ ₹100 ಕೋಟಿ ಅನುದಾನ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಒತ್ತಾಯಿಸಿದ್ದಾರೆ.
- ವಿಶೇಷ ಅನುದಾನ ಘೋಷಿಸಿದ್ದ ಸರ್ಕಾರ ಈವರೆಗೂ ಹಣವನ್ನೇ ಬಿಡುಗಡೆ ಮಾಡಿಲ್ಲ: ಎಸ್ಡಿಪಿಐ
- ಉತ್ತರಕ್ಕಾಗಿ ಕಾಯುತ್ತೇವೆ, ಸ್ಪಂದಿಸದಿದ್ದರೆ ಬೆಳಗಾವಿ ಅಧಿವೇಶನ ವೇಳೆ ಹೋರಾಟ: ಅಫ್ಸರ್ ಕೊಡ್ಲಿಪೇಟೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ವೇಳೆ ಕ್ಷೇತ್ರದ ಅಭಿವೃದ್ಧಿಗೆ 2026-27ನೇ ಸಾಲಿನಲ್ಲಿ ಮೂಲ ಸೌಕರ್ಯಕ್ಕೆ ಘೋಷಿಸಿದ್ದ ₹100 ಕೋಟಿ ಅನುದಾನ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ, ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಗೆಲ್ಲಲು ₹100 ಕೋಟಿ ವಿಶೇಷ ಅನುದಾನ ಸರ್ಕಾರ ಘೋಷಣೆ ಮಾಡಿದ್ದರೂ ಈವರೆಗೂ ಹಣವನ್ನೇ ಬಿಡುಗಡೆ ಮಾಡಿಲ್ಲ. ಉಪ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಭರವಸೆ ಬಗ್ಗೆ ದಕ್ಷಿಣ ಕ್ಷೇತ್ರದ ಮತದಾರರಿಗೆ ರಾಜ್ಯ ಸರ್ಕಾರ ಉತ್ತರಿಸಲಿ ಎಂದರು.
ಅನುದಾನ ಘೋಷಣೆ ಮಾಡಿ 6 ತಿಂಗಳಾದರೂ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬರೀ ಪೊಳ್ಳು ಭರವಸೆ ನೀಡಿದೆಯಷ್ಟೇ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನ ಯಾವುದಾದರೂ ಇಲಿ, ಹೆಗ್ಗಣಗಳು ತಿಂದು ಹಾಕಿದ್ದಾವೆಯೇ ಅಥವಾ ಅನುದಾನ ಎಲ್ಲಿ ಮಾಯವಾಗಿಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ಹೇಳಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ದಕ್ಷಿಣ ಕ್ಷೇತ್ರದ ಮೂಲ ಸೌಕರ್ಯಕ್ಕಾಗಿ ₹100 ಕೋಟಿ ಅನುದಾನ ಬಗ್ಗೆ ಘೋಷಿಸಿ, ಸಾರ್ವಜನಿಕವಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಅನುದಾನ ಬಿಡುಗಡೆ ಆಗಿಲ್ಲ. ₹100 ಕೋಟಿ ಅನುದಾನದ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸ್ಪಷ್ಟನೆ ನೀಡಲಿ. ಒಂದುವೇಳೆ ಅನುದಾನ ಬಿಡುಗಡೆಯಾಗಿದ್ದರೆ ಅದನ್ನು ಹೇಳಲಿ. ಅನುದಾನ ಬಿಡುಗಡೆ ಮಾಡದಿದ್ದರೆ ಅದಕ್ಕೆ ಕಾರಣವೆಂದು ಕ್ಷೇತ್ರದ ಜನರಿಗೆ ಸರ್ಕಾರ ಅಧಿಕೃತವಾಗಿ ತಿಳಿಸಲಿ ಎಂದು ಆಗ್ರಹಿಸಿದರು.
ಸರ್ಕಾರ ಘೋಷಿಸಿದ್ದ ₹100 ಕೋಟಿ ಅನುದಾನ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕಳೆದ ಆ.17ರಂದು ಅರ್ಜಿ ಸಲ್ಲಿಸಲಾಗಿತ್ತು. ದಾವಣಗೆರೆ ಪಾಲಿಕೆ ಸಾರ್ವಜನಿಕ ಮಾಹಿತಿ ಅಧಿಕಾರಿ, ದಕ್ಷಿಣ ಕ್ಷೇತ್ರಕ್ಕೆ 2026-27ನೇ ಸಾಲಿನಲ್ಲಿ ₹100 ಕೋಟಿ ಅನುದಾನ ಮೂಲ ಸೌಕರ್ಯಕ್ಕೆಂದು ಬಿಡುಗಡೆ ಆಗಿಲ್ಲವೆಂದು ಲಿಖಿತ ಮಾಹಿತಿ ನೀಡಿದ್ದಾರೆ. ಜಿಲ್ಲಾಡಳಿತಕ್ಕೂ ಮಾಹಿತಿ ಕೋರಿದ್ದು, ಇನ್ನೂ ಉತ್ತರ ನೀಡಿಲ್ಲ. ನಾವು ಉತ್ತರಕ್ಕೆ ಕಾಯುತ್ತೇವೆ. ಇಲ್ಲದಿದ್ದರೆ ಬೆಳಗಾವಿ ಅಧಿವೇಶನದ ವೇಳೆ ಹೋರಾಟ ನಡೆಸಿ, ಅನುದಾನದ ಬಗ್ಗೆ ಸರ್ಕಾರವನ್ನು ಪ್ರಶ್ನಿಸುತ್ತೇವೆ ಎಂದು ಎಚ್ಚರಿಸಿದರು.
