- ಕರಾರು ಅಂತ್ಯವಾದರೂ ಮಾಲೀಕರಿಂದ ಸ್ಪಂದನೆ ಇಲ್ಲ: ಜಿಪಂ ಯೋಜನಾಧಿಕಾರಿ - - -
ಕನ್ನಡಪ್ರಭ ವಾರ್ತೆ ಜಗಳೂರು2020ರಲ್ಲಿ ತಾಲೂಕು ಪಂಚಾಯಿತಿ ಅಧೀನದ ಮಳಿಗೆಗಳನ್ನು 4 ವರ್ಷ 11 ತಿಂಗಳಿಗೆ ಬಾಡಿಗೆ ಕರಾರು ಮಾಡಿಕೊಳ್ಳಲಾಗಿತ್ತು. ಆ ಕರಾರು ಪ್ರಸ್ತುತ ವರ್ಷ ಜೂ.30ಕ್ಕೆ ಅಂತ್ಯಗೊಂಡಿದೆ. ಮಳಿಗೆಗಳ ಬಾಡಿಕೆ ಬಾಕಿ ₹20 ಲಕ್ಷ ಹಣ ಪಾವತಿಸದ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಮಲ್ಲಾನಾಯ್ಕ್ ಹೇಳಿದರು.
ಪಂಚಾಯತ್‌ರಾಜ್ ಸಂಸ್ಥೆ ಅಧಿಕಾರ ಅನ್ವಯ ತಹಸೀಲ್ದಾರ್ ಕಚೇರಿ ಎದುರಿನ ಮಳಿಗೆಗಳ ಮಾಲೀಕರು ಬಾಡಿಗೆ ಪಾವತಿಸಿಲ್ಲ. ಆದಕಾರಣ ಶುಕ್ರವಾರ ಜಿಪಂ ಯೋಜನಾಧಿಕಾರಿ ಮಲ್ಲಾನಾಯ್ಕ್ ಮತ್ತು ಇಒ ಕೆಂಚಪ್ಪ ಖುದ್ದು ನಿಂತು ಮಳಿಗೆಗಳಿಗೆ ನೋಟಿಸ್ ಅಂಟಿಸಿದರು.ಬಳಿಕ ಮಾತನಾಡಿದ ಅವರು, ಬಾಡಿಗೆ ಕರಾರು ಅವಧಿ ಮುಕ್ತಾಯಗೊಂಡು 3 ತಿಂಗಳಾದರೂ ಮಳಿಗೆ ಬಾಡಿಗೆದಾರ ಮಾಲೀಕರು ಸರ್ಕಾರಕ್ಕೆ ₹20 ಲಕ್ಷ ಬಾಕಿ ಉಳಿಸಿದ್ದಾರೆ. ಇದುವರೆಗೂ ಪಾವತಿಸಿಲ್ಲ. ಈಗಾಗಲೇ ಸರ್ಕಾರದ ನಿಯಮದಂತೆ ಕರಾರು ಅವಧಿ ಮುಗಿದಿದೆ. ಮಾಲೀಕರಿಗೆ 3 ಬಾರಿ ನೋಟಿಸ್ ನೀಡಲಾಗಿದೆ. ಆದರೂ ಬಾಡಿಗೆ ಪಾವತಿಸಿಲ್ಲ. 3ನೇ ನೋಟಿಸ್ ನೀಡಿದ ತಕ್ಷಣ ತೆರವುಗೊಳಿಸುತ್ತೇವೆ ಎಂದು ಎಲ್ಲ ಮಾಲೀಕರು ಮಳಿಗೆಗಳಿಗೆ ಬೀಗ ಹಾಕಿದ್ದಾರೆ. ಆದರೂ ಇದುವರೆಗೂ ತೆರವುಗೊಳಿಸಿಲ್ಲ. ಸೆ.25ರೊಳಗೆ ಬಾಡಿಗೆ ಕಟ್ಟಿ ಮಾಲೀಕರು ತಮ್ಮ ಸ್ವತ್ತುಗಳನ್ನು ಎತ್ತಂಗಡಿ ಮಾಡಬೇಕು ಎಂದು ಪ್ರತಿ ಮಳಿಗೆಗಳ ಮುಂದೆ ನೋಟಿಸ್ ಅಂಟಿಸಲಾಗಿದೆ ಎಂದರು.
