ಹೊಸಪೇಟೆ: ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಗ್ರಾಮೀಣ ಪ್ರದೇಶದ ಪ್ರತಿಭೆಗಳು ಅರಳಬೇಕು ಎಂದು ಹೈಕೋರ್ಟ್ ನ್ಯಾಯವಾದಿ ಸವಿತಾ ಹೇಳಿದರು.ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದ ಗ್ರಾಮಾಂತರ ಪ್ರೌಢಶಾಲೆಯಲ್ಲಿ 35ನೇ ವಾರ್ಷಿಕೋತ್ಸವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯನ್ನು ಸರ್ಕಾರಿ ಶಾಲೆ ಶಿಕ್ಷಕಿ ಅಕ್ಕಮಹಾದೇವಿ ತಮ್ಮ ಸಂಬಳದಲ್ಲಿ ಶಿಕ್ಷಕರಿಗೆ ವೇತನ ನೀಡಿ, ಕಟ್ಟಿ ಬೆಳೆಸಿದ್ದಾರೆ. ಅವರ ಪುತ್ರ ಅಕ್ಷಯ್ ಕೂಡ ಶಾಲೆ ಬೆಳವಣಿಗೆಗೆ ಶ್ರಮಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅಕ್ಷಯ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈಗ ಅವರ ಹೆಸರಿನಲ್ಲಿ ಅಕ್ಷಯ್ ಸ್ಮಾರಕ ಅನುದಾನಿತ ಪ್ರೌಢಶಾಲೆ ಎಂದು ಮರು ನಾಮಕರಣ ಮಾಡುತ್ತಿರುವುದು ಸೂಕ್ತವಾಗಿದೆ ಎಂದರು.
ನಾವು ಮೊದಲು ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕು. ಹಾಗಾಗಿ ಅಕ್ಕಮಹಾದೇವಿ ಶಾಲೆ ಪ್ರಾರಂಭ ಮಾಡಿದ್ದಾರೆ. ಅವರ ಕಾರ್ಯ ನಿಜಕ್ಕೂ ಅನುಕರಣೀಯ. ಹೊಸಪೇಟೆ ತಾಲೂಕಿನಲ್ಲಿ ಈ ಶಾಲೆ ಹೆಸರು ಉತ್ತಮವಾಗಿದೆ. ಶಿಕ್ಷಣ ಇಲಾಖೆ ಕೂಡ ಶಾಲೆ ಬೆಳವಣಿಗೆಗೆ ಸಹಕರಿಸಬೇಕು. ಗ್ರಾಮದ ಮುಖಂಡರು ಶಾಲೆ ಬೆಳವಣಿಗೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಈ ಶಾಲೆಯನ್ನು ಅಕ್ಷಯ್ ಸ್ಮಾರಕ ಅನುದಾನಿತ ಪ್ರೌಢಶಾಲೆ ಎಂದು ಮರು ನಾಮಕರಣ ಮಾಡಲಾಯಿತು.ಬೆಂಗಳೂರಿನ ವೀರಭದ್ರಶೆಟ್ಟರು, ಗ್ರಾಪಂ ಅಧ್ಯಕ್ಷೆ ಅಂಕ್ಲಮ್ಮ, ಮುಖಂಡರಾದ ಶಂಕರ ಮೇಟಿ, ತಿಪ್ಪೇಸ್ವಾಮಿ ರಾಮು, ಮಂಜುನಾಥ, ದೊಡ್ಡಬಸಪ್ಪ, ಅಯ್ಯಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಡಾ.ಅಕ್ಕಮಹಾದೇವಿ ಸರಗಣಾಚಾರಿ, ಕಾರ್ಯಕ್ರಮ ಸಂಯೋಜಕ ಜಿ.ಗುರುಲಿಂಗಯ್ಯ, ಶಾಲೆ ಮುಖ್ಯ ಶಿಕ್ಷಕಿ ಎಚ್.ಬಿ. ಪದ್ಮಾವತಿ, ಶಾಲೆ ಶಿಕ್ಷಕರು ಹಾಗೂ ಗ್ರಾಮದ ಮುಖಂಡರು ಇದ್ದರು. ಶಾಲೆಯಲ್ಲಿ ಸಾಂಸ್ಕೃತಿಕೋತ್ಸವ ನೆರವೇರಿತು.
ಹೊಸಪೇಟೆಯ ಪಾಪಿನಾಯಕನಹಳ್ಳಿ ಗ್ರಾಮಾಂತರ ಪ್ರೌಢಶಾಲೆಯ ವಾರ್ಷಿಕೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು.