ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಾನಪದ ಹಾಗೂ ಶಾಸ್ತ್ರೀಯ ಕಾವ್ಯ ಕೃತಿಗಳನ್ನು ಮರು ವಾಖ್ಯಾನಿಸಿ, ವಿಭಿನ್ನವಾಗಿ ಕಟ್ಟಿಕೊಡುವ ವಿಶಿಷ್ಟ ಸಾಮರ್ಥ್ಯ ಕನ್ನಡ ಕವಿಗಳಿಗೆ ಮಾತ್ರ ದಕ್ಕಿದ್ದು, ಆ ಪರಂಪರೆಯ ಮುಂದುವರಿಕೆಯಾಗಿ ಕನ್ನಡ ನಾಟಕಗಳ ಬೆಳೆದು ಬಂದ ಬಗೆಯಲ್ಲಿ ಕಂಡುಕೊಳ್ಳಬಹುದಾಗಿದೆ, ಗ್ರಾಮೀಣ ಸೊಗಡು ಕನ್ನಡ ನಾಟಕಗಳ ಜೀವಾಳವಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿ ಹಾಗೂ ನಾಟಕ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಹೇಳಿದರು.ನವನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಟಕ ವಿಭಾಗ, ಗುಳೆದಗುಡ್ಡದ ರಾಷ್ಟ್ರೀಯ ಸಂಶೋಧನಾ ವೇದಿಕೆ ಇವರ ಸಹಯೋಗದಲ್ಲಿ ಕನ್ನಡ ನಾಟಕಗಳ ವಿಭಿನ್ನ ನೆಲೆಗಳು ಕುರಿತು ಒಂದು ದಿನದ ರಾಜ್ಯಮಟ್ಟದ ಸಂಶೋಧನಾ ಕಮ್ಮಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕನ್ನಡ ನಾಟಕಗಳ ಕಥಾವಸ್ತುವಿಗೆ ಮೂಲ ಬೇರು ಸಿಗುವುದು ಗ್ರಾಮೀಣ ಭಾಗದ ಜನ ಸಮುದಾಯದ ನಿತ್ಯದ ಸಂಹವನ, ಸಂಭಾಷಣೆ, ಹಾವ ಭಾವಗಳ ಅನುಕರಣೆ ಮೂಲಕ. ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸಿದಾಗ ಕನ್ನಡ ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಟನೆ ಮತ್ತು ಅಭಿನಯಕ್ಕೆ ಸೂಕ್ಷ್ಮವಾದ ವ್ಯತ್ಯಾಸ ಗುರುತಿಸಬಹುದಾಗಿದೆ, ಒಬ್ಬರು ಹೇಳಿದಂತೆ ನಟಿಸುವುದು ನಟನೆಯಾದರೆ, ಅಭಿವ್ಯಕ್ತಿಸುವುದು ಅಭಿನಯವಾಗಿದೆ, ಅಭಿನಯದ ಮೂಲಕ ಅಭಿವ್ಯಕ್ತಿಗೊಂಡ ಕಲೆಯೇ ನಾಟಕವೆನಿಸಿಕೊಳ್ಳುತ್ತದೆ ಎಂದು ಹೇಳಿದರು.
ರಾಷ್ಟೀಯ ಸಂಶೋಧನಾ ವೇದಿಕೆಯ ಗೌರವಾಧ್ಯಕ್ಷ ಡಾ.ಸಂಗಮೇಶ ಕಲ್ಯಾಣಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಸಮಾಜದ ಏರುಪೇರು ತಿದ್ದುವ, ತಿಳಿವಳಿಕೆ ನೀಡುವ, ಅರಿವು ಮೂಡಿಸೂವ ವಿಷಯಗಳ ಮೇಲೆ ನಾಟಕ ರಚನೆ, ಅಭಿನಯ, ಅನುಭವಗಳ ಮಾತು ಎಲ್ಲವೂ ಬೇಕಾಗುತ್ತದೆ. ಹಳಗನ್ನಡದ ಚಂಪೂ ಕಾವ್ಯಗಳನ್ನು ಓದಿದರೆ ಹತ್ತಾರು ಕನ್ನಡ ನಾಟಕಗಳನ್ನು ಬರೆಯಬಹುದು, ನಾಟಕ ರಚನೆಯಲ್ಲಿ ಹೆಚ್ಚು ಅನುಭವ ಮುಖ್ಯವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಅರುಣಕುಮಾರ ಗಾಳಿ, ಕನ್ನಡ ವಿಭಾದ ಸಹ ಪ್ರಾಧ್ಯಾಪಕರಾದ ಡಾ.ಜಿಜಿ.ಹಿರೇಮಠ ಪ್ರಸ್ತಾವಿಕ ಮಾತನಾದರು. ರಾಷ್ಟ್ರೀಯ ಸಂಶೋಧನಾ ವೇದಿಕೆಯ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಸಂಶೋಧನಾ ಕಮ್ಮಟದಲ್ಲಿ ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೊಡ, ಸಾಹಿತಿ ಡಾ.ಸಣ್ಣವೀರಣ್ಣ ದೊಡ್ಡಮನಿ, ಸಿ.ಎನ್.ಬಾಳಕ್ಕನವರ, ಪಾಂಡುರಂಗ ಸಣ್ಣಪ್ಪನವರ, ಮಲ್ಲಿಕಾರ್ಜುನ ಸಜ್ಜನ, ಡಾ.ಮಲ್ಲಿಕಾರ್ಜುನ ಇಂಚಲ, ಡಾ.ಮೌನೆಶ ಕಮ್ಮಾರ, ಬಸವರಾಜ ಕುಂಬಾರ, ಡಾ.ವೀಣಾ ಕಲ್ಮಠ, ಸುನೀಲ ನಡಕಟ್ಟಿ, ಸಂಗಮೇಶ ಬ್ಯಾಳಿ, ಸಂಗಮೇಶ ಬಡಿಗೇರ ಸೇರಿದಂತೆ ವಿವಿಧ ಕಾಲೇಜುಗಳ ಉಪನ್ಯಾಸಕರು, ಹಾಗೂ ನವನಗರ ಕಾಲೇಜಿನ ಬೋಧಕರು, ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಕಮ್ಮಟದಲ್ಲಿ ಪಾಲ್ಗೊಂಡಿದ್ದರು. ಸಾವಿತ್ರಿ ಮುತ್ತಗಿ ಪ್ರಾರ್ಥನೆ ಮಾಡಿದರು, ಪ್ರೊ.ಪರಸಪ್ಪ ತಳವಾರ ಸ್ವಾಗತಿಸಿದರು. ಡಾ.ಸುಮಂಗಲಾ ಮೇಟಿ ಕಾರ್ಯಕ್ರಮ ನಿರೂಪಿಸಿದರು.