ನಾರಾಯಣ ಹೆಗಡೆ
ಮಳೆ ಕೈಕೊಟ್ಟಿದ್ದರಿಂದ ಜಿಲ್ಲೆಯ ಎಲ್ಲ 8 ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಗಿವೆ. ಬಿತ್ತನೆ ಮಾಡಿದ್ದ ಸುಮಾರು 1,66,280 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದ್ದು, ₹ 1,043 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ 3.30 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿಯಲ್ಲಿ ಈ ಬಾರಿ 3.27 ಲಕ್ಷ ಹೆಕ್ಟೇರ್ (ಶೇ 99.02) ಬಿತ್ತನೆಯಾಗಿತ್ತು. ಜುಲೈ ಹೊರತುಪಡಿಸಿದರೆ ಮುಂಗಾರು ಹಂಗಾಮಿನ ಜೂನ್ ಮತ್ತು ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಳೆ ಕೊರತೆಯಿಂದ ಬೆಳೆ ಒಣಗಿವೆ. ಇದಕ್ಕೂ ಮೊದಲು ರೈತರು ಬೆಳೆ ಹರಗಿ, ಎರಡು ಮೂರು ಬಾರಿ ಬಿತ್ತನೆ ಮಾಡಿದ್ದರು. ಆದರೂ ಮಳೆಯ ತೀವ್ರ ಕೊರತೆಯಿಂದ ಬೆಳೆಗಳು ಸೊರಗಿವೆ. ಇಳುವರಿ ತೀವ್ರ ಕುಂಠಿತವಾಗುವ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ.ಕಡಿಮೆ ಪರಿಹಾರ:
ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ನೀಡುವ ಪರಿಹಾರ ಯಾತಕ್ಕೂ ಸಾಲುವುದಿಲ್ಲ, ಬೀಜ, ಗೊಬ್ಬರದ ದರಗಳು ನಾಲ್ಕು ಪಟ್ಟು ಹೆಚ್ಚಾಗಿವೆ. ಆದರೆ, ಪರಿಹಾರ ಮಾತ್ರ ಹೆಚ್ಚಳವಾಗಿಲ್ಲ. ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ದರ ಸಿಗುತ್ತಿಲ್ಲ. ಎನ್‌ಡಿಆರ್‌ಎಫ್ ನಿಯಮಗಳನ್ನು ಸಡಿಲಿಸಿ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ನೆರವು ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.
1.44 ಲಕ್ಷ ಹೆಕ್ಟೇರ್ ಮೆಕ್ಕೆಜೋಳ ಹಾನಿ:
ಸವಣೂರು ತಾಲೂಕಿನಲ್ಲಿ 24,000 ಹೆಕ್ಟೇರ್ ಮೆಕ್ಕೆಜೋಳ, ಶೇಂಗಾ 6 ಸಾವಿರ, ಹತ್ತಿ 2,500 ಸೇರಿದಂತೆ 34,823 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಹಿರೇಕೆರೂರು ತಾಲೂಕಿನಲ್ಲಿ 23 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಸೇರಿದಂತೆ 23,570 ಹೆಕ್ಟೇರ್ ಬೆಳೆ ಹಾನಿಯಾಗಿದೆ. ರಾಣಿಬೆನ್ನೂರು ತಾಲೂಕಿನಲ್ಲಿ 38,902 ಹೆಕ್ಟೇರ್ ಮೆಕ್ಕೆಜೋಳ ಸೇರಿದಂತೆ 42,408 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಜಿಲ್ಲೆಯಲ್ಲಿ ಬೆಳೆವಿಮೆ ತುಂಬಿದ ರೈತರ ಖಾತೆಗಳಿಗೆ ಶೇ. 25ರಷ್ಟು ಮಧ್ಯಂತರ ಪರಿಹಾರ ನೀಡಬೇಕು. ಅಲ್ಲದೇ ಸರ್ಕಾರ ಬರದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಬರಬೇಕು. ಒತ್ತಾಯಪೂರ್ವಕ ಸಾಲ ವಸೂಲಾತಿ ನಿಲ್ಲಬೇಕು ಎನ್ನುತ್ತಾರೆ ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ.
ಬೆಳೆಹಾನಿ ಹಾಗೂ ಅದರಿಂದ ಉಂಟಾದ ನಷ್ಟದ ವಿವರವನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಜಂಟಿ ಸಮೀಕ್ಷೆ ನಡೆಸಿ ಬೆಳೆ ಹಾನಿ ಮಾಹಿತಿ ಸಂಗ್ರಹಿಸಲಾಗಿದೆ. ಸರ್ಕಾರ ಮಧ್ಯಂತರ ಪರಿಹಾರ ಬಿಡುಗಡೆಗೆ ಆದೇಶಿಸಿದೆ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