ದಕ್ಷಿಣ ಕ್ಷೇತ್ರ ಶಾಸಕ ಸಮರ್ಥ ಶಾಮನೂರು ನಿಜವಾಗಿಯೂ ಸಮರ್ಥರಾಗಿದ್ದರೆ ಯಾವ ಕಾರಣಕ್ಕೆ ದಕ್ಷಿಣ ಕ್ಷೇತ್ರಕ್ಕೆ ₹100 ಕೋಟಿ ಅನುದಾನ ನೀಡಿಲ್ಲ ಎಂಬ ಬಗ್ಗೆ ಬೆಳಗಾವಿ ಅಧಿವೇಶನದಲ್ಲೇ ರಾಜ್ಯ ಸರ್ಕಾರಕ್ಕೆ ಚುಕ್ಕಿಪ್ರಶ್ನೆ ಮಾಡಬೇಕು. ಕ್ಷೇತ್ರದ ಜನರಿಗೆ ಅನುದಾನ ಬಗ್ಗೆ ಸಮರ್ಪಕವಾಗಿ ಉತ್ತರ ನೀಡಬೇಕು. ಅನುದಾನ ಬಿಡುಗಡೆಯಾಗಿದ್ದರೆ ಅದರ ಮಂಜೂರಾತಿ ಆದೇಶ, ಹಣ ಹಂಚಿಕೆ ಮತ್ತು ಕಾಮಗಾರಿ ಬಗ್ಗೆ ಸಂಪೂರ್ಣ ವಿವರಗಳನ್ನು 15 ದಿನದೊಳಗೆ ಸಾರ್ವಜನಿಕಗೊಳಿಸಬೇಕು ಎಂದು ತಾಕೀತು ಮಾಡಿದರು.
ಒಂದುವೇಳೆ ಸರ್ಕಾರ ಅನುದಾನವನ್ನೇ ಬಿಡುಗಡೆ ಮಾಡಿರದಿದ್ದರೆ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದ ಸರ್ಕಾರ ಇದು ಎಂಬುದಾಗಿ ಸ್ಪಷ್ಟವಾಗಿ ಹೇಳಬೇಕು. ಚುನಾವಣೆ ವೇಳೆ ನೀಡಿದ ಭರವಸೆಗಳಿಗೆ ಈಗ ಯಾರು ಹೊಣೆ? ಸರ್ಕಾರದಿಂದ ಅನುದಾನ ಬಿಡುಗಡೆಯಾದರೆ ಮೊದಲು ಕ್ಷೇತ್ರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಬಳಸಲಿ. ಆದರೆ, ಸರ್ಕಾರದಿಂದ ಅನುದಾನ ಬಿಡುಗಡೆ ಬಗ್ಗೆ ಸ್ಪಷ್ಟನೆ ಇಲ್ಲದಿರುವುದು ಸಾಕಷ್ಟು ಪ್ರಶ್ನೆಗೂ ಕಾರಣವಾಗಿದೆ ಎಂದು ಅಫ್ಸರ್ ಕೊಡ್ಲಿಪೇಟೆ ತಿಳಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಎ.ಆರ್. ತಾಹೀರ್ ಹುಸೇನ್, ರಿಯಾಜ್ ರಿಜ್ವಿ, ಮೊಹಮ್ಮದ್ ಮೊಹಸೀನ್, ಅಮೀರ್ ಅಹಮ್ಮದ್, ಮೊಹಮ್ಮದ್ ಅಶ್ರಫ್ ಇತರರು ಇದ್ದರು.
- - -
(ಕೋಟ್)
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಗೆಲ್ಲಲು ₹100 ಕೋಟಿ ಅನುದಾನದ ಘೋಷಣೆ ಮಾಡಿ ಹೋಗಿದ್ದರು. ಈಗ ಹಿರಿಯೂರು ಉಪ ಚುನಾವಣೆ ಗೆಲ್ಲಲು ಮತ್ತೆ ಸಾವಿರಾರು ಕೋಟಿ ರು.ಗಳ ಆಶ್ವಾಸನೆ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದಕ್ಷಿಣ ಕ್ಷೇತ್ರಕ್ಕೆ ಘೋಷಿಸಿದ ₹100 ಕೋಟಿ ಅನುದಾನ ಬಗ್ಗೆ ಉತ್ತರಿಸಲಿ, ಶ್ವೇತಪತ್ರ ಹೊರಡಿಸಲಿ.
- ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್ಡಿಪಿಐ
- - -
-11ಕೆಡಿವಿಜಿ5: ದಾವಣಗೆರೆಯಲ್ಲಿ ಬುಧವಾರ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.