ಕಂಡಲ್ಲಿ ಕಸ ಬಿಸಾಕುವವರ ವಿಡಿಯೋ ಪಾಲಿಕೆಗೆ ಕಳಿಸಿದವರಿಗೆ 250 ರು. ಬಹುಮಾನ

KannadaprabhaNewsNetwork |  
Published : Nov 04, 2025, 03:45 AM IST
Garbage

ಸಾರಾಂಶ

ಸಾರ್ವಜನಿಕ ಸ್ಥಳಗಳು, ಎಲ್ಲೆಂದರಲ್ಲೇ ಕಸ ಹಾಕುವವರನ್ನು ಪತ್ತೆ ಮಾಡಿ ಅವರ ಮನೆ ಮುಂದೆಯೇ ಕಸ ಸುರಿದು ದಂಡ ಪ್ರಯೋಗ ನಡೆಯುತ್ತಿರುವ ನಡುವೆ, ಎಲ್ಲೆಂದರಲ್ಲೇ ಕಸ ಸುರಿಯುವುದನ್ನು ವಿಡಿಯೋ ಮಾಡಿ ಸಲ್ಲಿಸಿದವರಿಗೆ ತಲಾ 250 ರು. ಬಹುಮಾನ ನೀಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ಚಿಂತನೆ 

  ಬೆಂಗಳೂರು : ಸಾರ್ವಜನಿಕ ಸ್ಥಳಗಳು, ಎಲ್ಲೆಂದರಲ್ಲೇ ಕಸ ಹಾಕುವವರನ್ನು ಪತ್ತೆ ಮಾಡಿ ಅವರ ಮನೆ ಮುಂದೆಯೇ ಕಸ ಸುರಿದು ದಂಡ ಪ್ರಯೋಗ ನಡೆಯುತ್ತಿರುವ ನಡುವೆ, ಎಲ್ಲೆಂದರಲ್ಲೇ ಕಸ ಸುರಿಯುವುದನ್ನು ವಿಡಿಯೋ ಮಾಡಿ ಸಲ್ಲಿಸಿದವರಿಗೆ ತಲಾ 250 ರು. ಬಹುಮಾನ ನೀಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌ಡಬ್ಲ್ಯುಎಂಎಲ್) ಚಿಂತನೆ ನಡೆಸಿದೆ.

ಯಾರಾದರೂ ಕಸ ಎಸೆಯುತ್ತಿದ್ದರೆ ಅವರ ಗುರುತು ಪತ್ತೆಯಾಗುವಂತೆ ವಿಡಿಯೋ ಮಾಡಿ, ಅದನ್ನು ಘನತ್ಯಾಜ್ಯ ನಿರ್ವಹಣಾ ಕಂಪನಿಯ ನಂಬರ್‌ಗೆ ವಾಟ್ಸ್‌ಆ್ಯಪ್ ಮಾಡಿದರೆ ಅದಕ್ಕೆ ಪ್ರತಿಯಾಗಿ 250 ರು. ಬಹುಮಾನ ನೀಡಲಾಗುತ್ತದೆ. ಈ ಹಣವನ್ನು ಕಸ ಸುರಿಯುವವರಿಂದಲೇ ದಂಡದ ರೂಪದಲ್ಲಿ ವಸೂಲಿ ಮಾಡಲಾಗುತ್ತದೆ.

ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ: 

ಜಾಲತಾಣಗಳಲ್ಲಿ ಈ ವಿಷಯ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ, ಗಂಭೀರ, ಹಾಸ್ಯಭರಿತ ಪ್ರತಿಕ್ರಿಯೆಗಳು ಬಂದಿದೆ.

