ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ವದಂತಿ ಜೋರು

KannadaprabhaNewsNetwork | Published : Apr 13, 2024 1:03 AM

ಸಾರಾಂಶ

ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನುವ ಸುದ್ದಿ ಕೊಪ್ಪಳ ಜಿಲ್ಲೆಯ ರಾಜಕೀಯ ವಲಯದಲ್ಲಿ ಜೋರಾಗಿ ಹರಡಿದೆ. ಆದರೆ ಕರಡಿ ಈ ಕುರಿತು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಸಂಸದ ಸಂಗಣ್ಣ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದು ಪಕ್ಕಾ ಆಗಿದೆ... ಈಗ ಏನಿದ್ದರೂ ದಿನಾಂಕ ಮತ್ತು ಸಮಯ ನಿಗದಿಯಾಗಬೇಕಾಗಿದೆ ಎನ್ನುವ ಮಾತು ಬಿಜೆಪಿ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ.

ಇದಕ್ಕೆ ಮುಖ್ಯ ಕಾರಣವೂ ಇಲ್ಲದಿಲ್ಲ. ಹಾಲಿ ಸಂಸದ ಸಂಗಣ್ಣ ಕರಡಿ ಅವರ ಕಟ್ಟಾ ಬೆಂಬಲಿಗರು ಬಹುತೇಕರು ಬಿಜೆಪಿ ತೊರೆದು ಈಗಾಗಲೇ ಸರದಿಯಲ್ಲಿ ನಿಂತು ಕಾಂಗ್ರೆಸ್ ಸೇರುತ್ತಿದ್ದಾರೆ, ಹಲವರು ಈಗಾಗಲೇ ಸೇರಿದ್ದಾರೆ. ಹೀಗಾಗಿ, ಸಂಸದ ಸಂಗಣ್ಣ ಕರಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವುದು ಪಕ್ಕಾ ಎನ್ನುತ್ತಿದ್ದಾರೆ. ಆದರೆ, ಇದುವರೆಗೂ ಕರಡಿ ಅವರು ಎಲ್ಲಿಯೂ ನಾನು ಬಿಜೆಪಿ ತೊರೆಯುತ್ತೇನೆ ಎಂದು ಹೇಳಿಲ್ಲ. ಆದರೆ, ಪಕ್ಷದ ಅಭ್ಯರ್ಥಿಯ ಕುರಿತು ಕೇಳಿದಾಗ ಟಿಕೆಟ್ ತಂದವರು ಗೆಲ್ಲಿಸಿಕೊಂಡು ಬರಲಿ ಎಂದಷ್ಟೇ ನೋವಿನಿಂದ ಹೇಳುತ್ತಿದ್ದಾರೆ.

ಈ ಮಧ್ಯೆ, ಕಾದು ನೋಡಿ, ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿ ನೀಡುತ್ತೇವೆ, ಈಗಲೇ ಏನೂ ಹೇಳುವುದಿಲ್ಲ ಎನ್ನುತ್ತಲೇ, ಶಾಸಕ ರಾಘವೇಂದ್ರ ಹಿಟ್ನಾಳ ಅವರು ಎಲ್ಲವನ್ನು ಹೇಳುತ್ತಿದ್ದಾರೆ.

ಇಡೀ ಬೆಳವಣಿಗೆಯ ನೇತೃತ್ವವನ್ನು ಅವರೇ ವಹಿಸಿದ್ದು, ಈಗಾಗಲೇ ಸಂಸದ ಸಂಗಣ್ಣ ಕರಡಿ ಅವರೊಂದಿಗೂ ಚರ್ಚೆ ಮಾಡಿರುವುದಾಗಿ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿಯೇ ಹೇಳಿದ್ದಾರೆ.

ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಅವರು ಬಿಜೆಪಿಯಲ್ಲಿಯೇ ಇದ್ದುಕೊಂಡು ಪುತ್ರನನ್ನು ಕಳುಹಿಸಿಕೊಟ್ಟಂತೆ ಸಂಸದ ಸಂಗಣ್ಣ ಕರಡಿ ಅವರು ತಾವು ಬಿಜೆಪಿಯಲ್ಲಿಯೇ ಇದ್ದುಕೊಂಡು ಪುತ್ರ ಅಮರೇಶ ಕರಡಿ ಅವರನ್ನು ಕಾಂಗ್ರೆಸ್‌ಗೆ ಕಳುಹಿಸುವ ಸಾಧ್ಯತೆ ಇದೆ.

ಗುರುವಾರ ತಡರಾತ್ರಿ ಮತ್ತು ಶುಕ್ರವಾರ ಇಡೀ ದಿನ ಕಾಂಗ್ರೆಸ್ ಪಾಳಯದಲ್ಲಿ ಈ ಕುರಿತು ಸುದೀರ್ಘ ಚರ್ಚೆಯಾಗಿದೆ. ಸಂಸದ ಸಂಗಣ್ಣ ಕರಡಿ ಅವರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತಾರೆ ಎನ್ನುವ ವದಂತಿ ಹರಡಿತು. ಕಾಂಗ್ರೆಸ್‌ನ ಕೆಲವರಂತೂ ಮಾಧ್ಯಮದವರಿಗೆ ಕರೆ ಮಾಡಿಯೂ ಈ ಕುರಿತು ಮಾಹಿತಿ ಹಂಚಿಕೊಂಡರು. ಈಗಾಗಲೇ ಸಂಗಣ್ಣ ಕರಡಿ ಬೆಂಗಳೂರಿಗೆ ತೆರಳುತ್ತಿದ್ದಾರೆ ಎಂದೆಲ್ಲ ಹೇಳಿದರು.

