ಧಾರವಾಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ತುಂಬಿರುವ ಹಾಗೂ ವಿಜಯದಶಮಿಯ ಹಿನ್ನೆಲೆಯಲ್ಲಿ ಧಾರವಾಡ ಘಟಕದ ವತಿಯಿಂದ ಅ. 12ರಂದು ಮಧ್ಯಾಹ್ನ 3ಕ್ಕೆ ಧಾರವಾಡದಲ್ಲಿ ಬೃಹತ್ ಪಥಸಂಚಲನ ಆಯೋಜಿಸಿದೆ.
ಮಾರ್ಗ ಒಂದರ ಪಥಸಂಚಲನವು ಭಾರತ ಪ್ರೌಢಶಾಲೆಯಿಂದ ರಿಗಲ್ ಸರ್ಕಲ್, ಮೀನು ಮಾರುಕಟ್ಟೆ, ಗಾಂಧಿ ಚೌಕ್ ಮಾರ್ಗವಾಗಿ ಆಲೂರು ವೆಂಕಟರಾವ್ ವೃತ್ತದ ಮೂಲಕ ಕರ್ನಾಟಕ ಕಾಲೇಜು ಮೈದಾನ ತಲುಪಲಿದೆ. ಮಾರ್ಗ ಎರಡು ಭಾರತ ಪ್ರೌಢಶಾಲೆಯಿಂದ ರಿಗಲ್ ವೃತ್ತ, ಮಾರುಕಟ್ಟೆ, ವಿವೇಕಾನಂದ ವೃತ್ತ, ಅಕ್ಕಿಪೇಟೆ, ವಿಜಯ ಟಾಕೀಸ್ ರಸ್ತೆ, ಆಲೂರು ವೆಂಕಟರಾವ್ ವೃತ್ತದ ಮೂಲಕ ಕಾಲೇಜು ಮೈದಾನ ತಲುಪಲಿದೆ. ಮಾರ್ಗ ಮೂರು ಧಾರವಾಡ ಶಿವಾಜಿ ವೃತ್ತ, ಮರಾಠಾ ಕಾಲನಿ, ದುರ್ಗಾದೇವಿ ದೇವಸ್ಥಾನ, ಜಿಲ್ಲಾ ನ್ಯಾಯಾಲಯದ ಸಂಕೀರ್ಣ, ಆಲೂರು ವೆಂಕಟರಾವ್ ವೃತ್ತದ ಮೂಲಕ ಕಾಲೇಜು ಮೈದಾನ ತಲುಪಲಿದೆ.
ಆರ್‌ಎಸ್‌ಎಸ್ ಗಣವೇಷಾಧಾರಿ ಸ್ವಯಂ ಸೇವಕರು ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ. ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ವಿಜ್ಞಾನಿ ಡಾ. ರವಿಕುಮಾರ ಹೊಸಮನಿ ಭಾಗವಹಿಸಲಿದ್ದಾರೆ. ಸ್ವಯಂ ಸೇವಕ ಸಂಘದ ಪ್ರಾಂತ ಬೌಧಿಕ ಪ್ರಮುಖ ದುರ್ಗಣ್ಣ ಭಾಗವಹಿಸಲಿದ್ದಾರೆ.ಪೊಲೀಸ್ ರೂಟ್‌ಮಾರ್ಚ್: ಮುನ್ನೆಚ್ಚರಿಕೆ ಕ್ರಮವಾಗಿ ಹು-ಧಾ ಮಹಾನಗರ ಪೊಲೀಸರು ಧಾರವಾಡದಲ್ಲಿ ಪೊಲೀಸ್ ರೂಟ್‌ಮಾರ್ಚ್ ನಡೆಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಪಥ ಸಂಚಲನದಲ್ಲಿ ಆರೇಳು ಸಾವಿರ ಜನ ಸೇರುವ ಅಂದಾಜು ಮಾಡಲಾಗಿದ್ದು, ಅದಕ್ಕೆ ಪೂರಕವಾಗಿ ಬಂದೋಬಸ್ತ್ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾನುವಾರ ಕೆಲವು ಪ್ರದೇಶಗಳಲ್ಲಿ ವಾಹನ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗುವುದು ಎಂದರು.ಹು-ಧಾ ಪೊಲೀಸ್ ಕಮಿಷ್ನರೇಟ್‌ನ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ ಸಿ.ಆರ್., ಎಸಿಪಿ ಸಿದ್ದನಗೌಡ ಪಾಟೀಲ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಇದ್ದರು.