‘ನಾನು ಕೆಲಸಕ್ಕೆ ರಾಜಿನಾಮೆ ನೀಡಿ ಬನಶಂಕರಿಯಲ್ಲಿ ಕ್ಯಾಮೆರಾ ಹಿಡಿದು ನಿಲ್ಲುತ್ತೇನೆ. ನಿತ್ಯ 2,000 ರು. ಗಳಿಕೆ ಗ್ಯಾರಂಟಿ’ ಎಂದು ನಾಯಕ ಎಂಬುವರು ಎಕ್ಸ್‌ನಲ್ಲಿ ಕಮೆಂಟ್ ಮಾಡಿದ್ದಾರೆ.

‘ಇದೊಂದು ಒಳ್ಳೆಯ ಕ್ರಮ. ಸರ್ಕಾರವೇ ಎಲ್ಲವನ್ನು ಮಾಡಲಾಗದು. ನಗರವನ್ನು ಸ್ವಚ್ಛವಾಗಿಡುವುದು ಪಾಲಿಕೆಯಷ್ಟೇ ಜನರ ಜವಾಬ್ದಾರಿಯು ಆಗಿರುತ್ತದೆ. ಸರ್ಕಾರ-ನಾಗರಿಕ ನಡುವಿನ ಈ ಸಹಭಾಗಿತ್ವವು ನಗರದಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಲಿ’ ಎಂದು ಪ್ರಸನ್ನ ಹೇಳಿದ್ದಾರೆ.

ರಸ್ತೆಯನ್ನು ಸ್ವಚ್ಛವಾಗಿರಿಸದ ಜಿಬಿಎ ಅವರಿಗೆ ಏನು ಮಾಡುವುದು

‘ಕಸ ಹಾಕುವವರಿಗೆ ದಂಡ ವಿಧಿಸುವುದೇನೋ ಸರಿ. ಆದರೆ, ಕಸವನ್ನು ಸಂಗ್ರಹಿಸದ, ರಸ್ತೆಯನ್ನು ಸ್ವಚ್ಛವಾಗಿರಿಸದ ಜಿಬಿಎ ಅವರಿಗೆ ಏನು ಮಾಡುವುದು?’ ಎಂದು ನಗರದ ಮತ್ತೊಬ್ಬ ನಿವಾಸಿ ಪ್ರಶ್ನಿಸಿದ್ದಾರೆ.

‘ಇದು ಒಳ್ಳೆಯ ಉಪಕ್ರಮವೇ ಆಗಿದೆ. ಇದೇ ರೀತಿ ಲಂಚ ಪಡೆಯುವ ಭ್ರಷ್ಟ ಬಿಡಿಎ, ಜಿಬಿಎ, ಪೊಲೀಸ್, ಆರ್‌ಟಿಒ, ತಹಸೀಲ್ದಾರ್ ಕಚೇರಿ, ಸಬ್ ರಜಿಸ್ಟ್ರಾರ್ ಕಚೇರಿ ಸೇರಿದಂತೆ ಎಲ್ಲ ಸಿಬ್ಬಂದಿಯ ವಿಡಿಯೋ ಮಾಡಿಕೊಳ್ಳಬಾರದೇಕೇ? ಈ ಬಗ್ಗೆ ಸಿಎಂ ಮತ್ತು ಡಿಸಿಎಂ ಕರೆ ನೀಡಲಿ’ ಎಂದು ಸತೀಶ್ ಎಂಬುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ಸಮಸ್ಯೆಯನ್ನು ಪರಿಹರಿಸಲು ಹುಡುಕಿರುವ ಪರಿಹಾರ ಕ್ರಮವೇ ಸಮಸ್ಯೆಯಾಗಬಹುದಾದ ‘ಕೋಬ್ರಾ ಎಫೆಕ್ಟ್’ಗೆ ಕಾರಣವಾಗಬಾರದು ಎಂದು ಕೆಲವರು ಆತಂಕ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ
ರಾಗಾ-ವೈಷ್ಣವ್‌ ಉದ್ಯೋಗ ಸೃಷ್ಟಿ ‘ಕ್ರೆಡಿಟ್‌ ವಾರ್’