ನಟ ದರ್ಶನ್‌ ಹಾಗೂ ಇತರ ಐದು ಆರೋಪಿಗಳಿಗೆ ಹೊಸ ಮತ್ತು ಸೂಕ್ತ ಗುಣಮಟ್ಟದ ಚಾದರ ಹಾಗೂ ಇತರೆ ಬಟ್ಟೆ ಒದಗಿಸಬೇಕು. ಅವನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಸುರಕ್ಷಿತ ಬ್ಯಾರಕ್‌, ಸೆಲ್‌ಗೆ ಅವರನ್ನು ವರ್ಗಾಯಿಸಿ ಎಂದು 57ನೇ ಸಿಸಿಎಚ್ ಕೋರ್ಟ್ನಿ ರ್ದೇಶಿಸಿದೆ.

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಆರೋಪಿ ನಟ ದರ್ಶನ್‌ ಹಾಗೂ ಇತರ ಐದು ಆರೋಪಿಗಳಿಗೆ ಹೊಸ ಮತ್ತು ಸೂಕ್ತ ಗುಣಮಟ್ಟದ ಚಾದರ ಹಾಗೂ ಇತರೆ ಬಟ್ಟೆ ಒದಗಿಸಬೇಕು. ಅವನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಸಾಧ್ಯವಿದ್ದರೆ ಸುರಕ್ಷಿತ ಬ್ಯಾರಕ್‌, ಸೆಲ್‌ಗೆ ಅವರನ್ನು ವರ್ಗಾಯಿಸಿ ಎಂದು 57ನೇ ಸಿಸಿಎಚ್ ಕೋರ್ಟ್ ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳಿಗೆ ನಿರ್ದೇಶಿಸಿದೆ.

ನ್ಯಾಯಾಲಯದ ಆದೇಶದ ಬಳಿಕವೂ ತಮಗೆ ಪ್ರಾಥಮಿಕ ಸೌಲಭ್ಯವನ್ನು ಕಲ್ಪಿಸಲಾಗುತ್ತಿಲ್ಲ. ಹಾಸಿಗೆ-ದಿಂಬು ನೀಡುತ್ತಿಲ್ಲ ಎಂದು ನಟ ದರ್ಶನ್‌ ಹಾಗೂ ಇತರ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಜತೆಗೆ ತಮ್ಮನ್ನು ಇನ್ನೂ ಕ್ವಾರಂಟೈನ್‌ ಸೆಲ್‌ನಲ್ಲಿ ಇಡಲಾಗಿದ್ದು, ಸಾಮಾನ್ಯ ಸೆಲ್‌ಗೆ ವರ್ಗಾಯಿಸಿಲ್ಲ. 2024ರಿಂದ ಈವರೆಗೆ ಎಷ್ಟು ಕೈದಿಗಳನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಮತ್ತು ಎಷ್ಟು ಕೈದಿಗಳನ್ನು ಅಲ್ಲಿಂದ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರ ಮಾಡಲಾಗಿದೆ ಎಂಬ ವಿವರ ನೀಡಿ (91 ಸಿಆರ್‌ಪಿಸಿ ಅಡಿ) ಎಂದು ಕೋರಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರ ನ್ಯಾಯಾಧೀಶರಾದ ಐ.ಪಿ.ನಾಯ್ಕ್‌ ಅವರು ನಡೆಸಿದರು.

ನಿಯಮ ಪಾಲಿಸಬೇಕು

ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕ ಅಧಿಕಾರಿಗಳು ಆರೋಪಿ ದರ್ಶನ್‌ ಮತ್ತು ಇತರರಿಗೆ ಒದಗಿಸಿರುವ ಸೌಲಭ್ಯದ ಕುರಿತ ವಿವರಣೆಯನ್ನು ನ್ಯಾಯಾಲಯ ಭಾಗಶಃ ಒಪ್ಪಿದೆ. ಸೌಕರ್ಯ ಒದಗಿಸುವ ವಿಚಾರದಲ್ಲಿ ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ನಿಯಮ ಪಾಲಿಸಬೇಕು ಎಂದು ಹೇಳಿದೆ. ಮುಂದುವರಿದು, ಹೊಸ ಮತ್ತು ಸೂಕ್ತ ಗುಣಮಟ್ಟದ ಚಾದರ ಹಾಗೂ ಇತರೆ ಬಟ್ಟೆ ಒದಗಿಸಬೇಕು. ಅವನ್ನು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಸಾಧ್ಯವಿದ್ದರೆ ಎಲ್ಲ ಆಯಾಮದಿಂದ ಸುರಕ್ಷಿತವಾಗಿರುವ ಬ್ಯಾರಕ್‌, ಸೆಲ್‌ಗೆ ಅವರನ್ನು ವರ್ಗಾಯಿಸಬಹುದು ಎಂದು ಹೇಳಿದೆ. ಮುಂದುವರಿದು ಆರೋಪಿಗಳು 91 ಸಿಆರ್‌ಪಿಸಿ ಅಡಿ ಸಲ್ಲಿಸಿದ್ದ ಕೋರಿಕೆಯನ್ನು ತಿರಸ್ಕರಿಸಿದೆ.

ಪರಪ್ಪನ ಅಗ್ರಹಾರ ಜೈಲಾಧಿಕಾರಿಗಳು ‘ಕರ್ನಾಟಕ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಪ್ರಕಾರ ಕೈಪಿಡಿ-2021, 729 ಅನ್ವಯ ವಿಚಾರಣಾಧೀನ ಕೈದಿಗಳಿಗೆ ಸಮಂಜಸವಾದ ಅವಶ್ಯಕತೆ ಪೂರೈಸುವ ಸಾಮಾನ್ಯ ಖಾಸಗಿ ಉಡುಪುಗಳನ್ನು ಅನುಮತಿಸಬೇಕು. ಸಾಕಷ್ಟು ಸ್ವಂತ ಬಟ್ಟೆಗಳನ್ನು ಹೊಂದಿರದ ವಿಚಾರಣಾಧೀನ ಕೈದಿಗೆ ಸರ್ಕಾರಿ ವೆಚ್ಚದಲ್ಲಿ ನಿಗದಿತ ಪ್ರಮಾಣದಲ್ಲಿ ಅದನ್ನು ಒದಗಿಸಬಹುದು. ವಿಚಾರಣಾಧೀನ ಕೈದಿಯು ಬಿಡುಗಡೆಯಾದ ನಂತರವೂ ಅಂತಹ ಉಡುಪುಗಳನ್ನು ಉಳಿಸಿಕೊಳ್ಳಲು ಅನುಮತಿಸಬಹುದು.

ಬೆಳಗ್ಗೆ,ಸಂಜೆ ವಾಕಿಂಗ್‌ ಮಾಡಲು ಅವಕಾಶ

ಆರೋಪಿಗಳಿಗೆ ಇಲಾಖೆಯಿಂದ ಕಾರ್ಪೆಟ್, ಚಾಧರ/ಕಂಬಳಿ, ಬೆಡ್ ಶೀಟ್, ಪ್ಲೇಟ್, ಮಗ್ (ಚಂಬು), ಬೌಲ್, ಟಂಬ್ಲರ್ ಒದಗಿಸಲು ಅವಕಾಶವಿದೆ. ಸೆ.9ರಂದು ಕೋರ್ಟ್ ಆದೇಶದ ಬಳಿಕ ಬೆಳಗ್ಗೆ,ಸಂಜೆ ವಾಕಿಂಗ್‌ ಮಾಡಲು ಅವಕಾಶ ಕೊಡಲಾಗುತ್ತಿದೆ. ದಿನಪತ್ರಿಕೆ, ಪುಸ್ತಕ ಒದಲು ಸೌಲಭ್ಯವಿದೆ. ಕಾರಾಗೃಹದ ವೈದ್ಯಾಧಿಕಾರಿಗಳಿಂದ ಆರೋಗ್ಯ ತಪಾಸಣೆ ನಡೆಯುತ್ತದೆ. ಕ್ಯಾಂಟೀನ್‌, ಬೇಕರಿ ಸೌಲಭ್ಯವಿದೆ ಎಂಬುದು ಸೇರಿ ಜೈಲಾಧಿಕಾರಿಗಳು ವಿವರಣೆಯನ್ನು ಕೋರ್ಟಿಗೆ ಸಲ್ಲಿಕೆ ಮಾಡಿದ್ದಾರೆ.

