ಗ್ರಾಮೀಣ ಉತ್ಪನ್ನಗಳ ಪ್ರದರ್ಶನ, ಮಾರಾಟ ಮೇಳ

KannadaprabhaNewsNetwork |  
Published : Dec 23, 2025, 03:00 AM IST
ಸಮೃದ್ಧಿ ಸಂಜೀವಿನಿ ಒಕ್ಕೂಟದಿಂದ ಗ್ರಾಮೀಣ ಉತ್ಪನ್ನಗಳ ಮಾರಾಟ- ಸ್ವ ಉದ್ಯೋಗ ತರಬೇತಿ  | Kannada Prabha

ಸಾರಾಂಶ

ಸ್ವ ಉದ್ಯೋಗ, ತರಬೇತಿ ಕಾರ್ಯಾಗಾರ ಮತ್ತು ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇಲ್ಲಿನ ಸಮಾಜ ಮಂದಿರದಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆ ಮೂಡುಬಿದಿರೆ ಇದರ ರಜತ ಮಹೋತ್ಸವ ಅಂಗವಾಗಿ ಸಮೃದ್ಧಿ ಸಂಜೀವಿನಿ ಪಂಚಾಯತ್ ಮಟ್ಟದ ಒಕ್ಕೂಟ ಹೊಸಬೆಟ್ಟು ಸಹಕಾರದಲ್ಲಿ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ಮತ್ತು ಗ್ರಾಮೀಣ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇಲ್ಲಿನ ಸಮಾಜ ಮಂದಿರದಲ್ಲಿ ಜರುಗಿತು.

ಮೂಡುಬಿದಿರೆ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಸಾಯೀಶ್ ಚೌಟ ಉದ್ಘಾಟಿಸಿ, ಸ್ತ್ರೀಯರು ದೇಶದ ಬೆನ್ನೆಲುಬು. ಅವರ ಜಾಗೃತಿ ಸ್ವಸಹಾಯ ಗುಂಪುಗಳ ಕ್ರಿಯಾಶೀಲತೆಯಿಂದ ದೇಶದ ಆರ್ಥಿಕ ಪ್ರಗತಿಯಾಗುತ್ತಿದೆ. ಸಮರ್ಪಣಾಭಾವದಿಂದ ಸಾಮಾಜಿಕ ಪ್ರಗತಿಗೆ ತೊಡಗಿಸಿಕೊಂಡಾಗ ದೇಶ ಬೆಳೆಯುತ್ತದೆ ಎಂದು ಹೇಳಿದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ನವಚೇತನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷೆ ವಸಂತಿ ಶೆಟ್ಟಿ, ಅಶಕ್ತ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಯತ್ನಿಸುತ್ತಿದೆ. ಸ್ವಸಹಾಯ ಗುಂಪುಗಳ ಸದಸ್ಯರೇ ಸೇರಿಕೊಂಡು ನವಚೇತನ ಸೌಹಾರ್ದ ಸಹಕಾರಿ ಆರ್ಥಿಕ ವ್ಯವಹಾರ ಸಂಸ್ಥೆಯನ್ನು ಹುಟ್ಟುಹಾಕಿ ಬೆಳೆಸುವಲ್ಲಿ ಆದರ್ಶ ನೀಡಿದ ಸಹಕಾರ ಅದ್ಭುತವಾದುದು ಎಂದು ಹೇಳಿದರು.ದ.ಕ. ಜಿಲ್ಲಾ ಪಂಚಾಯತ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಮಾರಾಟ ಮಳಿಗೆಗಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರು ಮನೆಯಲ್ಲಿ ತಯಾರಿಸುತ್ತಿದ್ದ ಉತ್ಪನ್ನಗಳನ್ನು ಮಾರಾಟ ಮಾಡಲು ಸಂಜೀವಿನಿ ಮೂಲಕ ಮಾರುಕಟ್ಟೆಗಳನ್ನು ಒದಗಿಸಿ ಮಹಿಳೆಯರನ್ನು ಸಬಲೀಕರಣ ಮಾಡಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಅವರಿಗೆ ಸ್ವಸಹಾಯ ಗುಂಪುಗಳು ಹಾಗೂ ಬ್ಯಾಂಕುಗಳ ಮೂಲಕ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಆರ್ಥಿಕ ಸಬಲೀಕರಣಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಆದರ್ಶ ಗ್ರಾಮಾಭಿವೃದ್ಧಿ ಮತ್ತು ಸೇವಾ ಸಂಸ್ಥೆಯ ಅಧ್ಯಕ್ಷ ಜೇಕಬ್ ವರ್ಗಿಸ್ ಪ್ರಾಸ್ತಾವಿಕ ಮಾತುಗಳನ್ನಾಡಿ ಜನರ ಸ್ವಾವಲಂಬಿ ಜೀವನ, ಕೌಶಲ್ಯಾಭಿವೃದ್ಧಿ, ಸಾಮಾಜಿಕ ಸಬಲತೆಗೆ ಆದ್ಯತೆ ನೀಡಿ ಸಂಸ್ಥೆ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದರು. ಎನ್.ಆರ್.ಎಲ್.ಎಂ. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ನಿಖಿಲ್, ಹೊಸಬೆಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತ ಕುಮಾರಿ ಎಂ., ಸ್ತ್ರೀಶಕ್ತಿ ಮೂಡುಬಿದಿರೆ ವಲಯ ಮೇಲ್ವಿಚಾರಕಿ ಶುಭ, ಆದರ್ಶ ನಿರ್ದೇಶಕರಾದ ಶೆರ್‍ಲಿ ಟಿ. ಬಾಬು, ಇಮ್ಯಾನ್ಯುವೆಲ್ ಮೋನಿಸ್ ಅತಿಥಿಗಳಾಗಿ ವೇದಿಕೆಯಲ್ಲಿದ್ದರು.

ಗೋಪಿ ಮತ್ತು ಬಳಗನ ಪ್ರಾರ್ಥನೆಗೈದರು. ನೆಲ್ಲಿಕಾರು ಎಂಬಿಕೆ ಗೀತಾ ಜೈನ್ ಸ್ವಾಗತಿಸಿದರು. ಹೊಸಬೆಟ್ಟು ಎಂಬಿಕೆ ಮಮತಾ ಕಾರ್ಯಕ್ರಮ ನಿರೂಪಿಸಿ, ಶೋಭಾ ಭಾಸ್ಕರ್ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸ್ವ ಉದ್ಯೋಗ ತರಬೇತಿ ಕಾರ್ಯಾಗಾರ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