ಆದರೆ, ''''ಕನ್ನಡಪ್ರಭ'''' ಸಂಸದ ಸಂಗಣ್ಣ ಕರಡಿ ಅವರನ್ನೇ ಖುದ್ದು ಸಂಪರ್ಕ ಮಾಡಿದಾಗ, ಇಲ್ಲ, ನಾನು ಬೆಂಗಳೂರಿಗೆ ಹೋಗುತ್ತಿಲ್ಲ, ಸಿಂಧನೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ, ಮಾರ್ಗಮಧ್ಯದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಸಹ ಭೇಟಿಯಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ವದಂತಿ ಹರಡಿದೆಯಲ್ಲ ಎನ್ನುವ ಪ್ರಶ್ನೆಗೆ, ಹರಡಿಸುವವರಿಗೆ ಏನು ಮಾಡಲು ಆಗುತ್ತದೆ ಎಂದು ಹೇಳಿದರೇ ವಿನಃ ಕಾಂಗ್ರೆಸ್ ಸೇರುವ ಕುರಿತು ಗುಟ್ಟು ಬಿಟ್ಟುಕೊಡಲಿಲ್ಲ ಮತ್ತು ತಿರಸ್ಕಾರವನ್ನು ಮಾಡಲಿಲ್ಲ.

ಬಿಜೆಪಿಯಲ್ಲಿಯೇ ಹೆಚ್ಚು ವದಂತಿ: ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರುತ್ತಾರೆ ಎನ್ನುವ ವದಂತಿ ಕಾಂಗ್ರೆಸ್‌ಗಿಂತ ಬಿಜೆಪಿ ಪಾಳಯದಲ್ಲಿಯೇ ಹೆಚ್ಚು ಚರ್ಚೆಯಾಗುತ್ತಿದೆ. ಬಿಜೆಪಿ ನಾಯಕರೇ ಖಾಸಗಿಯಾಗಿ ಮಾತನಾಡುವಾಗ ಹೌದು, ಅವರು ಹೋಗುತ್ತಿದ್ದಾರೆ ಎನ್ನುತ್ತಾರೆ ಮತ್ತು ಈ ಹಿಂದೆ ಹೋದವರು ಏನಾಗಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅವರಂತೆಯೇ ಇವರು ಮೂಲೆಗುಂಪಾಗುತ್ತಾರೆ ಎನ್ನುತ್ತಾರೆ.

ಸಂಸದ ಸಂಗಣ್ಣ ಕರಡಿ ಅವರನ್ನು ಆಹ್ವಾನ ಮಾಡಿರುವುದು ನಿಜ. ಅವರ ಜತೆಗೆ ಮಾತುಕತೆ ನಡೆದಿರುವುದು ನಿಜ. ಆದರೆ, ಏನಾಗಿದೆ? ಯಾವಾಗ ಬರುತ್ತಾರೆ? ಎನ್ನುವುದು ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಹೇಳಿದರು.ಸಂಸದ ಸಂಗಣ್ಣ ಕರಡಿ ಬಿಜೆಪಿಯಲ್ಲಿಯೇ ಇದ್ದಾರೆ. ಅವರು ನಮ್ಮ ಜತೆಯಲ್ಲಿಯೇ ಇರುತ್ತಾರೆ. ಪಕ್ಷದ ಪ್ರಚಾರ ಸಭೆಯಲ್ಲಿಯೂ ಭಾಗವಹಿಸುತ್ತಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಹೇಳಿದರು.

ಕರಡಿ ಜತೆ ರಹಸ್ಯ ಸಭೆ, ಅಂತಿಮ ಹಂತದಲ್ಲಿ ಮಾತುಕತೆ: ಸಂಸದ ಸಂಗಣ್ಣ ಕರಡಿ ಅವರೊಂದಿಗೆ ಕಾಂಗ್ರೆಸ್‌ ನಾಯಕರು ಕಳೆದ 2-3 ದಿನಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದು, ಪಕ್ಷಕ್ಕೆ ಕರೆತರುವ ಕುರಿತು ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಸಂಸದ ಸಂಗಣ್ಣ ಕರಡಿ ಅವರು ಬೆಂಗಳೂರು ಮಾರ್ಗ ಮಧ್ಯದಲ್ಲಿ ರಹಸ್ಯ ಸ್ಥಳದಲ್ಲಿ ಕಾಂಗ್ರೆಸ್‌ ನಾಯಕರೊಂದಿಗೆ ಮಾತನಾಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದ್ದು, ಇದು ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರುತ್ತಾರೆ ಎನ್ನುವುದಕ್ಕೆ ಮತ್ತಷ್ಟು ರೆಕ್ಕೆ-ಪುಕ್ಕ ಬರುವಂತೆ ಮಾಡಿದೆ. ಮಾತುಕತೆ ಬಹುತೇಕ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗುತ್ತದೆ.

Share this article