ಕನ್ನಡಪ್ರಭ ವಾರ್ತೆ ಮುಳಬಾಗಲು
ಆರ್‌ಎಸ್‌ಎಸ್ ಹಿಂದಿನಿಂದಲೂ ದೇಶದ ರಕ್ಷಣೆ, ಸಂಸ್ಕೃತಿ, ಹಿಂದುತ್ವ ಉಳಿಸಲು ಮಹತ್ವದ ಪಾತ್ರ ವಹಿಸಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಮೆಚ್ವುಗೆ ವ್ಯಕ್ತಪಡಿಸಿದರು.ನಗರದ ಯೋಗಿ ನಾರೇಯಣ ಕಲ್ಯಾಣ ಮಂಟಪದಲ್ಲಿ ಆತ್ಮ ನಿರ್ಭರ ಭಾರತ ಸಂಕಲ್ಪ ಅಭಿಯಾನ ತಾಲೂಕು ಕಾರ್ಯಾಗಾರ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಮುಖ ನಾಯಕರ ಸೂಚನೆಯ ಮೇರೆಗೆ ಕೋಲಾರ ಜಿಲ್ಲೆಯಾದ್ಯಂತ ರಕ್ತದಾನ ಶಿಬಿರಗಳನ್ನು ಎಲ್ಲಾ ತಾಲೂಕುಗಳಲ್ಲಿ ನಡೆಸಲಾಗಿದ್ದು, ಮುಳಬಾಗಿಲಿನಲ್ಲೂ ಶಿಬಿರ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಅ.೧೨ ರಂದು ನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಕನಿಷ್ಠ ೨ ಸಾವಿರ ಕರ ಸೇವಕರು ಹಳ್ಳಿ ಹಳ್ಳಿ ಮತ್ತು ನಗರ ಪ್ರದೇಶದಿಂದ ಬರಬೇಕೆಂದು ಮನವಿ ಮಾಡಿದರು.ಕೇಂದ್ರ ಸರ್ಕಾರದಿಂದ ಆವಣಿ ಗ್ರಾಮದಲ್ಲಿ ವಾಲ್ಮೀಕಿ ಆಶ್ರಮ ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ಪ್ರತಿ ಮನೆಯಲ್ಲೂ ಹಿಂದುತ್ವ ಉಳಿಸಲು ಕರಸೇವಕರಾಗಬೇಕು ಜೊತೆಗೆ ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎಂಬ ಘೋಷಣೆ ಮೊಳಗಿಸಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ರಸ್ತೆಗಳೆಲ್ಲ ಗುಂಡಿಗಳಾಗಿವೆ, ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಸಹ ಕಾಂಗ್ರೆಸ್ ಸರ್ಕಾರ ಮಾಡುತ್ತಿಲ್ಲ ಎಂದು ಆರೋಪಿಸಿದರಲ್ಲದೆ, ಈ ಸರ್ಕಾರವನ್ನು ಕಿತ್ತು ಎನ್‌ಡಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಬಿಜೆಪಿ ಕಾರ್ಯಕರ್ತರು ಶ್ರಮ ವಹಿಸಬೇಕೆಂದು ಕಿವಿಮಾತು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಹಿಂದೂಗಳಿಗೆ ಮೊದಲ ಕವಿ ವಾಲ್ಮೀಕಿ ಮಹರ್ಷಿಯವರು. ಅವರು ರಾಮಾಯಣವೆಂಬ ಶ್ರೇಷ್ಠ ಗ್ರಂಥವನ್ನು ಬರೆದಿದ್ದರಿಂದ ಅಯ್ಯೋಧ್ಯೆಯಲ್ಲಿ ಮತ್ತೆ ಶ್ರೀರಾಮ ಮಂದಿರವನ್ನು ನಿರ್ಮಿಸಲು ಅನುಕೂಲವಾಯಿತು ಎಂದು ತಿಳಿಸಿದರು.
