ಕನ್ನಡಪ್ರಭ ವಾರ್ತೆ ಪಾಂಡವಪುರ
ಆರ್‌ಎಸ್‌ಎಸ್ ಸಂಘಟನೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾರ್ಯಕರ್ತರು ಗಣವೇಷದಲ್ಲಿ ಪಥಸಂಚಲನ ನಡೆಸಿದರು.ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಸೇರಿದ ನೂರಾರು ಕಾರ್ಯಕರ್ತರು ಸಂಘದ ಪಾರ್ಥನೆ ಸಲ್ಲಿಸುವ ಮೂಲಕ ಪಥಸಂಚಲನಕ್ಕೆ ಚಾಲನೆ ನೀಡಿದರು. ನಂತರ ಪಥಸಂಚಲನವು ಪೇಟೆಬೀದಿ ಮೂಲಕ ಶಾಂತಿನಗರ, ಮಹಾಂಕಾಳೇಶ್ವರಿ ಬಡಾವಣೆ, ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಬೀದಿ, ಬಸವನಗುಡಿ ಬೀದಿ, ಫಂಕ್ಷನ್ ಕಾಲೋನಿ, ಪೊಲೀಸ್ ಠಾಣೆ ರಸ್ತೆ, ಬೀರಶೆಟ್ಟಹಳ್ಳಿ, ಹಿರೇಮರಳಿ ಆಟೋ ಸರ್ಕಲ್, ಚರ್ಚ್ ರಸ್ತೆ, ಮಂಡ್ಯ ಸರ್ಕಲ್, ಐದು ದೀಪದ ವೃತ್ತ ಮೂಲಕ ತ್ಯಾಗರಾಜ ಕಾಲೋನಿ, ವಿಸಿ ಕಾಲೋನಿಯ ಬಳಿ ಇರುವ ಶ್ರೀರಾಮಮಂದಿರ ಬಳಿ ಆಗಮಿಸಿದ ಪಥಸಂಚಲನವನ್ನು ಮುಕ್ತಾಯಗೊಳಿಸಿದರು.
ಈ ವೇಳೆ ಕೆಲ ಬಡಾವಣೆಗಳಲ್ಲಿ ನಿವಾಸಿಗಳು ಕಾರ್‍ಯಕರ್ತರಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸ್ವಾಗತಿಸಿದರು. ನಡುರಸ್ತೆಯಲ್ಲಿ ಶಿಸ್ತುಬದ್ಧವಾಗಿ ಕುಳಿತ ಕಾರ್ಯಕರ್ತರು ಬಾಳೆಹಣ್ಣು, ಬೆಲ್ಲದ ಪಾನಕ ಹಾಗೂ ಬೆಳಗ್ಗಿನ ಉಪಹಾರವನ್ನು ಸವಿದರು. ಆರ್ ಎಸ್ ಎಸ್ ಕಾರ್ಯಕರ್ತರ ಪಥಸಂಚಲನದುದ್ದಕ್ಕೂ ಪೊಲೀಸ್ ಬಿಗಿಬಂದೋಬಸ್ತ್ ಮಾಡಿದ್ದರು.ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಆರ್‌ಎಸ್‌ಎಸ್ ಸಂಘಟನೆಯೂ ಯಶಸ್ವಿಯಾಗಿ ನೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಾರ್ಯಕರ್ತರು ಗಣವೇಷಧಾರಿಗಳಾಗಿ ಪಥಸಂಚಲನದಲ್ಲಿ ಭಾಗಿಯಾಗಿ ಸುಮಾರು 3 ಕಿಮೀ ವರಗೆ ನಡೆಯುವ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದರು.
ಆರ್‌ಎಸ್‌ಎಸ್ ಸಂಘಟನೆ ಶಿಸ್ತು ರೂಢಿಸಿಕೊಂಡು ಕೆಲಸ ಮಾಡುತ್ತಿದೆ. ದೇಶದ ಸಂಸ್ಕೃತಿ, ಸಂಸ್ಕಾರವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ. ಮುಂದೆ ಭಾರತ ವಿಶ್ವಕ್ಕೆ ಮಾದರಿಯಾಗಬೇಕು ಎಂಬ ನಿಟ್ಟಿನಲ್ಲಿ ಸಂಕಲ್ಪತೊಟ್ಟು ಕೆಲಸ ಮಾಡಲಿದೆ ಎಂದು ಹೇಳಿದರು.ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡಲು ಕಾಂಗ್ರೆಸ್ ಪಕ್ಷವಲ್ಲ, ಯಾವುದೇ ಪಕ್ಷದಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಅಭಿವೃದ್ದಿ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಖಜಾನೆ ಖಾಲಿಯಾಗಿದೆ. ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಹಣವಿಲ್ಲ. ಜನರು ಪ್ರಶ್ನೆ ಮಾಡ್ತಾರೆ ಎಂದು ಕೆಲವರು ಇಂತಹ ವಿಷಯಗಳನ್ನು ಮುನ್ನೆಲೆಗೆ ತಂದು ವಿಷಯಾಂತರ ಮಾಡಲು ಮುಂದಾಗುತ್ತಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಜಾತಿ ಸಮೀಕ್ಷೆ ಅವಶ್ಯಕತೆ ಇರಲಿಲ್ಲ, ಅದನ್ನು ಮಾಡುತ್ತಿದ್ದಾರೆ. ಇದೀಗ ಆರ್‌ಎಸ್‌ಎಸ್ ಹಾಗೂ ಪಥಸಂಚಲನವನ್ನು ಬ್ಯಾನ್ ಮಾಡಬೇಕು ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳ್ತಾನೆ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಮಗನಾಗಿ, ಒಬ್ಬ ಜವಾಬ್ದಾಯುತ ಸಚಿವನಾಗಿ ಈ ರೀತಿ ಹೇಳಿಕೆ ಕೊಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.ನಾಗಮಂಗಲ, ಮದ್ದೂರು ಹಾಗೂ ಕೆರೆಗೋಡು ಘಟನೆಗಳ ನಂತರ ಹಿಂದೂ ಸಮಾಜ ಜಾಗೃತರಾಗಿದ್ದಾರೆ. ನೀವು ಇದೇರೀತಿ ಮುಂದುವರಿದರೆ ನಿಮಗೆ ತಕ್ಕಪಾಠ ಕಲಿಸುವ ಕೆಲಸ ಹಿಂದೂ ಸಮಾಜ ಮಾಡಲಿದೆ ಎಂದರು.
ಈ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್, ಮುಖಂಡರಾದ ಜೆ.ಶಿವಲಿಂಗೇಗೌಡ, ಎಚ್.ಎನ್.ಮಂಜುನಾಥ್, ಆನಂದ್, ಶಂಭೂನಹಳ್ಳಿ ಮಂಜುನಾಥ್, ಚಿಕ್ಕಮರಳಿ ನವೀನ್, ಸಂದೇಶ್, ಮಾರ್ಕಾಂಡಯ್ಯ, ಡೈರಿ ರಾಮು, ಸೋಮಶೇಖರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.