- ಕಡರಪ್ಪನಹಟ್ಟಿಗೆ ಭೇಟಿ ನೀಡಿ ಪರಿಶೀಲಿಸಿ ಶಾಸಕ ಕೆ.ಎಸ್.ಬಸವಂತಪ್ಪ ಹೇಳಿಕೆ
ತಾಲೂಕಿನ ಕಡರಪ್ಪನಹಟ್ಟಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಕೆ.ಎಸ್.ಬಸವಂತಪ್ಪ, ದುಸ್ಥಿತಿಯಲ್ಲಿರುವ ಚೆಕ್ ಡ್ಯಾಂ ವ್ಯಾಪ್ತಿ ಪ್ರದೇಶವನ್ನು ವೀಕ್ಷಿಸಿದರು.
ಇಲ್ಲಿ ಕಟ್ಟಿರುವ ಚೆಕ್ ಡ್ಯಾಂ ಹಳೆಯದಾಗಿದೆ. ಮಳೆನೀರು ಸಹ ಸಂಗ್ರಹವಾಗುತ್ತಿಲ್ಲ. ಮಳೆ ಬಂದಾಗ ನಿಲ್ಲುವ ನೀರು ಸೋರಿಕೆಯಾಗಿ, ಹನಿ ನೀರೂ ಇಲ್ಲದಂತೆ ಖಾಲಿಯಾಗುತ್ತದೆ. ಇದರಿಂದ ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತದೆ ಎಂದು ಗ್ರಾಮಸ್ಥರು ಶಾಸಕರಿಗೆ ವಾಸ್ತವ ಸಂಗತಿ ಬಿಚ್ಚಿಟ್ಟರು.40 ಹಳ್ಳಿಗಳಿಗೆ ನೀರು:
ಗುಡ್ಡದ ಇಳಿಜಾರಿನಲ್ಲಿರುವ ಇಲ್ಲಿನ ಚೆಕ್ ಡ್ಯಾಂ ನೂರಾರು ಎಕರೆ ಪ್ರದೇಶ ವ್ಯಾಪ್ತಿ ಹೊಂದಿದೆ. ಇಲ್ಲಿ ಮಿನಿ ಜಲಾಶಯ ನಿರ್ಮಿಸಿದರೆ ಒಂದೇ ಮಳೆಗೆ ಭರ್ತಿಯಾಗುತ್ತದೆ. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಿ ರೈತರು ಮತ್ತು ಸುಮಾರು 30 ರಿಂದ 40 ಹಳ್ಳಿಗಳಿಗೆ ನೀರೊದಗಿಸಬಹುದು. ಪ್ರಮುಖವಾಗಿ ಕಾಡು ಪ್ರಾಣಿಗಳ ಕುಡಿಯುವ ನೀರಿನ ಬವಣೆ ನೀಗಿಸಬಹುದು ಎಂದು ಶಾಸಕರಿಗೆ ಗ್ರಾಮಸ್ಥರು ಮನವರಿಕೆ ಮಾಡಿದರು.ಶಾಶ್ವತ ಪರಿಹಾರ ಸಾಧ್ಯ:
ಶಾಸಕರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನೀರಿನ ಕೊರತೆ ಹೆಚ್ಚಾಗುತ್ತಿದೆ. ಇರುವ ಕೆರೆಗಳ ಒತ್ತುವರಿಯಿಂದ ನೀರು ಸಂರಕ್ಷಣೆ ಮಾಡುವ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಹೀಗಾಗಿ, ಭೂಮಿ ಮೇಲೆ ನೀರು ನಿಲ್ಲುವುದೇ ಕಷ್ಟವಾಗಿದೆ. ಹಳ್ಳಿಗಳಲ್ಲಿರುವ ಕೆರೆಗಳು ಒತ್ತುವರಿ ಆಗುತ್ತವೆ. ಅದೇ ಕಾಡು ಪ್ರದೇಶದ ಇಳಿಜಾರಿನಲ್ಲಿ ಕೆರೆ-ಕಟ್ಟೆ, ಹೊಂಡ ಮತ್ತು ಮಿನಿ ಜಲಾಶಯ ನಿರ್ಮಿಸಿದರೆ ಒತ್ತುವರಿ ಮಾಡಲು ಬರುವುದಿಲ್ಲ. ಇಂತಹ ಕಾಡು ಪ್ರದೇಶದ ಇಳಿಜಾರಿನಲ್ಲಿ ಮಿನಿ ಜಲಾಶಯ ನಿರ್ಮಿಸಿ ನೀರು ಸಂಗ್ರಹಿಸಿದರೆ ಶಾಶ್ವತ ಪರಿಹಾರ ನೀಡಬಹುದಾಗಿದೆ ಎಂದರು.