ಜೈಲಲ್ಲಿ ನಟ ದರ್ಶನ್‌ ಉಗ್ರರಿಗಿಂತ ಕಡೆ: ವಕೀಲ

| Published : Sep 18 2025, 01:10 AM IST

ಸಾರಾಂಶ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಅವರನ್ನು ಬಂಧಿಸಿಟ್ಟಿರುವ ಸೆಲ್‌ ಪಕ್ಕದಲ್ಲಿಯೇ ಪಾಕಿಸ್ತಾನದ ಉಗ್ರರ ಸೆಲ್‌ ಇದೆ. ಉಗ್ರರಿಗೆ ಕೇರಂ ಬೋರ್ಡ್‌ ಹಾಗೂ ಟಿವಿ ಸೇರಿದಂತೆ ಎಲ್ಲಾ ಐಷಾರಾಮಿ ಸೌಲಭ್ಯ ನೀಡಿದ್ದಾರೆ. ಆದರೆ, ನಟ ದರ್ಶನ್‌ಗೆ ಮಾತ್ರ ಹಾಸಿಗೆ, ಹೊದಿಕೆ ಮತ್ತು ತಲೆದಿಂಬು ನೀಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಅವರನ್ನು ಬಂಧಿಸಿಟ್ಟಿರುವ ಸೆಲ್‌ ಪಕ್ಕದಲ್ಲಿಯೇ ಪಾಕಿಸ್ತಾನದ ಉಗ್ರರ ಸೆಲ್‌ ಇದೆ. ಉಗ್ರರಿಗೆ ಕೇರಂ ಬೋರ್ಡ್‌ ಹಾಗೂ ಟಿವಿ ಸೇರಿದಂತೆ ಎಲ್ಲಾ ಐಷಾರಾಮಿ ಸೌಲಭ್ಯ ನೀಡಿದ್ದಾರೆ. ಆದರೆ, ನಟ ದರ್ಶನ್‌ಗೆ ಮಾತ್ರ ಹಾಸಿಗೆ, ಹೊದಿಕೆ ಮತ್ತು ತಲೆದಿಂಬು ನೀಡುತ್ತಿಲ್ಲ.

ಹೀಗೆಂದು ನಟ ದರ್ಶನ್ ಪರ ವಕೀಲ ಎಸ್‌.ಸುನೀಲ್‌ ಕುಮಾರ್‌ ಬುಧವಾರ ನ್ಯಾಯಾಲಯದ ಮುಂದೆ ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ವಿರುದ್ಧ ಆರೋಪ ಮಾಡಿದರು.

