ಶಕ್ತಿ ಯೋಜನೆ ಬಂದಾಗುವ ವದಂತಿ, ಪುಣ್ಯಕ್ಷೇತ್ರಕ್ಕೆ ಮಹಿಳೆಯರ ದಂಡು!

KannadaprabhaNewsNetwork |  
Published : Jun 08, 2026, 03:15 AM IST
ಹೊಳೆಆಲೂರಿನಲ್ಲಿ ದೇವಾಲಯ ಭೇಟಿಗೆ ಬಸ್ ಏರುತ್ತಿರುವ ಮಹಿಳೆಯರು. | Kannada Prabha

ಸಾರಾಂಶ

ಮಂತ್ರಾಲಯ, ಶ್ರೀಶೈಲ, ಗುಡ್ಡಾಪುರ ದಾನಮ್ಮ, ಪಂಢರಾಪುರ ಹೀಗೆ ದೇಗುಲಗಳ ಪಟ್ಟಿ ಮಾಡಿಕೊಂಡು ಹೋಗಿ ದರ್ಶನ ಪಡೆದು ಬರುತ್ತಿದ್ದಾರೆ. ಅಲ್ಲದೆ ಫೋನ್ ಮುಖಾಂತರ ಸಂಬಂಧಿಕರಿಗೆ ತಿಳಿಸುತ್ತಾ ಅವರನ್ನು ಕರೆದುಕೊಂಡು ದೇವರ ದರ್ಶನಕ್ಕೆ ಹೋಗತೊಡಗಿದ್ದಾರೆ.

ಸಂಜೀವಕುಮಾರ ಹಿರೇಮಠ

ಹೊಳೆಆಲೂರು: ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ ಹಿನ್ನೆಲೆ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಬಂದ್‌ ಆಗುವ ವದಂತಿ ಹೊಳೆಆಲೂರು ಹೋಬಳಿಯಲ್ಲಿ ಹರಡಿದ್ದು, ಇದರಿಂದ ಮಹಿಳೆಯರು ಪುಣ್ಯಕ್ಷೇತ್ರದ ದರ್ಶನಕ್ಕೆ ಹೋಗತೊಡಗಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಬಂದ್‌ ಮಾಡಲಾಗುತ್ತಿದೆ ಎಂಬ ಗಾಳಿಸುದ್ದಿ ಹರಡತೊಡಗಿದೆ. ಸಿದ್ದರಾಮಯ್ಯ ಅವರ ಅವಧಿ ಮುಗಿತಂತ. ಹಿಂಗಾಗಿ ಶಕ್ತಿ ಯೋಜನೆ ಬಂದ್‌ ಮಾಡ್ತಾರಂತ ಎಂದು ಮಹಿಳೆಯರೇ ಮಾತನಾಡತೊಡಗಿದ್ದಾರೆ. ಇದು ಬಾಯಿಂದ ಬಾಯಿಗೆ ಹರಡತೊಡಗಿದೆ.

ಈ ಸುದ್ದಿ ಹೊಳೆಆಲೂರು ಹೋಬಳಿಯಲ್ಲಿ ಹರಡಿದ್ದೇ ತಡ, ಧರ್ಮಸ್ಥಳ, ಹೊರನಾಡು ಪ್ರವಾಸಕ್ಕೆ ಮಹಿಳೆಯರು ಗುಂಪು ಗುಂಪಾಗಿ ಹೋಗತೊಡಗಿದ್ದಾರೆ. ಅಲ್ಲದೆ ಕರ್ನಾಟಕದ ಎಲ್ಲ ಪ್ರವಾಸಿ ತಾಣಗಳನ್ನು ನೋಡಿ ಬಂದ ಮಹಿಳೆಯರು ಸಮೀಪ ಇರುವ ಬೇರೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಹೋಗಿ ಬರುತ್ತಿದ್ದಾರೆ.

ಮಂತ್ರಾಲಯ, ಶ್ರೀಶೈಲ, ಗುಡ್ಡಾಪುರ ದಾನಮ್ಮ, ಪಂಢರಾಪುರ ಹೀಗೆ ದೇಗುಲಗಳ ಪಟ್ಟಿ ಮಾಡಿಕೊಂಡು ಹೋಗಿ ದರ್ಶನ ಪಡೆದು ಬರುತ್ತಿದ್ದಾರೆ. ಅಲ್ಲದೆ ಫೋನ್ ಮುಖಾಂತರ ಸಂಬಂಧಿಕರಿಗೆ ತಿಳಿಸುತ್ತಾ ಅವರನ್ನು ಕರೆದುಕೊಂಡು ದೇವರ ದರ್ಶನಕ್ಕೆ ಹೋಗತೊಡಗಿದ್ದಾರೆ.

ಮಹಿಳೆಯ ಮಾತು: ಇತ್ತೀಚೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದಿದ್ದಾರೆ. ಆಗ ನಮ್ಮ ಓಣಿಯಲ್ಲಿ ಮಹಿಳೆಯರೊಬ್ಬರು ಉಚಿತ ಬಸ್ ಪ್ರಯಾಣ ಬಂದಾಗುತ್ತದೆ ಎಂದು ಹೇಳಿದರು. ಹೀಗಾಗಿ ನಾವು ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮ, ವಿಜಯಪುರ ನೋಡಲು ಹೊಂಟಿದ್ದೇವೆ. ಇದಕ್ಕೂ ಮೊದಲು ಮೂರು ದಿನ ಹೊರನಾಡು, ಮೈಸೂರು, ಗೋಕರ್ಣ, ಧರ್ಮಸ್ಥಳ, ಶಿರಸಿ ನೋಡಿ ಬಂದಿದ್ದೇವೆ ಎಂದು ಹೊಳೆಆಲೂರಿನ ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬರು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಸಿರು ರಕ್ಷಣೆಗೆ ಸಂಘ- ಸಂಸ್ಥೆಗಳು ಮುಂದಾಗಲಿ: ವಕೀಲ ಬಿ.ಎಸ್. ಬಾಳೇಶ್ವರಮಠ
ಮೃತ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮೀ ಹಣ ಜಮೆ:ವಾಪಸ್ ಪಡೆದು ಅರ್ಹರಿಗೆ ತಲುಪಿಸಲು ಕ್ರಮ: ಎಸ್.ಆರ್. ಪಾಟೀಲ