ವೀರಶೈವ -ಲಿಂಗಾಯಿತ ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್‌

KannadaprabhaNewsNetwork | Published : Jul 23, 2024 12:30 AM

ಸಾರಾಂಶ

ಅಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾದ ಚುನಾವಣೆಯಲ್ಲಿ ಮತದಾರರು ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಹೇಳಿದರು.

ಶಿವಮೊಗ್ಗ: ಭಾನುವಾರ ನಡೆದ ಅಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾದ ಚುನಾವಣೆಯಲ್ಲಿ ಮತದಾರರು ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಹೇಳಿದರು.

ಪ್ರೆಸ್‌ಟ್ರಸ್ಟ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೀರಶೈವ ಲಿಂಗಾಯಿತ ಮಹಾಸಭಾದ ಚುನಾವಣೆ ಯಶಸ್ವಿಯಾಗಿ ನಡೆದಿದೆ. ಇಲ್ಲಿ 3,199 ಮತಗಳಿದ್ದವು. ಅದರಲ್ಲಿ 2247 ಮತಗಳು ಚಲಾವಣೆಯಾಗಿತ್ತು. ನನಗೆ 1274 ಮತಗಳು ಬಂದಿದ್ದು, 327 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ. ಈ ಗೆಲುವಿಗೆ ಸಹಕಾರಿಯಾದ ಸಮಾಜದ ಬಾಂಧವರಿಗೆ, ಗಣ್ಯರಿಗೆ, ಮತದಾರರಿಗೆ ಅಭಿನಂದನೆಗಳು ಎಂದರು.

ಇನ್ನು 419 ಮತಗಳ ಅಂತರದಿಂದ ತಾಲೂಕು ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಸ್ವಾಮಿಯವರು ಗೆದ್ದಿದ್ದಾರೆ. ಅಖಿಲ ಭಾರತ ವೀರಶೈವ -ಲಿಂಗಾಯಿತ ಮಹಾಸಭಾದ ಅಧ್ಯಕ್ಷರು ಹಾಗೂ ತಾಲೂಕು ಘಟಕಗಳ ಅಧ್ಯಕ್ಷರನ್ನು ಮತದಾರರೇ ಆಯ್ಕೆ ಮಾಡಲಿದ್ದಾರೆ. 10 ಮಹಿಳೆಯರು ಹಾಗೂ 20 ಪುರುಷರು ಸೇರಿ 30 ಸದಸ್ಯರು ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಮಹಾಸಭಾವು ಈಗಾಗಲೇ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಪಡೆದವರಿಗೆ ಸನ್ಮಾನ ಸಮಾರಂಭ ಮಾಡುತ್ತ ಬಂದಿದೆ. ಶಿವಪ್ಪನಾಯಕ ಕೆಳದಿ ಪ್ರಶಸ್ತಿ ನೀಡುತ್ತಾ ಬಂದಿದೆ. ಈಗ ಅದರ ಮುಂದಿನ ಭಾಗವಾಗಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಹಾಸಭಾದಿಂದ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮುಖ್ಯವಾಗಿ ಐಎಎಸ್, ಐಪಿಎಸ್ ಸೇರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು. ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮುಂದುವರೆಸಲಾಗುವುದು. ಕೆಳದಿ ಶಿವಪ್ಪ ನಾಯಕ ಪ್ರಶಸ್ತಿಯಂತೆ ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಲಾಗುವುದು ಎಂದರು.

ಮುಖ್ಯವಾಗಿ ಮಠಾಧೀಶರರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಬೆಕ್ಕಿನ ಕಲ್ಮಠ ಶ್ರೀ ಮತ್ತು ಬಸವಶ್ರೀ ಮಾರ್ಗದರ್ಶನದಲ್ಲಿ ಮಹಾಸಭಾ ನಡೆಯುತ್ತಿದೆ. ಸುಮಾರು 30 ಮಠಾಧೀಶರರು ಇದ್ದಾರೆ. ಇವರೆಲ್ಲರನ್ನು ಒಟ್ಟಿಗೆ ಸೇರಿಸಿ ಎಲ್ಲಾ ಒಳಪಂಗಡ ಒಗ್ಗೊಡಿಸಿ ಸಂಘಟನೆ ಮಾಡಲಾಗುವುದು. ಹಾಗೆಯೇ ವೀರಶೈವ ಲಿಂಗಾಯಿತ ವಧುವರರ ಸಮಾವೇಶ ಕೂಡ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಪ್ರಮುಖರಾದ ಆನಂದ ಮೂರ್ತಿ, ಕೆ.ಆರ್.ಸೋಮನಾಥ್, ರೇಣುಕಾರಾಧ್ಯ, ಅನಿತಾ ರವಿಶಂಕರ್, ಗೀತಾ ರವೀಂದ್ರ, ಆರ್.ಎಸ್. ಸ್ವಾಮಿ, ಜಯಶಂಕರ್ ಮುಂತಾದವರು ಇದ್ದರು.

Share this article