ಕನ್ನಡಪ್ರಭ ವಾರ್ತೆ ಮದ್ದೂರು
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆ ಸಾಕಷ್ಟು ಕಿರಿದಾಗಿದ್ದು ಸಮಸ್ಯೆಗಳಿಂದ ಕೂಡಿದೆ. ಎಲ್ಲಾ ವಿಭಾಗಗಳಲ್ಲೂ ವಿಶಾಲ ಕೊಠಡಿಗಳಿಲ್ಲದೆ ರೋಗಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಮತ್ತೊಂದು ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಸರ್ಕಾರಕ್ಕೆ 33 ಕೋಟಿ ರು. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ ಎಂದರು.
ಈಗಾಗಲೇ ಆಸ್ಪತ್ರೆಯನ್ನು ಅತ್ಯಾಧುನಿಕ ರೀತಿಯಲ್ಲಿ ನವೀಕರಣ ಮಾಡುವ ಜೊತೆಗೆ ಕ್ಯಾಂಟೀನ್, ಲ್ಯಾಂಡರಿ, ಲ್ಯಾಬ್, ಡೆಡ್ ಹೌಸ್ ಸೇರಿದಂತೆ ವಿವಿಧ ವಿಭಾಗಗಳ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜೊತೆಗೆ 33 ಕೋಟಿ ರು. ವೆಚ್ಚದ ನೂತನ ಕಟ್ಟಡದಲ್ಲಿ ಹೆರಿಗೆ, ಮಕ್ಕಳ ವಾರ್ಡ್, ಕ್ಯಾನ್ಸರ್ ವಿಭಾಗ, ಡಯಾಲಿಸಿಸ್ ವಿಭಾಗ ಸೇರಿದಂತೆ ವೈದ್ಯರು ಹಾಗೂ ಸಿಬ್ಬಂದಿ ವಸತಿ ಗೃಹಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವುದರಿಂದ ಅನಾರೋಗ್ಯಕ್ಕೆ ಒಳಗಾಗುವ ರೋಗಿಗಳಿಗೆ ಎಲ್ಲಾ ರೀತಿಯ ವೈದ್ಯಕೀಯ ಸೇವೆಗಳನ್ನು ಇಲ್ಲಿಯೇ ಒದಗಿಸಲು ಸಾಧ್ಯ. ಮಂಡ್ಯ, ಮೈಸೂರು, ಬೆಂಗಳೂರು ನಗರಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸುವ ಸಮಸ್ಯೆ ತಪ್ಪುವ ಜೊತೆಗೆ ಸ್ಥಳೀಯವಾಗಿಯೇ ಚಿಕಿತ್ಸೆ ಪಡೆಯಬಹುದು ಎಂದರು.
ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ಆಸ್ಪತ್ರೆ ಆಡಳಿತಾಧಿಕಾರಿ ಡಾ.ಬಾಲಕೃಷ್ಣ, ನಗರಸಭಾ ಪೌರಾಯುಕ್ತೆ ರಾಧಿಕಾ, ಬಿಇಒ ಧನಂಜಯ, ಸಿಪಿಐ ನವೀನ್ ಹಾಗೂ ವೈದ್ಯರು, ಸಮಿತಿ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.