ನ್ಯಾಯಾಲಯ ಆದೇಶ ನೀಡಿದ್ದರೂ ದರ್ಶನ್‌ ಅವರಿಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯವನ್ನು ಜೈಲಧಿಕಾರಿಗಳು ಕಲ್ಪಿಸುತ್ತಿಲ್ಲ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಹೂಡಲು ಶಿಫಾರಸು ಮಾಡಬೇಕು ಎಂದು ಕೋರಿ ದರ್ಶನ್‌ ಪರ ವಕೀಲರು ನಗರದ 64ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ಕೋರ್ಟ್‌ಗೆ ಮೆಮೊ ಸಲ್ಲಿಸಿದ್ದಾರೆ. ಬುಧವಾರ ಈ ಕುರಿತು ನ್ಯಾಯಾಧೀಶ ಐ.ಪಿ. ನಾಯ್ಕ್‌ ಅವರು ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಜೈಲು ಅಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ದರ್ಶನ್‌ಗೆ ಜೈಲಿನಲ್ಲಿ ಕನಿಷ್ಠ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಈ ವಾದಕ್ಕೆ ತೀವ್ರವಾಗಿ ಆಕ್ಷೇಪಿಸಿದ ದರ್ಶನ್‌ ಪರ ವಕೀಲ ಸುನೀಲ್‌ ಕುಮಾರ್‌, ನ್ಯಾಯಾಲಯದ ಆದೇಶದ ಬಳಿಕ ದರ್ಶನ್‌ಗೆ ಯಾವುದೇ ಸೌಲಭ್ಯ ನೀಡಿಲ್ಲ. ಮೇಲಾಗಿ ಭದ್ರತೆ ಹೆಸರಿನಲ್ಲಿ ದರ್ಶನ್‌ ಅವರನ್ನು ಕ್ವಾರಂಟೈನ್ ಮಾಡಿ, ಕಿರುಕುಳ ನೀಡಲಾಗುತ್ತಿದೆ. ದರ್ಶನ್‌ ಪಕ್ಕದ ಸೆಲ್‌ನಲ್ಲಿ ಪಾಕಿಸ್ತಾನದ ಉಗ್ರರು ಇದ್ದಾರೆ. ಅವರಿಗೆ ಐಷಾರಾಮಿ ಸೌಲಭ್ಯಗಳನ್ನು ಜೈಲು ಅಧಿಕಾರಿಗಳು ಕಲ್ಪಿಸಿದ್ದಾರೆ. ಈ ಕುರಿತ ವಿಡಿಯೋಗಳಿದ್ದು, ಅವುಗಳನ್ನು ನ್ಯಾಯಾಲಯಕ್ಕೆ ನೀಡಲು ಸಿದ್ಧನಿದ್ದೇನೆ ಎಂದು ಬಲವಾಗಿ ವಾದಿಸಿದರು.ಅಲ್ಲದೆ, ಕಾರಾಗೃಹಗಳ ಕೈಪಿಡಿ ಅನುಸಾರ ದರ್ಶನ್‌ಗೆ ಕನಿಷ್ಠ ಸೌಲಭ್ಯ ಕಲ್ಪಿಸಬೇಕು ಎಂದು ನ್ಯಾಯಾಲಯವೇ ಜೈಲಧಿಕಾರಿಗಳಿಗೆ ನಿರ್ದೇಶಿಸಿದೆ. ಈ ಆದೇಶವನ್ನು ಜೈಲಧಿಕಾರಿಗಳು ಪಾಲಿಸುತ್ತಿಲ್ಲ. ಮೇಲಾಗಿ ಕೋರ್ಟ್ ಆದೇಶವನ್ನೂ ಹಗುರವಾಗಿ ಪರಿಗಣಿಸಿದ್ದಾರೆ. ಅಗತ್ಯವೆಂದು ಭಾವಿಸಿದರೆ, ಏನೆಲ್ಲಾ ಸೌಲಭ್ಯಗಳನ್ನು ಜೈಲಧಿಕಾರಿಗಳು ನೀಡಿದ್ದಾರೆ ಎಂಬ ಬಗ್ಗೆ ದರ್ಶನ್‌ ಅವರಿಂದಲೇ ಮಾಹಿತಿ ಪಡೆಯಿರಿ ಎಂದು ನ್ಯಾಯಾಧೀಶರನ್ನು ಕೋರಿದರು.ಈ ವಾದಕ್ಕೆ ಉತ್ತರಿಸಿದ ಸರ್ಕಾರಿ ಅಭಿಯೋಜಕರು, ಕಾರಾಗೃಹಗಳ ಕೈಪಿಡಿ ಅನುಸಾರ ಎಲ್ಲಾ ಸೌಲಭ್ಯ ನೀಡಲಾಗಿದೆ. ಆ ಸಂಬಂಧ ನ್ಯಾಯಾಲಯವು ವರದಿ ಕೇಳಿತ್ತು. ವರದಿಯನ್ನು ನೀಡಲಾಗಿದೆ. ಇನ್ನು ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲೂ ದರ್ಶನ್‌ಗೆ ಅವಕಾಶ ನೀಡಲಾಗಿದೆ. ಕ್ವಾರಂಟೈನ್ ರೂಲ್ ಪ್ರಕಾರ ಜೈಲಿನಲ್ಲಿ ಇಡಲಾಗಿದೆ ಎಂದು ತಿಳಿಸಿದರು.