ಈ ನಡುವೆ ಜೈಲಿಗೆ ಭೇಟಿ ನೀಡಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು, ಆರೋಪಿಗಳಿದ್ದ ಸೆಲ್‌ಗೆ ಭೇಟಿ ಕೊಟ್ಟು ನೀಡಿದ ವರದಿ ನೀಡಿದ್ದಾರೆ. ಆರೋಪಿಗಳಿದ್ದ ಸೆಲ್‌ನಲ್ಲಿ ಎರಡು ಸಿಸಿ ಕ್ಯಾಮೆರಾ ಇದೆ. ದಿಂಬು ಕೊಟ್ಟಿಲ್ಲ, ಚಾದರ ಮಾತ್ರ ನೀಡಲಾಗಿದ್ದು ಅದು ಹರಿದಿದೆ ಎಂದು ಗಮನಿಸಿದ್ದಾರೆ. ಜತೆಗೆ ದರ್ಶನ್‌ ಅವರು ಕೈ ಬೆರಳಿನ ನೋವಿನ ಬಗ್ಗೆ ಕನ್ನಡಿ, ಬಾಚಣಿಕೆ, ಸೊಳ್ಳೆಬತ್ತಿ ನೀಡದ ಬಗ್ಗೆ ಈ ವೇಳೆ ದೂರಿದ್ದಾಗಿ ತಿಳಿಸಿದ್ದಾರೆ. ಜತೆಗೆ ಜೈಲಿನ ನಿಯಮ ಮೀರಿರುವುದಾಗಿ ಗಮನಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಹಿಂದೆ ದರ್ಶನ್‌, ನನ್ನನ್ನು ಕ್ವಾರಂಟೈನ್‌ ಸೆಲ್‌ನಲ್ಲೇ ಇರಿಸಲಾಗಿದೆ. ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ನನ್ನ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಾಸವಾಗಿದೆ. ಈ ಹಿಂದೆ ನ್ಯಾಯಾಲಯವು ನೀಡಿದ್ದ ಆದೇಶಕ್ಕೂ ಜೈಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ. ಜೈಲಿನಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು.

ಏನಿದು ಪ್ರಕರಣ?

- ಕೋರ್ಟ್‌ ಆದೇಶದ ಬಳಿಕವೂ ಜೈಲಲ್ಲಿ ಪ್ರಾಥಮಿಕ ಸೌಲಭ್ಯವಿಲ್ಲ ಎಂದು ದರ್ಶನ್‌ ದೂರಿದ್ದರು

- ಹಾಸಿಗೆ-ದಿಂಬು ನೀಡುತ್ತಿಲ್ಲ ಎಂದು ದರ್ಶನ್‌ ಹಾಗೂ ಇತರ ಆರೋಪಿಗಳು ಅರ್ಜಿ ಸಲ್ಲಿಸಿದ್ದರು

- ಕ್ವಾರಂಟೈನ್‌ ಸೆಲ್‌ನಲ್ಲಿ ಇಡಲಾಗಿದೆ, ಸಾಮಾನ್ಯ ಸೆಲ್‌ಗೆ ಹಾಕಿಲ್ಲ ಎಂದು ಆಕ್ಷೇಪಿಸಿದ್ದರು

- ಕೆಲವು ಬೇಡಿಕೆ ಬಗ್ಗೆ ಕೋರ್ಟ್‌ ಬಾಗಶಃ ಒಪ್ಪಿಗೆ. ಚಾದರ, ಹೊಸ ಬಟ್ಟೆ ನೀಡಲು ಆದೇಶ

- ಕ್ವಾರಂಟೈನ್‌ ಸೆಲ್‌ನಿಂದ ಸಾಧ್ಯವಿದ್ದರೆ ಬೇರೆ ಸೆಲ್‌/ಬ್ಯಾರಕ್‌ಗೆ ವರ್ಗಾಯಿಸಲು ಸೂಚನೆ