ಎಂಆರ್‌ಪಿಎಲ್‌ ಗುತ್ತಿಗೆ ಕಾರ್ಮಿಕರಿಗೆ ₹ 5 ಲಕ್ಷ ಆರೋಗ್ಯ ವಿಮೆ: ಸಂಸದ ಕ್ಯಾ. ಬ್ರಿಜೇಶ್‌ ಚೌಟ

KannadaprabhaNewsNetwork |  
Published : Oct 16, 2026, 04:00 AM IST
ದ.ಕ. ಸಂಸದ ಕ್ಯಾ.ಬ್ರಿಜೇಶ್‌ ಚೌಟ ನೇತೃತ್ವದಲ್ಲಿ ಸಭೆ ನಡೆಸುತ್ತಿರುವುದು  | Kannada Prabha

ಸಾರಾಂಶ

ನವರಾತ್ರಿಯ ಶುಭ ಸಂದರ್ಭದಲ್ಲಿ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ಪಿಎಲ್‌)ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಸಂತಸದ ಸುದ್ದಿ ಬಂದಿದೆ. ಸಂಸ್ಥೆಯ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ₹ 5 ಲಕ್ಷದ ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವನೆಗೆ ಕೊನೆಗೂ ಒಪ್ಪಿಗೆ ದೊರೆತಿದೆ.

ಮಂಗಳೂರು: ನವರಾತ್ರಿಯ ಶುಭ ಸಂದರ್ಭದಲ್ಲಿ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ಪಿಎಲ್‌)ನಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಸಂತಸದ ಸುದ್ದಿ ಬಂದಿದೆ. ಸಂಸ್ಥೆಯ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ₹ 5 ಲಕ್ಷದ ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವನೆಗೆ ಕೊನೆಗೂ ಒಪ್ಪಿಗೆ ದೊರೆತಿದೆ.

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಮಂಗಳೂರಿನ ಅವರ ಅಧಿಕೃತ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.ಈ ಆರೋಗ್ಯ ವಿಮೆ ಯೋಜನೆಯಿಂದ ಎಂಆರ್‌ಪಿಎಲ್‌ನಲ್ಲಿ ದುಡಿಯುತ್ತಿರುವ 2,000ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರ ಕುಟುಂಬಗಳಿಗೆ ಅನುಕೂಲವಾಗಲಿದೆ. ಕಾರ್ಮಿಕರು ಹಾಗೂ ಅವರ ಕುಟುಂಬಗಳ ಆರೋಗ್ಯ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಮಹತ್ವ ಪಡೆದಿದೆ.

ಮಹಿಳಾ ಕಾರ್ಮಿಕರಿಗೂ ವಿಶೇಷ ಸೌಲಭ್ಯ :

ಆರೋಗ್ಯ ವಿಮೆಯ ಜೊತೆಗೆ ಎಂಆರ್‌ಪಿಎಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಗುತ್ತಿಗೆ ಕಾರ್ಮಿಕರ ಸೌಲಭ್ಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಮಹಿಳಾ ಕಾರ್ಮಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಪ್ರತ್ಯೇಕ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿ ಒದಗಿಸಲು ಒಪ್ಪಿಗೆ ಸೂಚಿಸಲಾಗಿದೆ. ಇದರಿಂದ ಮಹಿಳಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಅಗತ್ಯ ಮೂಲಸೌಕರ್ಯ ಮತ್ತು ಉತ್ತಮ ಕಾರ್ಯಪರಿಸರ ಕಲ್ಪಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಂತಾಗಿದೆ.

ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು, ಎಂಆರ್‌ಪಿಎಲ್‌ನ ಉನ್ನತಾಧಿಕಾರಿಗಳು ಹಾಗೂ ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಮುಖಂಡರು ಇದ್ದರು. ಕಾರ್ಮಿಕರ ಸಮಸ್ಯೆಗಳು ಮತ್ತು ಅವರ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಇದೊಂದು ಐತಿಹಾಸಿಕ ಕ್ರಮ. ಎಂಆರ್‌ಪಿಎಲ್‌ನ ಗುತ್ತಿಗೆ ಕಾರ್ಮಿಕರ ಸಮಸ್ಯೆ ನನ್ನ ಗಮನಕ್ಕೆ ಬಂದ ತಕ್ಷಣ ಅವರ ಪರವಾಗಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಿ, ಇದೀಗ ಆರೋಗ್ಯ ವಿಮೆ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರ ರಕ್ಷಣೆ ನಮ್ಮ ಕರ್ತವ್ಯ. -ಕ್ಯಾ.ಬ್ರಿಜೇಶ್‌ ಚೌಟ, ಸಂಸದರು, ದ.ಕ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂಡುಬಿದಿರೆಯ ಸಾಧಕರಿಗೆ ಸಮಾಜ ಮಂದಿರ ದಸರಾ ಗೌರವ ಬದುಕು ಕಟ್ಟಿಕೊಳ್ಳಲು ಕಲಿಸುವ ಶಿಕ್ಷಣ ಅಗತ್ಯ:ರಾಧಾಕೃಷ್ಣ ಕಲ್ಚಾರ್
ಮಂಗಳೂರು ದಸರಾ ಭಕ್ತ ವೈಭವದ ಪ್ರತೀಕ: ಡಿಕೆ ಶಿವಕುಮಾರ್‌