ಕನ್ನಡಪ್ರಭ ವಾರ್ತೆ ನಂಜನಗೂಡು
ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಸಂಭ್ರಮ, ಸಡಗರದಿಂದ ಪಾಲ್ಗೊಂಡು ರಥೋತ್ಸವಗಳ ವೈಭವವನ್ನು ಕಂಡು ಭಕ್ತಿಯಿಂದ ಹಣ್ಣು ಧವನ ಎಸೆದು ಹರಕೆ ತೀರಿಸಿದರು.
ಚಿಕ್ಕಜಾತ್ರಾ ಮಹೋತ್ಸವ ಅಂಗವಾಗಿ ಬೆಳಗ್ಗೆ 4 ಗಂಟೆಯಿಂದಲೇ ದೇವಾಲಯದಲ್ಲಿ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿಗೆ ಕ್ಷೀರಾಭಿಷೇಕ, ಫಲಪಂಚಾಮೃತಾಭಿಷೇಕ ಹಾಗೂ ಮಹಾನ್ಯಾಸ ಪೂರ್ವಕವಾಗಿ ರುದ್ರಾಭಿಷೇಕ ನೆರವೇರಿಸಲಾಯಿತು.ನಂತರ ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ಧೀಕ್ಷಿತ್ ಅವರ ನೇತೃತ್ವದಲ್ಲಿ ಪ್ರಾತಃಕಾಲಪೂಜೆ, ನಿತ್ಯೋತ್ಸವ ಹಾಗೂ ಸಂಗಮಕಾಲ ಪೂಜೆ, ಮಧ್ಯಾನಕಾಲ ಪೂಜೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಿದ ಬಳಿಕ ದೇವಾಲಯದ ಒಳಾವರಣದಲ್ಲಿ ಗಣಪತಿ ಪೂಜೆ, ನವಗ್ರಹ ಪೂಜೆ, ಸ್ವಾಮಿಯ ಉತ್ಸವ ನೆರವೇರಿಸಿದ ನಂತರ ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ, ಬೆಳಗ್ಗೆ 10.45 ರಿಂದ 11.30 ಗಂಟೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ರಥೋತ್ಸವದಲ್ಲಿ ದೇವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಮೊದಲಿಗೆ ಮಹಾಗಣಪತಿ ಮತ್ತು ಚಂಡಿಕೇಶ್ವರ ರಥ, ಪಾರ್ವತಿ ಸಮೇತ ಶ್ರೀಕಂಠೇಶ್ವರ ರಥ, ಕೊನೆಯದಾಗಿ ಮನೋನ್ಮಣಿ ಅಮ್ಮನವರ ರಥೋತ್ಸಗಳನ್ನು ರಥ ಬೀದಿಯಲ್ಲಿ ಎಳೆಯಲಾಯಿತು. ಮೂರೂ ರಥಗಳು ಯಾವುದೇ ಅಡ್ಡಿ ಆತಂಕವಿಲ್ಲದೆ 1.2 ಕಿಮೀ ದೂರ ರಥ ಬೀದಿಯನ್ನು ಕ್ರಮಿಸಿ 12 ಗಂಟೆಗೆ ಸ್ವಸ್ಥಾನವನ್ನು ತಲುಪಿದವು.
ನಂತರ ಹಂಸವಾಹನ ಉತ್ಸವ, ಸಂಜೆ ನಟೇಶ ಉತ್ಸವಗಳು ಜರುಗುವ ಮೂಲಕ ರಥೋತ್ಸವವು ಯಶಸ್ವಿಯಾಯಿತು. ನ. 19ರ ಮಂಗಳವಾರ ದಂದು ಕಪಿಲಾನದಿಯ ತೇಲುವ ದೇವಾಲಯದಲ್ಲಿ ತೆಪ್ಪೋತ್ಸವ ನಡೆಯಲಿದ್ದು ನಂತರ ಶಯನೋತ್ಸವ ಜರುಗುವುದರೊಂದಿಗೆ ಚಿಕ್ಕಜಾತ್ರಾಮಹೋತ್ಸವಕ್ಕೆ ತೆರೆ ಬೀಳಲಿದೆ.
ರಥೋತ್ಸದ ವೇಳೆ ದೇವಾಲಯದ ಇಒ ಜಗದೀಶ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರ ಸಭಾಧ್ಯಕ್ಷ ಶ್ರೀಕಂಠಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್, ನಗರಸಭಾ ಸದಸ್ಯರಾದ ಗಾಯಿತ್ರಿ, ಗಂಗಾಧರ್, ಯೋಗೇಶ್, ಮುಖಂಡರಾದ ಶ್ರೀಧರ್, ಗೋವಿಂದರಾಜು, ದೇವಾಲಯದ ಪ್ರಧಾನ ಅರ್ಚಕ ನಾಗಚಂದ್ರ ದೀಕ್ಷಿತ್ ಹಾಗೂ ಅರ್ಚಕ ವೃಂದ, ಸಿಬ್ಬಂದಿ ಇದ್ದರು.