ದರ್ಶನ್‌ ಪರ ವಕೀಲರು ಉತ್ತರಿಸಿ, ಕೋವಿಡ್-19 ಸಮಯದಲ್ಲಿ ಮಾತ್ರ ಕ್ವಾರಂಟೈನ್ ನಿಯಮವಿತ್ತು. ಈಗ ಏಕೆ ಕ್ವಾರಂಟೈನ್‌ ನಿಯಮ ಬೇಕಿದೆ? ಕುಟುಂಬದ ಸದಸ್ಯರ ಹಾಗೂ ವಕೀಲರ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದು ದೊಡ್ಡ ವಿಚಾರವಲ್ಲ. ಹಾಸಿಗೆ, ತಲೆದಿಂಬು, ಹೊದಿಕೆ, ಬಟ್ಟೆ ಕಲ್ಪಿಸಲಾಗಿದೆ ಎಂಬ ಬಗ್ಗೆ ಜೈಲು ಅಧಿಕಾರಿಗಳು ಹೇಳುತ್ತಿಲ್ಲ. ಜೈಲಧಿಕಾರಿಗಳು ಬರೆದುಕೊಂಡು ಬಂದು ವಾದ ಮಾಡಬಹುದು. ಆದರೆ, ವಾಸ್ತವ ಸಂಗತಿ ಏನೆಂಬುದನ್ನು ನ್ಯಾಯಾಲಯ ಪರಿಶೀಲನೆ ನಡೆಸಬೇಕು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು.

ಅಲ್ಲದೆ, ಹೊಸ ಆರೋಪಿ, ಅಪರಾಧಿ ಜೈಲಿಗೆ ಬಂದಾಗ 14 ದಿನ ಮಾತ್ರ ಕ್ವಾರಂಟೈನ್ ನಲ್ಲಿ ಇಡಬೇಕು. ನಂತರ ಆರೋಗ್ಯ ತಪಾಸಣೆ ನಡೆಸಿ ಸಾಮಾನ್ಯ ಸೆಲ್‌ಗೆ ವರ್ಗಾಯಿಸಬೇಕು. ಪವಿತ್ರಾಗೌಡ ಹೊರತುಪಡಿಸಿ ದರ್ಶನ್‌ ಸಹಿತ ಪ್ರಕರಣದ ಉಳಿದೆಲ್ಲಾ ಆರೋಪಿಗಳನ್ನು ಒಂದು ತಿಂಗಳಿಂದಲೂ ಕ್ವಾರಂಟೈನ್ ಸೆಲ್‌ನಲ್ಲಿಯೇ ಇಡಲಾಗಿದೆ. ಭದ್ರತೆ ಹೆಸರಿನಲ್ಲಿ ಆರೋಪಿಗಳ ಸುತ್ತ ಕ್ಯಾಮೆರಾ ಅಳವಡಿಸಲಾಗಿದೆ. ಆ ಮೂಲಕ ಹೆಚ್ಚಿನ ಕಿರುಕುಳ ನೀಡಲಾಗಿದೆ. ಬೇರೆ ಪ್ರಕರಣದ ಆರೋಪಿಗಳನ್ನು ಎಷ್ಟು ತಿಂಗಳು? ಎಷ್ಟು ಗಂಟೆ ಕ್ವಾರಂಟೈನ್ ನಲ್ಲಿ ಇಡಲಾಗಿದೆ? ಜೈಲು ಸೇರಿದ ಶಾಸಕರು, ಸಂಸದರ ಪೈಕಿ ಯಾರೊಬ್ಬರನ್ನೂ 14 ದಿನಕ್ಕಿಂತ ಹೆಚ್ಚು ದಿನ ಕ್ವಾರಂಟೈನ್ ನಲ್ಲಿ ಇಟ್ಟಿಲ್ಲ. ಈ ಬಗ್ಗೆ ಆರ್‌ಟಿಐನಲ್ಲಿ ಮಾಹಿತಿ ಕೇಳಲಾಗಿದೆ ಎಂದು ಆಕ್ರೋಶಭರಿತವಾಗಿ ನುಡಿದರು.