ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಬೀದಿ ದೀಪಗಳಿಗೆ ಬಳಕೆಯಾಗಿರುವ ವಿದ್ಯುತ್ ಬಿಲ್ ಬಾಕಿ ೮ ಸಾವಿರ ಕೋಟಿ ರು. ಇದೆ ಎಂದು ರಾಜ್ಯ ಐದನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ವತಿಯಿಂದ ನಗರದ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
ಕುಡಿಯುವ ನೀರು ಹಾಗೂ ಬೀದಿ ದೀಪಗಳಿಗೆ ಕಾಲ ಕಾಲಕ್ಕೆ ವಿದ್ಯುತ್ ಬಿಲ್ ಪಾವತಿಸಿಕೊಂಡು ಬರುವಲ್ಲಿ ಪಂಚಾಯ್ತಿಗಳು ವಿಫಲವಾಗಿವೆ. ಇದರಿಂದ ೫ ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ ಇದ್ದು, ಬಡ್ಡಿ, ಸುಸ್ತಿಬಡ್ಡಿ ಸೇರಿ ೮ ಸಾವಿರ ಕೋಟಿ ರು.ಗಳಾಗಿದೆ ಎಂದು ವಿವರಿಸಿದರು.ರಾಜ್ಯ ಸರ್ಕಾರ ೩೧.೦೩.೨೦೨೩ರಲ್ಲಿ ೩ ಸಾವಿರ ಕೋಟಿ ರು.ಗಳನ್ನು ವಿದ್ಯುತ್ ಇಲಾಖೆಯ ೫ ವಿಭಾಗಗಳಿಗೆ ಒನ್ ಟೈಂ ಸೆಟ್ಲ್‌ಮೆಂಟ್ ಹೆಸರಿನಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತು. ಹಣ ಬಿಡುಗಡೆಯಾಗುವುದು ವಿಳಂಬವಾದ್ದರಿಂದ ೩ ಸಾವಿರ ಕೋಟಿ ರು.ಗಳನ್ನು ಬಡ್ಡಿಗೆ ವಜಾ ಮಾಡಿಕೊಂಡಿತು. ಆನಂತರವೂ ಹಣ ಪಾವತಿಸಲು ವಿಳಂಬದ ತಿಂಗಳಲ್ಲಿ ಬಳಕೆಯಾದ ವಿದ್ಯುತ್ ಸೇರಿಸಿ ೮ ಸಾವಿರ ಕೋಟಿ ರು. ಬಾಕಿ ಇರುವುದಾಗಿ ಹೇಳುತ್ತಾ ಬಂದಿವೆ ಎಂದರು.
ಗ್ರಾಮ ಪಂಚಾಯ್ತಿ ಅಧಿಕಾರಿಗಳೂ ಕೂಡ ವಿದ್ಯುತ್ ಬಿಲ್ ಬಾಕಿ ಪಾವತಿ ಬಗ್ಗೆಯಾಗಲೀ, ಕುಡಿಯುವ ನೀರಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್‌ನಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿದೆ. ಎಲ್ಲಿ ಕೆಟ್ಟುನಿಂತಿದೆ. ಕೆಟ್ಟು ನಿಂತಿರುವ ಸ್ಥಳದಲ್ಲಿ ಅಳವಡಿಸಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆಯೇ, ಇಲ್ಲವೇ ಎಂಬುದನ್ನು ಯಾರೊಬ್ಬರೂ ಪರಿಶೀಲಿಸುತ್ತಿಲ್ಲ. ಇದರಿಂದ ಕುಡಿಯುವ ನೀರಿನ ವ್ಯವಸ್ಥೆ ಕೆಟ್ಟುನಿಂತಿದ್ದರೂ ವಿದ್ಯುತ್ ಶುಲ್ಕ ವಿಧಿಸಿಕೊಂಡು ಬರಲಾಗುತ್ತಿದೆ. ಗ್ರಾಪಂ ಅಧಿಕಾರಿಗಳು ವಿದ್ಯುತ್ ಇಲಾಖೆ ಅಧಿಕಾರಿಗಳೊಂದಿಗೆ ಈ ಕುರಿತು ಮಾತುಕತೆ, ಸಂವಹನವನ್ನೇ ನಡೆಸದಿರುವುದು ವಿದ್ಯುತ್ ಬಾಕಿ ಬೆಳೆಯುವುದಕ್ಕೆ ಕಾರಣವಾಗಿದೆ ಎಂದರು.೭ನೇ ಹಣಕಾಸು ಆಯೋಗ ರಚನೆಯಾಗಬೇಕಿತ್ತು:
ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ೨೧೦೦ ಕೋಟಿ ರು. ಹಣಕ್ಕೆ ತಡೆ ಉಂಟಾಗಿತ್ತು. ಹಣಕಾಸು ಆಯೋಗಗಳು ಐದು ವರ್ಷದ ಅವಧಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡುತ್ತವೆ. ಅದನ್ನು ರಾಜ್ಯಪಾಲರ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿ ಅಲ್ಲಿ ಉಭಯ ಸದನಗಳಲ್ಲಿ ಅಂಗೀಕಾರ ದೊರೆಯಬೇಕಿತ್ತು. ಸರ್ಕಾರಗಳು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಜಿಪಂ, ತಾಪಂ ಚುನಾವಣೆಗಳನ್ನು ನಡೆಸಿದ್ದರೆ ಈಗಾಗಲೇ ಆರನೇ ಹಣಕಾಸು ಆಯೋಗ ಮುಗಿದು ಏಳನೇ ಹಣಕಾಸು ಆಯೋಗ ರಚನೆಯಾಗಬೇಕಿತ್ತು ಎಂದರು.೨೦೨೩ರಲ್ಲಿ ಐದನೇ ಹಣಕಾಸು ಆಯೋಗ ರಚನೆಯಾಯಿತು. ೧೫ನೇ ಹಣಕಾಸು ಆಯೋಗದ ಷರತ್ತುಗಳಲ್ಲಿ ಜಿಪಂ, ತಾಪಂ ಚುನಾವಣೆ ನಡೆಯದ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಬಾರದು ಎನ್ನುವುದು ಸೇರಿತ್ತು. ಇದರ ಪರಿಣಾಮ ಕೇಂದ್ರದಿಂದ ಹಣ ಬಿಡುಗಡೆಯಾಗಲೇ ಇಲ್ಲ. ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯ ಹಣಕಾಸು ರಚನೆಯಾದ ನಂತರ ಆಯೋಗದ ಶಿಫಾರಸುಗಳನ್ನು ರಾಜ್ಯಪಾಲರಿಗೆ ಕಳುಹಿಸಿ ನಂತರ ಅದು ಸರ್ಕಾರಕ್ಕೆ ತಲುಪಿ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತ ನಂತರ ಕೇಂದ್ರ ಸರ್ಕಾರಕ್ಕೆ ರವಾನಿಸಿ ೨೦೨೩-೨೪ ಹಾಗೂ ೨೪-೨೫ನೇ ಸಾಲಿನ ಅನುದಾನವನ್ನು ಬಿಡುಗಡೆ ಮಾಡಿಸಲಾಗಿದೆ ಎಂದರು.
೨೩ ಜಿಲ್ಲೆಗಳಲ್ಲಿ ಅಭಿಪ್ರಾಯ ಸಂಗ್ರಹ:ಐದನೇ ಹಣಕಾಸು ಆಯೋಗ ಈಗಾಗಲೇ ರಾಜ್ಯದ ೨೩ ಜಿಲ್ಲೆಗಳಿಗೆ ತೆರಳಿ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಇನ್ನುಳಿದ ಜಿಲ್ಲೆಗಳಿಗೂ ತೆರಳಿ ಅವರೆಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದು ನುಡಿದರು.
ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಲಹೆ-ನಿರ್ದೇಶನಗಳು ಇದ್ದರೆ ಮುಕ್ತವಾಗಿ ನೀಡಬಹುದು ಎಂದರು.ಸಭೆಯಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಐದನೇ ಹಣಕಾಸು ಆಯೋಗದ ಸದಸ್ಯರಾದ ಆರ್.ಎಸ್.ಪೋಂಡೆ, ಮಹಮದ್ ಸನಾವುಲ್ಲಾ, ಕಾರ್ಯದರ್ಶಿ ಆರ್.ಸ್ನೇಹಲ್, ಸಮಾಲೋಚಕ ಕೆಂಪೇಗೌಡ, ಸು.ಜಿ.ಸುಪ್ರಸನ್ನ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಕೆ.ಯಾಲಕ್ಕೀಗೌಡ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಇತರರು ಹಾಜರಿದ್ದರು.ಹಣಕಾಸು ಆಯೋಗಕ್ಕೆ ನೀಡಲಾದ ಸಲಹೆಗಳು
ಜಿಲ್ಲಾ ಪಂಚಾಯ್ತಿಗೆ ನೀಡುತ್ತಿರುವ ಅನುದಾನದಲ್ಲಿ ಶೇ.೧೦ರಷ್ಟು ಹೆಚ್ಚಳ ಮಾಡಬೇಕು. ಏಕೆಂದರೆ, ಈ ಅನುದಾನ ಸಾಲದಂತಾಗಿದೆ. ರಸ್ತೆಗಳ ನಿರ್ಮಾಣ, ನಿರ್ವಹಣೆ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ನಿರ್ವಹಿಸಲು ಅನುದಾನ ಸಾಲದಂತಾಗಿದೆ. ಆದ್ದರಿಂದ ಅನುದಾನವನ್ನು ಶೇ.೧೦ರಷ್ಟು ಹೆಚ್ಚಿಸಿದರೆ ಅನುಕೂಲವಾಗಲಿದೆ.ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸೌಲಭ್ಯಗಳನ್ನು ಕಲ್ಪಿಸುವ ವೇಳೆ ಯಾವ ಪ್ರದೇಶದಲ್ಲಿ ಹೆಚ್ಚು ಜನರು ಇರುತ್ತಾರೆ, ಎಲ್ಲಿ ಕಡಿಮೆ ಇರುತ್ತಾರೆ ಎಂಬುದನ್ನು ಗುರುತಿಸಿಕೊಂಡು ಕಡಿಮೆ ಜನರು ಇರುವ ಪ್ರದೇಶದ ಅನುದಾನವನ್ನು ಹೆಚ್ಚು ಜನರಿರುವ ಕಡೆಗೆ ಉಪಯೋಗಿಸಿಕೊಳ್ಳುವುದಕ್ಕೆ ಅನುಕೂಲ ಕಲ್ಪಿಸಿಕೊಟ್ಟರೆ ನೆರವಾಗಲಿದೆ.
ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಅನುದಾನಗಳಿಗೆ ಒಂದೇ ರೀತಿಯ ಮಾರ್ಗಸೂಚಿ ನೀಡಲಾಗಿದೆ. ಇದರಿಂದ ಕಾರ್ಯಕ್ರಮಗಳು ಪುನರಾವರ್ತನೆಯಾಗಲಿವೆ. ತಾಪಂ ಅನುದಾನದಲ್ಲಿ ಆಸ್ತಿಗಳ ನಿರ್ವಹಣೆ, ಜಿಪಂ ಅನುದಾನದಲ್ಲಿ ಆಸ್ತಿಗಳ ಸೃಜನೆ ರೀತಿಯ ಮಾರ್ಗಸೂಚಿ ಅವಶ್ಯಕತೆ ಇದೆ.ಗ್ರಾಪಂ, ತಾಪಂ, ಜಿಪಂ ಕಚೇರಿ ಕಟ್ಟಡಗಳ ನಿರ್ಮಾಣ, ನವೀಕರಣಕ್ಕೆ ಅನುದಾನ ಒದಗಿಸುವುದು. ಸರ್ಕಾರಿ ಕಚೇರಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳು ಶೀಘ್ರಗತಿಯಲ್ಲಿ ಪರಿಣಾಮಕಾರಿಯಾಗಿ ತಲುಪಿಸಲು ಅನುಕೂಲ ಮಾಡಿಕೊಡುವುದು. ಮಾನವ ಅಭಿವೃದ್ಧಿ ಸೂಚ್ಯಂಕಗಳನ್ನು ಮಾಪಕವಾಗಿ ಇಟ್ಟುಕೊಂಡು ಜಿಲ್ಲೆಗಳಿಗೆ ಅನುದಾನ ನಿಗದಿಪಡಿಸುವುದು. ಸಮತೋಲಿತ ಅಭಿವೃದ್ಧಿಗೆ ಒತ್ತು ನೀಡುವುದು.