- ಹೊನ್ನಾಳಿಯಲ್ಲಿ 2023- 2024ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಘಾಟನೆ - - -
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 2023- 2024ನೇ ಪ್ರಸಕ್ತ ವರ್ಷ ₹75.55 ಲಕ್ಷ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕಿಂತ ₹29.54 ಲಕ್ಷ ಹೆಚ್ಚಿಗೆ ಲಾಭ ಕಂಡಿರುವುದು ಸಂತಸದ ಸಂಗತಿ ಎಂದು ಬ್ಯಾಂಕ್ ಅಧ್ಯಕ್ಷ ಕೆ.ತಿಮ್ಮೇಶಪ್ಪ ಹೇಳಿದರು.
ಶುಕ್ರವಾರ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023- 2024ನೇ ಸಾಲಿನ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸಕ್ತ ಸಾಲಿನಲ್ಲಿ ಶೇ.80ರಷ್ಟು ಸಾಲ ವಸೂಲಾತಿ ಗುರಿ ಹೊಂದಲಾಗಿತ್ತು. ಆದರೆ, ಎಲ್ಲರ ಸಹಕಾರದಿಂದ ವಿಶೇಷವಾಗಿ ಹಾಲಿ ಮತ್ತು ಮಾಜಿ ಶಾಸಕರು, ಬ್ಯಾಂಕಿನ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು, ರೈತರು, ಮತ್ತು ರೈತ ಸಂಘದ ಪದಾಧಿಕಾರಿಗಳ ಸಹಕಾರದಿಂದ ಶೇ.86.01ರಷ್ಟು ಗುರಿ ಸಾಧಿಸಿದ್ದೇವೆ. ಇದಕ್ಕಾಗಿ ಎಲ್ಲರನ್ನೂ ಅಭಿನಂದಿಸುವುದಾಗಿ ಹೇಳಿದರು.
ಸಭೆ ಆರಂಭದಲ್ಲಿ ಕೆಲವರು ಸಭಾ ತಿಳಿವಳಿಕೆ ಪತ್ರಗಳು ತಮಗೆ ಬಂದಿಲ್ಲ ಎಂದು ಅಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ವ್ಯವಸ್ಥಾಪಕರು, ನಿಯಮಾವಳಿಗಳ ಪ್ರಕಾರ ಎಲ್ಲ ಸದಸ್ಯರಿಗೆ ಮಹಾಸಭೆ ತಿಳಿವಳಿಕೆ ಪತ್ರಗಳನ್ನು ಅಂಚೆ ಮೂಲಕ ಕಳುಹಿಸಲಾಗಿತ್ತು. ಕೆಲವು ಕಡೆಗಳಲ್ಲಿ ಅಂಚೆ ಇಲಾಖೆ ಪತ್ರ ಬಟವಾಡೆಯಲ್ಲಿನ ನ್ಯೂನತೆಯಿಂದ ಸಕಾಲಕ್ಕೆ ತಲುಪಿಲ್ಲದಿರಬಹುದು. ಮುಂದಿನ ಬಾರಿ ಸಭಾ ತಿಳಿವಳಿಕೆ ಪತ್ರಗಳನ್ನು ಅಂಚೆ ಮೂಲಕ ಕಳಿಸಿ, ಸದಸ್ಯರ ಮೊಬೈಲ್‌ಗಳಿಗೂ ಕರೆ ಮಾಡಿ ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ 2023- 2024ನೇ ಸಾಲಿನ ಆಡಳಿತ ವರದಿಯನ್ನು ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಟಿ.ಜಿ.ರಮೇಶ್ ಗೌಡ ಸಭೆಯಲ್ಲಿ ಓದಿದ ನಂತರ ಅಂಗೀಕಾರ ಪಡೆಯಲಾಯಿತು. 2023-24ನೇ ಸಾಲಿನ ಲೆಕ್ಕಪರಿಶೋಧನಾ ಆರ್ಥಿಕ ತಃಖ್ತೆಗಳನ್ನು ವ್ಯವಸ್ಥಾಪಕಿ ವಿಶಾಲಾಕ್ಷಮ್ಮ ಓದಿದ ನಂತರ ಅಂಗೀಕರಿಸಲಾಯಿತು. ಅನುಪಾಲನಾ ವರದಿಯನ್ನು ಎಂ.ಜಿ.ಬಸವರಾಜಪ್ಪ, ಲೆಕ್ಕ ಪರಿಶೋಧಕರ ಆಯ್ಕೆ ಬಗ್ಗೆ ಎಲ್.ಕೆ. ಚಂದ್ರಪ್ಪ, ಅಂದಾಜು ಬಜೆಟ್‌ಗಿಂತ ಹೆಚ್ಚುವರಿ ಖರ್ಚಾದ ಬಾಬುಗಳಿಗೆ ಮಂಜೂರಾತಿ ಬಗ್ಗೆ ಎಚ್.ಪಿ. ವಿಜಯಕುಮಾರ್ ಹಾಗೂ ಬ್ಯಾಂಕ್ ಗಳಿಸಿರುವ ನಿವ್ವಳ ಲಾಭಾಂಶ ವಿಂಗಡಣೆ ಕುರಿತು ಕೆ.ವಿ.ನಾಗರಾಜ್ ವಿಷಯ ಮಂಡನೆ ಮಾಡಿ, ಅಂಗೀಕಾರ ಪಡೆಯಲಾಯಿತು.
- - - -20ಎಚ್.ಎಲ್.ಐ1: