ಹಾವೇರಿ: ವಂದೇ ಭಾರತ್ ರೈಲನ್ನು ಹಾವೇರಿ ನಿಲ್ದಾಣದಲ್ಲಿ ನಿಲುಗಡೆಗೆ ಅದೇಶ ಮಾಡಿರುವುದಕ್ಕೆ ವಿಧಾನಸಭೆ ಉಪಾಧ್ಯಕ್ಷ, ಶಾಸಕರೂ ಆದ ರುದ್ರಪ್ಪ ಲಮಾಣಿ ಅಭಿನಂದನೆ ಸಲ್ಲಿಸಿದ್ದಾರೆ. ಇತ್ತೀಚೆಗೆ ರೈಲ್ವೆ ಸಚಿವರಿಗೆ ಪತ್ರ ಬರೆದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಹಾವೇರಿ ನಗರದ ಮಹದೇವಪ್ಪ ಮೈಲಾರ ನಿಲ್ದಾಣದಲ್ಲಿ ನಿಲುಗಡೆಗೊಳಿಸುವಂತೆ ಕೋರಲಾಗಿತ್ತು.ಇದನ್ನು ರೈಲ್ವೆ ಸಚಿವ ವಿ. ಸೋಮಣ್ಣನವರು ವಿಶೇಷವಾಗಿ ಪರಿಗಣಿಸಿ ನಿಲುಗಡೆಗೆ ಆದೇಶವನ್ನು ಹೊರಡಿಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಹಾವೇರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಲು ಕೇಂದ್ರ ಸರ್ಕಾರದ ರೈಲ್ವೆ ಅಧಿಕಾರಿಗಳಿಂದ ಆದೇಶವನ್ನು ಹೊರಡಿಸಿರುತ್ತಾರೆ. ಅದ್ದರಿಂದ ಸಚಿವರನ್ನು ಅಭಿನಂದಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಂದೇ ಭಾರತ್ ರೈಲನ್ನು ಹಾವೇರಿ ನಿಲ್ದಾಣದಲ್ಲಿ ನಿಲುಗಡೆಗೊಳಿಸಲು ವಿನಂತಿಸಿರುವ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರು ಹಾಗೂ ರೈಲು ನಿಲುಗಡೆಗೆ ಆದೇಶ ಹೊರಡಿಸಿರುವ ಕೇಂದ್ರ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನ್ ಕುಮಾರ್ ಲಮಾಣಿ ಧನ್ಯವಾದ ಸಲ್ಲಿಸಿದ್ದಾರೆ. ವ್ಯವಹಾರ, ಉದ್ಯೋಗಕ್ಕಾಗಿ ಅನ್ಯ ಭಾಷೆ ಅರಿವು ಅಗತ್ಯ
ಹಾನಗಲ್ಲ: ವ್ಯವಹಾರಿಕ ಹಾಗೂ ಔದ್ಯೋಗಿಕ ಕಾರಣಕ್ಕಾಗಿ ಅನ್ಯಭಾಷೆಗಳ ಅರಿವು ಅತ್ಯಗತ್ಯವಾಗಿದ್ದು, ಆಂಗ್ಲ ಭಾಷೆಗೆ ಎಲ್ಲೆಡೆ ಬೇಡಿಕೆ ಇದ್ದು, ಸುಲಭವಾಗಿ ಇಂಗ್ಲಿಷ್ ಮಾತನಾಡಲು ಕಲಿಸುವ ಉದ್ದೇಶ ನಮ್ಮದಾಗಿದೆ ಎಂದು ರೋಶನಿ ಸಮಾಜ ಸೇವಾ ಸಂಸ್ಥೆ ನಿರ್ದೇಶಕಿ ಅನಿತಾ ಡಿಸೋಜಾ ತಿಳಿಸಿದರು.
ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಒಂದು ತಿಂಗಳ ಕಾಲ ನಡೆಯುವ ಸ್ಪೋಕನ್ ಇಂಗ್ಲಿಷ್ ವರ್ಗ ಉದ್ಘಾಟಿಸಿ ಮಾತನಾಡಿ, ಆಂಗ್ಲ ಭಾಷಾ ಜ್ಞಾನವಿಲ್ಲದ ಕಾರಣಕ್ಕೆ ಹಲವು ಮಾಹಿತಿಗಾಗಿ ಭಾಷೆ ಬಲ್ಲವರನ್ನು ಹುಡುಕಿಕೊಂಡು ಹೋಗುವ ಸ್ಥಿತಿ ಇದೆ. ನಮ್ಮ ಮಾತೃಭಾಷೆಯ ಪ್ರೀತಿ ಅರಿವು ಅತ್ಯಂತ ಅವಶ್ಯಕ. ಅದರೊಂದಿಗೆ ಇತರ ಭಾಷೆಯ ಕನಿಷ್ಠ ಜ್ಞಾನ ಪಡೆಯುವಲ್ಲಿ ಹಿಂದೆ ಬೀಳುವುದು ಬೇಡ ಎಂದರು.ಜನವೇದಿಕೆ ಮುಖಂಡ ಮಂಜುನಾಥ ಕುದರಿ ಮಾತನಾಡಿ, ರೋಶನಿ ಸಮಾಜ ಸೇವಾ ಸಂಸ್ಥೆಯು ಸಾಮಾಜಿಕ ಶೈಕ್ಷಣಿಕ ಕಾರ್ಯಗಳ ಮೂಲಕ ಸಮಾಜದಲ್ಲಿ ಉತ್ತಮ ಸೇವೆಗೆ ಹೆಸರಾಗಿದೆ. ಈಗ ಭಾಷಾ ಜ್ಞಾನವನ್ನು ನೀಡುವ ಮಹತ್ಕಾರ್ಯದಲ್ಲಿ ಮುಂದುವರಿದಿದೆ. ಇದರ ಪ್ರಯೋಜನವನ್ನು ಸಮಾಜ ಪಡೆಯಬೇಕು ಎಂದರು. ಶಿಕ್ಷಕಿ ತೆರೇಸಾ ಸೇರಾ ಮಾತನಾಡಿದರು.