ಎಲ್.ಕೆ.ಅಡ್ವಾನಿ ಶ್ರೀ ರಾಮಮಂದಿರ ನಿರ್ಮಾಣಕ್ಕಾಗಿ ರಥಯಾತ್ರೆ ಮಾಡಿದಾಗ ವಿರೋಧ ಪಕ್ಷದವರು ಓಟಿಗಾಗಿ ಎಂದು ಗೇಲಿ ಮಾಡಿದ್ದರು, ಆದರೆ ಪ್ರಧಾನಿ ಮೋದಿಯವರ ಅವಧಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ನಿರ್ಮಾಣ ಮಾಡುವ ಮೂಲಕ ವಿರೋಧ ಪಕ್ಷದವರಿಗೆ ಉತ್ತರ ನೀಡಿದ್ದೇವೆಂದು ತಿಳಿಸಿದರು.ಮೋದಿ ಪ್ರಧಾನಿಯಾದ ನಂತರ ಆತ್ಮ ನಿರ್ಭರ ಮತ್ತು ನಮ್ಮ ಸ್ವದೇಶಿ ಶಸ್ತ್ರಗಳು ನಿರ್ಮಿಸಿ ಆಪರೇಷನ್ ಸಿಂದೂರ್ ಯಶಸ್ವಿಯಾಗಿ ನಡೆಸಲಾಗಿದೆ. ಇದರಿಂದ ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಹೇಳಿದರು.
ಈ ಹಿಂದೆ ನಮಗೆ ಪಾಕಿಸ್ತಾನ ಶತ್ರು ದೇಶವಾಗಿತ್ತು, ಆದರೆ ಈಗ ಅಮೆರಿಕಾ ದೇಶವನ್ನು ಎದುರಿಸುವ ಶಕ್ತಿ ಭಾರತ ದೇಶಕ್ಕೆ ಬಂದಿದ್ದು ಪಾಕಿಸ್ತಾನ ನಮಗೆ ಲೆಕ್ಕಕ್ಕೇ ಇಲ್ಲ ಎಂದು ಗೇಲಿ ಮಾಡಿದರು.ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಶಾಸಕ ಕೊತ್ತೂರು ಜಿ.ಮಂಜುನಾಥ್ ಸೇರಿ ಇಡೀ ಕಾಂಗ್ರೆಸ್ ಟೀಂ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಅಧಿಕಾರ ಹಿಡಿಯಲು ಹರಸಾಹಸ ಮಾಡಿದರೂ ಅವರ ಕೈಯಲ್ಲಿ ಆಗಲಿಲ್ಲ, ಆದರೆ ಎನ್‌ಡಿಎ ಅಭ್ಯರ್ಥಿಗಳು ಬಹುಮತದಿಂದ ಪಟ್ಟಣ ಪಂಚಾಯಿತಿ ಅಧಿಕಾರ ಹಿಡಿದಿದ್ದೇವೆಂದು ತಿಳಿಸಿದರು.
ಶೀಗೇಹಳ್ಳಿ ಸುಂದರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಮಮತಗೌಡ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ಪದ್ಮನಾರಾಯಣಸ್ವಾಮಿ, ಗ್ರಾಮಾಂತರ ಅಧ್ಯಕ್ಷ ಮೈಸೂರು ಸುರೇಶ್ ರಾಜು, ವೇಮಗಲ್ ಕುರುಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಿ.ಸಿ. ರಾಮಚಂದ್ರಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯ್ ಕುಮಾರ್, ಮುಖಂಡರಾದ ವಿಶ್ವನಾಥರೆಡ್ಡಿ, ಕೆ.ಜೆ. ಮೋಹನ್, ಮೈಕ್ ಶಂಕರ್, ವಿಶ್ವನಾಥ್, ಚರಣ್, ಬಾಬು ಸೋಮಶೇಖರ್, ಜಯರಾಮ್ ಇದ್ದರು.