ಈಗಾಗಲೇ ಕ್ಷೇತ್ರದ 10 ರಿಂದ 15 ಕಡೆಗಳಲ್ಲಿ ಗುಡ್ಡಗಳ ಇಳಿಜಾರು ಪ್ರದೇಶಗಳನ್ನು ಗುರುತಿಸಿದ್ದು, ಅಲ್ಲಿ ಮಿನಿ ಜಲಾಶಯ ನಿರ್ಮಾಣ ಮಾಡಿದರೆ ಬೇಸಿಗೆ ಕಾಲದಲ್ಲಿ ಕ್ಷೇತ್ರದಲ್ಲಿ ಉದ್ಭವಿಸಬಹುದಾದ ನೀರಿನ ಸಮಸ್ಯೆ ನೀಗಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಒತ್ತಡ ಹಾಕಿ, ಅನುದಾನ ತಂದು ಮಿನಿ ಜಲಾಶಯ ನಿರ್ಮಿಸಲು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಗುಮ್ಮನೂರು ಶಂಬಣ್ಣ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.- - -
ಬಾಕ್ಸ್ * ಜಲಮೂಲಗಳ ಅಭಿವೃದ್ಧಿಗೆ ಪ್ರಥಮ ಆದ್ಯತೆಗುಡ್ಡಗಳ ಪ್ರದೇಶದ ಕೆಳಭಾಗದಲ್ಲಿರುವ ಕೆರೆಗಳು, ಹೊಂಡಗಳು, ಚೆಕ್ ಡ್ಯಾಂಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಾಗಿದೆ. ನೂರಾರು ಕೋಟಿ ರು. ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕೈಗೊಳ್ಳುವ ಜೊತೆಗೆ ಕೇವಲ ಐದಾರು ಕೋಟಿ ರು. ವೆಚ್ಚದಲ್ಲಿ ನೀರಿನ ಸೆಲೆಯಿರುವ ಗುಡ್ಡಗಳ ಇಳಿಜಾರಿನಲ್ಲಿ ಕೆರೆ-ಕಟ್ಟೆಗಳು, ಚೆಕ್ ಡ್ಯಾಂಗಳು ಹಾಗೂ ಮಿನಿ ಜಲಾಶಯಗಳನ್ನು ನಿರ್ಮಾಣ ಮಾಡಿದರೆ ಭವಿಷ್ಯದಲ್ಲಿ ಶಾಶ್ವತವಾಗಿ ನೀರಿನ ಸಮಸ್ಯೆ ಬಗೆಹರಿಸಬಹುದು. ಈ ಬಗ್ಗೆ ಜಲಸಂಪನ್ಮೂಲ ಮತ್ತು ಸಣ್ಣ ನೀರಾವರಿ ಸಚಿವರ ಬಳಿ ಚರ್ಚಿಸಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅವಶ್ಯವಿರುವ ಕಡೆ ಮಿನಿ ಜಲಾಶಯ ನಿರ್ಮಿಸುವುದಕ್ಕೆ ಹೆಚ್ಚು ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
- - --18ಕೆಡಿವಿಜಿ39, 40ಃ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಕಡರಪ್ಪನಹಟ್ಟಿಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ದುಸ್ಥಿತಿಯಾಗಿರುವ ಚೆಕ್ ಡ್ಯಾಂ ಪರಿಶೀಲನೆ ನಡೆಸಿದರು.