ಅರೆಹದ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ₹3.28 ಕೋಟಿ ವಿಮಾ ಪರಿಹಾರ: ಅಶೋಕ್‌

KannadaprabhaNewsNetwork | Published : Nov 13, 2023 1:17 AM

ಸಾರಾಂಶ

2018 ರಿಂದ 2023 ರವರೆಗೆ ಒಟ್ಟು 940 ರೈತರು 21.10 ಲಕ್ಷ ವಿಮಾ ಮೊತ್ತ ಪರಿಹಾರ ಪಾವತಿ

ಕನ್ನಡಪ್ರಭ ವಾರ್ತೆ ಸಾಗರ

ತಾಲೂಕಿನ ಅರೆಹದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಹವಾಮಾನ ಆಧಾರಿತ ಬೆಳೆವಿಮೆಯಡಿ ₹3.28 ಕೋಟಿ ವಿಮಾ ಪರಿಹಾರ ಪಡೆದಿದೆ.

ಸೊಸೈಟಿ ವ್ಯಾಪ್ತಿಯ 320 ರೈತರು ₹12.47 ಲಕ್ಷ ವಿಮಾ ಮೊತ್ತ ಪಾವತಿ ಮಾಡಿ ಬೃಹತ್ ಮೊತ್ತದ ವಿಮಾ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಟಿ.ಎಸ್. ಅಶೋಕ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಹೆಚ್ಚು ಬೆಳೆವಿಮಾ ಪರಿಹಾರ ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ರೈತರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

2018 ರಿಂದ 2023 ರವರೆಗೆ ಒಟ್ಟು 940 ರೈತರು ₹21.10 ಲಕ್ಷ ವಿಮಾ ಮೊತ್ತ ಪರಿಹಾರ ಪಾವತಿ ಮಾಡಿದ್ದು, ₹3.28 ಕೋಟಿ ವಿಮಾ ಪರಿಹಾರ ಪಡೆಯಲಾಗಿದೆ ಎಂದು ಹೇಳಿದರು.

ಮಲೆನಾಡು ಭಾಗದಲ್ಲಿ ಪ್ರಕೃತಿ ವಿಕೋಪದಿಂದ ಪ್ರಮುಖ ಬೆಳೆಯಾದ ಅಡಕೆ, ಕಾಳುಮೆಣಸು ಕೊಳೆರೋಗಕ್ಕೆ ತುತ್ತಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಪ್ರಧಾನಿ ಅವರು ರೈತರ ಸಂಕಷ್ಟಕ್ಕೆ ಸ್ಪಂದಿಸುವ ರೀತಿಯಲ್ಲಿ ಹವಾಮಾನ ಆಧಾರಿತ ಬೆಳೆವಿಮೆ ಘೋಷಣೆ ಮಾಡಿದ್ದರು. ಅದನ್ನು ನಮ್ಮ ಸೊಸೈಟಿ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ನೀಡಿ, ರೈತಜಾಗೃತಿ ಉಂಟು ಮಾಡಲಾಗಿತ್ತು. ಕಾಲಕಾಲಕ್ಕೆ ಸಂಸದರು ರೈತರಿಗೆ ಹಣ ಬಿಡುಗಡೆ ಮಾಡಿಸುವಲ್ಲಿ ತಮ್ಮದೇ ಮಾರ್ಗದರ್ಶನ ನೀಡುತ್ತಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಈ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ರೈತರಿಗೆ ಹೆಚ್ಚು ಉಪಯೋಗಕ್ಕೆ ಬಂದಿದೆ ಎಂದರು.

ನಮ್ಮ ಸಂಸ್ಥೆಯಲ್ಲಿ 1070 ಷೇರುದಾರ ಸದಸ್ಯರಿದ್ದು, ವಾರ್ಷಿಕ ₹30 ಕೋಟಿ ವಹಿವಾಟು ನಡೆಸಲಾಗುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ, ವಾಹನ ಸಾಲ, ಧವಸೆ ಸಾಲ, ಮಧ್ಯಮಾವಧಿ ಸಾಲ, ಹೀಗೆ ವಿವಿಧ ವಿಭಾಗಗಳಲ್ಲಿ ರೈತಸ್ನೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಘವು ಸುಮಾರು ₹70 ಲಕ್ಷ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದರು.

Share this article