ಸರ್ಕಾರಕ್ಕೆ ನಷ್ಟ:ಪ್ರತಿ ತಿಂಗಳು ₹5 ಸಾವಿರ ನಿಗದಿಪಡಿಸಿದ ಮಳಿಗೆ ಬಾಡಿಗೆಯನ್ನು ಮಾಲೀಕರು ಇದುವರೆಗೂ ಕಟ್ಟಿಲ್ಲ. ಇದರಿಂದ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಮಳಿಗೆ ಖಾಲಿ ಮಾಡಲು ಗಡವು ಕೊಟ್ಟಿದ್ದರೂ ನಿರ್ಲಕ್ಷಿಸುತ್ತಿದ್ದಾರೆ. ಇಷ್ಟು ವರ್ಷ ಇದ್ದವರು ಬಾಕಿ ಬಾಡಿಗೆ ಕಟ್ಟಿ ಮತ್ತೆ ಮಳಿಗೆಗಳು ಬೇಕು ಎಂದು ಬಹಿರಂಗ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಬಾಕಿ ₹20 ಲಕ್ಷ ವಸೂಲಿಯಾದ ಮೇಲೆಯೇ ಮಳಿಗೆ ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸೆ.25ರೊಳಗೆ ಖಾಲಿ ಮಾಡಿ:ಜಗಳೂರು ತಾಪಂ ಇಒ ಕೆಂಚಪ್ಪ ಮಾತನಾಡಿ, ಸರ್ಕಾರಿ ಅನುದಾನದಡಿ ನಿರ್ಮಿಸಿರುವ ಮಳಿಗೆಗಳಿಗೆ ಪಾವತಿಸಬೇಕಾದ ಬಾಡಿಗೆ ಬಾಕಿ ಕಟ್ಟದಿದ್ದರೆ ಸರ್ಕಾರಕ್ಕೆ ನಷ್ಟವಾಗುತ್ತಿದೆ. ನಿಯಮಗಳ ಅನುಸಾರ ಅವಧಿ ಮುಗಿದ ಕಾರಣ ಹೊಸದಾಗಿ ಹರಾಜು ಕೂಗಲು ಸಮಯ ನಿಗದಿಪಡಿಸಲಾಗುವುದು. ಮಳಿಗೆಗಳ ರಿಪೇರಿ, ಸುಣ್ಣಬಣ್ಣ ಮಾಡಿಸುವ ಕಾರ್ಯವಿದೆ. ಸೆ.25ರೊಳಗೆ ಮಾಲೀಕರು ತಾಪಂ ಮಳಿಗೆಗಳನ್ನು ಖಾಲಿ ಮಾಡಬೇಕು. ಇಲ್ಲವಾದರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
- - --19ಜೆಎಲ್.ಆರ್.ಚಿತ್ರ1:
ಜಗಳೂರು ಪಟ್ಟಣದ ತಹಸೀಲ್ದಾರ್ ಕಚೇರಿ ಎದುರಿರುವ ತಾಪಂ 29 ಮಳಿಗೆಗಳನ್ನು ಖಾಲಿ ಮಾಡುವಂತೆ ಜಿಪಂ ಯೋಜನಾಧಿಕಾರಿ ಮಲ್ಲಾನಾಯ್ಕ್ ಮತ್ತು ಇಒ ಕೆಂಚಪ್ಪ ಮಳಿಗೆಗಳಿಗೆ ಕಡೆಯ ನೋಟಿಸ್ ಅಂಟಿಸಿದರು.