ಕನ್ನಡಪ್ರಭ ವಾರ್ತೆ ಸವದತ್ತಿ
2024ರ ಡಿ.14ರಿಂದ 2025ರ ಮಾ.12ರವರೆಗೆ (89 ದಿನ) ಯಲ್ಲಮ್ಮ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು, ಯಲ್ಲಮ್ಮ ದೇವಸ್ಥಾನ ಮತ್ತು ಇತರೆ ಪರಿವಾರದ ದೇವಸ್ಥಾನಗಳ ಹುಂಡಿಗಳಲ್ಲಿ ₹3.40 ಕೋಟಿ ನಗದು, ₹20.82 ಲಕ್ಷ ಮೌಲ್ಯದ ಚಿನ್ನಾಭರಣ, ₹6.39 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಹಾಕಿ ಭಕ್ತಿ ಅರ್ಪಿಸಿದ್ದಾರೆ.
ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಯಲ್ಲಿ ಯಲ್ಲಮ್ಮನ ಸನ್ನಿಧಿಯು ಬೃಹತ್ ಜಾತ್ರೆಗಳಿಗೆ ಸಾಕ್ಷಿಯಾಗುತ್ತದೆ. ಈ ಅವಧಿಯಲ್ಲಿ ಅಪಾರ ಪ್ರಮಾಣದಲ್ಲಿ ಕಾಣಿಕೆಯೂ ಅಮ್ಮನ ಸನ್ನಿಧಿಗೆ ಹರಿದುಬರುತ್ತದೆ. ಆದರೆ, ಕಳೆದ ವರ್ಷ ಭೀಕರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಬಂದಿರಲಿಲ್ಲ.ಈ ಸಲ ಮುಂಗಾರು ಹಂಗಾಮಿನಲ್ಲಿ ಸಮೃದ್ಧ ಮಳೆಯಾಗಿ ಉತ್ತಮ ಫಸಲು ಬಂದಿದ್ದರಿಂದ ರೈತರು ಸೇರಿ ಎಲ್ಲ ವರ್ಗದ ಜನರು ಸಂಭ್ರಮದಿಂದ ಇದ್ದಾರೆ. ಹಾಗಾಗಿ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಯಲ್ಲಿ ನಿರೀಕ್ಷೆಗೂ ಮೀರಿ ಭಕ್ತರು ಬಂದರು. ಇದರೊಂದಿಗೆ ಉಳಿದ ದಿನಗಳಲ್ಲಿ ಭಕ್ತರ ದಟ್ಟಣೆ ಹೆಚ್ಚಿಗೆಯೇ ಇತ್ತು. ಹಾಗಾಗಿ ಕಾಣಿಕೆ ಪ್ರಮಾಣವೂ ಗಣನೀಯವಾಗಿ ಹೆಚ್ಚಿದೆ.
ಯಲ್ಲಮ್ಮನಗುಡ್ಡಕ್ಕೆ ಬರುವ ಭಕ್ತರು ದೇವಸ್ಥಾನದಲ್ಲಿ ಇರಿಸಿದ ಹುಂಡಿಗೆ ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಹಣ, ಒಡವೆ ಹಾಕಿ ಭಕ್ತಿ ಮೆರೆಯುತ್ತಾರೆ. ವಿಶೇಷವೆಂದರೆ ಈ ಹುಂಡಿಯಲ್ಲಿ ಭಾರತ ಮಾತ್ರವಲ್ಲದೆ, ಅಮೆರಿಕ, ನೆದರ್‌ಲ್ಯಾಂಡ್ ಮೊದಲಾದ ದೇಶಗಳ ಕರೆನ್ಸಿಗಳೂ ಪತ್ತೆಯಾಗಿವೆ.
ಈಗ ವಿವಿಧ ಯೋಜನೆಗಳಡಿ ಯಲ್ಲಮ್ಮನಗುಡ್ಡದ ಅಭಿವೃದ್ಧಿಗೆ ಅನುದಾನ ಬರುತ್ತಿದೆ. ಜೊತೆಗೆ ಭಕ್ತರ ಕಾಣಿಕೆ ಪ್ರಮಾಣವೂ ಹೆಚ್ಚಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಗುಡ್ಡವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂಬುದು ಭಕ್ತರ ಆಗ್ರಹ.
ಹುಂಡಿಯ ಹಣವನ್ನು ದೇವಸ್ಥಾನದ ಉಳಿತಾಯ ಖಾತೆಗೆ ಜಮೆ ಮಾಡಲಾಗಿದೆ. ಅಭಿವೃದ್ಧಿ ಕೆಲಸಕ್ಕೆ, ಭಕ್ತರಿಗೆ ಸೌಕರ್ಯ ಕಲ್ಪಿಸಲು ಅದನ್ನು ಬಳಸಲಾಗುವುದೆಂದು ಕಾರ್ಯದರ್ಶಿ, ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ಅಶೋಕ ದುಡಗುಂಟಿ ತಿಳಿಸಿದ್ದಾರೆ.