ಅನಾರೋಗ್ಯಕ್ಕೆ ತುತ್ತಾದ ಜಾನುವಾರಿಗೆ ಉಚಿತ ಚಿಕಿತ್ಸೆ: ಎನ್‌.ಟಿ.ಶೇಷಾಚಲ

| Published : Sep 18 2025, 01:10 AM IST

ಅನಾರೋಗ್ಯಕ್ಕೆ ತುತ್ತಾದ ಜಾನುವಾರಿಗೆ ಉಚಿತ ಚಿಕಿತ್ಸೆ: ಎನ್‌.ಟಿ.ಶೇಷಾಚಲ
Share this Article
  • FB
  • TW
  • Linkdin
  • Email

ಸಾರಾಂಶ

ಜಾನುವಾರು ಅನಾರೋಗ್ಯಕ್ಕೆ ತುತ್ತಾದಲ್ಲಿ ಸಹಾಯವಾಣಿ 1962 ಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಮುಖಾಂತರ ಮನೆ ಬಾಗಿಲಿಗೆ ಬಂದು ಉಚಿತ ಸೇವೆ ನೀಡಲಾಗುತ್ತದೆ ಎಂದು ಪಶು ವೈದ್ಯ ಇಲಾಖೆ ಪಸು ಪರೀಕ್ಷಕ ಎನ್‌.ಟಿ.ಶೇಷಾಚಲ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಜಾನುವಾರು ಅನಾರೋಗ್ಯಕ್ಕೆ ತುತ್ತಾದಲ್ಲಿ ಸಹಾಯವಾಣಿ 1962 ಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಮುಖಾಂತರ ಮನೆ ಬಾಗಿಲಿಗೆ ಬಂದು ಉಚಿತ ಸೇವೆ ನೀಡಲಾಗುತ್ತದೆ ಎಂದು ಪಶು ವೈದ್ಯ ಇಲಾಖೆ ಪಸು ಪರೀಕ್ಷಕ ಎನ್‌.ಟಿ.ಶೇಷಾಚಲ ಮಾಹಿತಿ ನೀಡಿದರು.

ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿ ಸೋಮವಾರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಆಡಳಿತ ಮಂಡಳಿ ಸಭೆಯಲ್ಲಿ ಮಾಹಿತಿ ನೀಡಿದರು.

ಜಾನುವಾರು ಆಕಸ್ಮಿಕ ಮರಣಹೊಂದಿದರೆ 15 ಸಾವಿರ ರು., ಕುರಿಗಳು ಮರಣ ಹೊಂದಿದರೆ 7,500 ರು. ಪರಿಹಾರ ನೀಡಲು ಅವಕಾಶವಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಪಿ.ರಮೇಶ್ ಮಾತನಾಡಿ, ಹಾತೂರು ಗ್ರಾಮದಲ್ಲಿ ಜಾನುವಾರಿಗೆ ಮಿಂಚು ಕಾಯಿಲೆ ಬಂದು ಸಹಾಯವಾಣಿ 1962 ಗೆ ಕರೆ ಮಾಡಿದಾಗ ಸ್ಪಂದಿಸಲಿಲ್ಲ. ಅಂಬುಲೆನ್ಸ್ ಅವರ ನಿರ್ಲಕ್ಷ್ಯದಿಂದ ಕೊಪ್ಪಕ್ಕೆ ಸ್ವಂತ ಖರ್ಚಿನಲ್ಲಿ ಜಾನುವಾರು ಕರೆದುಕೊಂಡು ಹೋಗಿ ಗ್ರಾಮಸ್ಥರು ಚಿಕಿತ್ಸೆ ಕೊಡಿಸಿದ್ದಾರೆ ಎಂದರು. ಸಭೆಯಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಯಿತು.

ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನ ವ್ಯವಸ್ಥಾಪಕ ಪ್ರದ್ಯುಮ್ನ ಮಾಹಿತಿ ನೀಡಿ, ಬ್ಯಾಂಕಿನಿಂದ ರೈತರಿಗೆ 2.45 ಕೋಟಿ ರು.ಗೂ ಅಧಿಕ ಸಾಲ ನೀಡಲಾಗಿದೆ. ಫೆಬ್ರವರಿಯಿಂದ ಸಾಲ ವಸೂಲು ಮಾಡಲಾಗುತ್ತದೆ ಎಂದರು. ರೈತರಿಗೆ ದೀರ್ಘಾವಧಿ ಸಾಲವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಪ್ರತಿನಿಧಿ ಪಿ.ಕೆ.ಬಸವರಾಜಪ್ಪ ಸಲಹೆ ನೀಡಿದರು. ಪಿಸಿಎಆರ್‌ಡಿ ಬ್ಯಾಂಕಿನ ವ್ಯವಸ್ಥಾಪಕ ಪ್ರದ್ಯುಮ್ನ ಉತ್ತರಿಸಿ ನಬಾರ್ಡ್ ಮಾರ್ಗ ಸೂಚಿಯಂತೆ ಹಂತ ಹಂತವಾಗಿ ಸಾಲ ಬಿಡುಗಡೆ ಮಾಡಬೇಕಾಗುತ್ತದೆ ಎಂದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ರೋಹಿತ್ ಮಾಹಿತಿ ನೀಡಿ, ಕೃಷಿ ಯಂತ್ರೋಪಕರಣ ಯೋಜನೆಯಡಿ ಅಡಕೆ ಸುಲಿಯುವ ಯಂತ್ರ, ಗೊರಬಲು ಪಾಲಿಶರ್ ಮತ್ತಿತರ ಯಂತ್ರೋಪಕರಣಗಳಿಗೆ ಸಹಾಯಧನ ಲಭ್ಯವಿದೆ. ಎಸ್.ಸಿ, ಎಸ್.ಟಿ ಹಾಗೂ ಮಹಿಳೆಯರಿಗೆ ಶೇ.50ರಷ್ಟು ಹಾಗೂ ಸಾಮಾನ್ಯ ರೈತರಿಗೆ ಶೇ.40 ಸಹಾಯಧನ ನೀಡಲಾಗುವುದು 45 ಜೇನು ಪೆಟ್ಟಿಗೆ ನೀಡಲು ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.

ಮೀನುಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡಿ, ರಾಜ್ಯ ಮತ್ತು ಜಿಲ್ಲಾ ವಲಯದಿಂದ ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ 10 ಸಾವಿರ ರು. ಮೌಲ್ಯದ ಬಲೆ ಮತ್ತು ದೋಣಿ ಸೌಲಭ್ಯ ನೀಡಲು ಅವಕಾಶವಿದೆ. ಮೀನು ವ್ಯಾಪಾರ ಮಾಡುವವರು 75 ಸಾವಿರ ರು.ನ ದ್ವಿಚಕ್ರ ವಾಹನ ಖರೀದಿಸಿದರೆ 30 ಸಾವಿರ ರು. ಸಹಾಯಧನ ನೀಡಲಾಗುವುದು. ಇಲಾಖೆಯಿಂದ ಕೃಷಿ ಹೊಂಡ ಮಾಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ, ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜಪ್ಪಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ನವೀನ್, ಖಜಾಂಚಿ ಬಿ.ಎಸ್.ಚೇತನ್, ಸದಸ್ಯರಾದ ಎಚ್.ಆರ್. ತಿಮ್ಮಯ್ಯ, ಎನ್.ಎಲ್.ತೀರ್ಥೇಶ್. ಎಚ್.ಎಂ.ನಾಗರಾಜ್, ಎಸ್.ಎನ್.ರಂಜಿತ್, ಎಂ.ವಿ.ಶ್ರೀನಿವಾಸ್ ಇದ್ದರು.